ಈ ನಮ್ಮ ದೇಶ ಭಾರತದ ಅದೆಷ್ಟೋ ಆಚಾರ ವಿಚಾರಗಳು, ಸಂಸ್ಕೃತಿ ಸಂಪ್ರದಾಯಗಳು ಇಡಿ ಜಗತ್ತಿನಲ್ಲೇ ಒಂದು ವೈಶಿಷ್ಟ್ಯ ಪೂರ್ಣವಾಗಿರುವಂತಹದ್ದು. ಇವುಗಳೇ ಭಾರತದ ಕುಟುಂಬ ಪದ್ಧತಿಯನ್ನು ಬಲಯುತಗೊಳಿಸಿ ವಿಶ್ವಕ್ಕೆ ಮಾದರಿಯಾಗುವಂತೆ ಮಾಡಿದೆ.
ಇಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ ಮತ್ತು ಭಾವನಾತ್ಮಕ ನೆಲೆ ಇದೆ. ಕುಟುಂಬ ಎಂದರೆ ಅದು ಸಂಬಂಧಗಳ ಆಗರ. ಆ ಸಂಬಂಧಗಳು ಸದಾ ಹಚ್ಚಹಸುರಾಗಿ ಅನ್ಯೋನ್ಯವಾಗಿರಬೇಕಾದರೆ ಆ ಸಂಬಂಧದ ವಿಶೇಷತೆಯನ್ನು ಸಾರುವ ಯಾವುದಾದರೊಂದು ಪ್ರಕ್ರಿಯೆ ನಡೆಯುತ್ತಲೇ ಇರಬೇಕು. ಆ ಕಾರಣಕ್ಕಾಗಿಯೆ ಭಾವನಾತ್ಮಕವಾಗಿ ಬೆಸೆಯುವ ಹಬ್ಬಗಳು ಜೀವ ಪಡೆದುಕೊಂಡವು. ಈ ಹಬ್ಬಗಳು ಮನೆಯ ತುಂಬಾ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿ ಮನಸ್ಸುಗಳನ್ನು ಬೆಸೆಯುವಂತೆ ಪ್ರೇರೇಪಿಸುತ್ತದೆ. ಇಂತಹ ಹಬ್ಬಗಳ ಲೋಕದಲ್ಲಿ ರಕ್ಷ ಬಂಧನವೂ ಅರ್ಥಪೂರ್ಣವಾದುದು.
ರಕ್ಷಾಬಂಧನ ಸಹೋದರ ಸಹೋದರಿಯರ ನೆಚ್ಚಿನ ಹಬ್ಬ. ಭಾರತೀಯ ಪರಂಪರೆಯನುಸಾರ ಶ್ರಾವಣ ಪೂಣಿರ್ಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಗತ್ತಿನ ಸೃಷ್ಟಿಯಲ್ಲೇ ಅಣ್ಣ ತಂಗಿಯ ಸಂಬಂಧ ಅರ್ಥಗರ್ಭಿತವಾದುದು. ಈ ಸಂಬಂಧದ ಸಂಕೋಲೆ ಕೇವಲ ಮನುಜರ ನಡುವೆ ಮಾತ್ರವಲ್ಲದೇ ದೇವಾನು ದೇವತೆಗಳ ನಡುವೆಯೂ ಅಸ್ತಿತ್ವ ಪಡೆದಿದೆ. ತಂಗಿಯ ಪಾಲಿಗೆ ಅಣ್ಣನೇ ಶ್ರೀರಕ್ಷೆ.
ಈ ಜಗತ್ತಿನಲ್ಲಿ ಪ್ರತಿ ಹೆಣ್ಣೂ ಕೂಡ ತನಗೊಬ್ಬ ಅಣ್ಣ ಬೇಕು ಎಂಬ ಕನಸನ್ನು ಕಾಣುತ್ತಾಳೆ. ಯಾಕೆಂದರೆ ಆ ಒಂದು ಸಂಬಂಧವೇ ಹಾಗೆ ಮನಮೋಹಕ. ಅಣ್ಣ ತಂಗಿ ಜಗಳವಾಡದ ದಿನವಿರದಿದ್ದರೂ, ಮನದೊಳಗಿನ ಪ್ರೀತಿ ಮಾತ್ರ ಸದಾ ಹಸಿರು. ತಂಗಿಗೆ ನೋವಾದಾಗ ಎದ್ದು ನಿಲ್ಲುವ ಅಣ್ಣ, ಆಕೆಯ ಪ್ರತಿಯೊಂದು ಬೇಡಿಕೆಯನ್ನು ಆಕೆ ಕೇಳುವುದಕ್ಕೆ ಮೊದಲೇ ಪೂರೈಸಬೇಕೆಂದು ಹಂಬಲಿಸುತ್ತಾನೆ. ತಂಗಿಯೂ ಅಷ್ಟೇ ಪ್ರತಿ ಬಾರಿಯೂ ಅಣ್ಣನ ನೋವು ನಲಿವುಗಳಲ್ಲಿ ಒಂದಾಗಿ, ಅವನಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಬಹಳಷ್ಟು ಸಂದರ್ಭ ತಮ್ಮನೂ ಕೂಡ ಅಣ್ಣನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಈ ಹಬ್ಬವನ್ನು ರಕ್ಷಾಬಂಧನ ಎಂದು ಹೇಳುವ ಬದಲು ಸಹೋದರ ಸಹೋದರಿಯರ ಹಬ್ಬ ಎಂದರೆ ಹೆಚ್ಚು ಸೂಕ್ತ.
ಪರಂಪರಾನುಗತದಿಂದ ಆಚರಣೆಯಾಗುತ್ತಾ ಬಂದ ಈ ಹಬ್ಬ ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಲಿ. ಮನದಲ್ಲಿ ಮನಸ್ತಾಪವೆಂಬ ಅಂಧಕಾರ ಮೂಡಿದ್ದರೆ, ಅದನ್ನು ದೂರ ಮಾಡಿ ಮತ್ತೆ ಪ್ರೀತಿಯ ಬಂಧ ಬೆಸೆಯುವಂತಾಗಲಿ.
ಈ ಲೇಖನ ಸದಾ ನನಿಗೆ ಬೆಂಗಾವಲಾಗಿ ನಿಂತು ಅಪರಿಮಿತ ಪ್ರೀತಿಯನ್ನು ತೋರಿದ ನನ್ನ ಪ್ರೀತಿಯ ಅಣ್ಣಂದಿರಿಗೆ ಹಾಗೂ ತಮ್ಮನಿಗೆ ಅರ್ಪಿತಾ ಎನ್ನಲು ಮನ ಮುದಗೊಳ್ಳುತ್ತಿದೆ.
ಸಾಯಿ ಶ್ರೀಪದ್ಮ ಡಿ.ಎಸ್.