“ಅಣ್ಣನ ಬಣ್ಣನೆ ತುಸು ಕಷ್ಟ ಎಂದವರಿಗೆ, ಮುದ್ದಿನ ತಂಗಿಯು ಮೆಲ್ಲನೆ ಬಂದು ‘ನಾ’ ಬಲ್ಲೆ ಎಂದಳಂತೆ” ಅಪರಂಜಿಯಂತಹ ಅಣ್ಣನ ಪ್ರೀತಿಯನ್ನು ತಂಗಿಗಿಂತಲೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ. ಅಣ್ಣನೆಂದರೆ ಆಕಾಶದಷ್ಟು ವಿಶಾಲ ಹೃದಯಿ, ಅಪ್ಪನೆದೆಯ ಭಾರಕ್ಕೆ ಹೆಗಲು ನೀಡುವ ಕರುಣಾಮಯಿ. ಅಣ್ಣನೆಂಬವನು ಮನೆಗೆ ಜ್ಯೇಷ್ಠನಾಗಿ ಮುದ್ದಿನ ಕೂಸಾಗಿ ಬೆಳೆದಿದ್ದರೂ, ತನ್ನ ಅನುಸರಿಸಿ ಜನಿಸಿದ ಅನುಜೆಗೆ ತನ್ನೆಲ್ಲ ಆಟಿಕೆಯಲಿ ಪಾಲು ಕೊಟ್ಟ ಕರ್ಣ ಅಣ್ಣನೆ ತಾನೆ. ಪುಟ್ಟ ರಾಕ್ಷಸಿಯಂತೆ ಕಿತ್ತಾಡುತ್ತ, ನೋಡಿದೆಲ್ಲವು ಬೇಕೇಂದು ರಚ್ಚೆ ಹಿಡಿದು ಅಳುವ ಹಕ್ಕು ತಂಗಿಯದು ಮಾತ್ರ.
ಅಮ್ಮ ತಂದಿಟ್ಟ ತಿಂಡಿಯಲ್ಲಿ ತಂಗಿಯದೇ ಸಿಂಹಪಾಲು,ಟಿ.ವಿ ರಿಮೋಟಿಗೂ ಅವಳದೇ ತಕರಾರು.ಮನೆಯೆಂಬ ಅರಮನೆಗೆ ತಂಗಿಯೇ ರಾಜಕುಮಾರಿ! ಅವಳು ಹೇಳಿದ ನ್ಯಾಯವೇ ಸರಿ. ಒಮ್ಮೆ ಜಗಳ ಮತ್ತೊಮ್ಮೆ ಪ್ರೀತಿ, ಒಮ್ಮೆ ಕೋಪ ಮತ್ತೊಮ್ಮೆ ಸ್ನೇಹ ಈ ಅಪರೂಪದ ಭಾಂಧವ್ಯದ ಸಿಹಿ ಸವಿದವರಿಗಷ್ಟೆ ಗೊತ್ತು. ನಮ್ಮ ನಡುವೆಯೆ ಅದೇಷ್ಟೋ ಸಹೃದಯಿ ಅಣ್ಣಂದಿರಿದ್ದಾರೆ. ಜಗತ್ತಿನ ಕಾಮದ ಕಣ್ಣು ತನ್ನ ತಂಗಿಗೆ ಸೋಕದಿರಲೆಂದು ನಿಗಾ ವಹಿಸುವ ರಕ್ಷಕನಂತಿದ್ದಾರೆ. ಹಾದಿ ತಪ್ಪಿದ ತಂಗಿಯರಿಗೆ ಕಿವಿ ಹಿಂಡಿ ತಿದ್ದಿ ಬುದ್ದಿ ಹೇಳುವ ಶಿಕ್ಷಕರಂತಿದ್ದಾರೆ.
ರಕ್ಷಾಬಂಧನ ಕಟ್ಟಲು ನನಗೆ ಒಬ್ಬಳಾದರೂ ತಂಗಿ ಇರಬಾರದಿತ್ತೆ! ಎಂದು ಅಳುವ ಅಣ್ಣಂದಿರು ಇರುತ್ತಾರೆ. ದೂರದ ಊರುಗಳಲ್ಲಿ ಅಲ್ಪಸಂಬಳಕೆ ದುಡಿದು,ಅರೆ ಹೊಟ್ಟೆಯಲಿ ಮಲಗಿ, ತಂಗಿ ಮದುವೆಯ ಸಾಲಕ್ಕೆ ಜೀವನ ಪರ್ಯಂತ ದುಡಿಯುವವರಿದ್ದಾರೆ. ಹೆಂಡತಿ ಬಂದ ಮೇಲೆ ಅಣ್ಣ ಬದಲಾದ ಎಂಬ ಚುಚ್ಚು ಮಾತುಗಳನ್ನ ಸಹಿಸಿಕೊಂಡು ತಂಗಿ ಮಗುವಿಗೆ ಮಾವನಾಗಿ, ಅವಳ ಕಷ್ಟಕೆ ನೆರವಾಗುತ್ತ ,ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಮುಗ್ಧ ಅಣ್ಣಂದಿರು ನಮ್ಮ ನಡುವೆಯೆ ಇದ್ದಾರೆ.
ಅಂತಹ ತಾಯಿ ಮನಸ್ಸಿನ ಅಣ್ಣಂದಿರಿಗೆ ರಕ್ಷಾಬಂಧನದ ಶುಭಾಶಯ.….
ದೇವರ ರಕ್ಷೆ ಇರಲಿ ಎಂಬುದೆನ್ನ ಆಶಯ…....
ಶರಣ್ಯ ಬೆಳುವಾಯಿ