ಬೆಂಗಳೂರು: ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಹಾಗೂ ಉದ್ಯಮಿಗಳಾದ ಕೆ.ಪ್ರಕಾಶ್ ಶೆಟ್ಟಿ ಮತ್ತು ಡಾ.ವಿಜಯ್ ಸಂಕೇಶ್ವರ್ ಅವರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ಬೆಂಗಳೂರಿನ ವಿಜಯನಗರ ನಿವಾಸಿ ಕೇಶವ ಗೋಪಾಲ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗುರುವಾರ ನೋಟಿಸ್ ಜಾರಿಗೆ ಆದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡುವಲ್ಲಿ ಸರ್ಕಾರ ಮಾರ್ಗಸೂಚಿ ಪಾಲಿಸಿಲ್ಲ. ಪ್ರಶಸ್ತಿ ಪರಿಶೀಲನಾ ಸಮಿತಿ ಸದಸ್ಯರಾಗಿದ್ದ ನಿರುಪಮಾ ರಾಜೇಂದ್ರನ್ ಪ್ರಭಾವದಿಂದ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್‌ಗೆ ಪ್ರಶಸ್ತಿ ನೀಡಲಾಗಿದೆ. ಉದ್ಯಮಿ ಡಾ. ವಿಜಯ ಸಂಕೇಶ್ವರ್ ರಾಜಕೀಯ ಪಕ್ಷಕ್ಕೆ ಸೇರಿದವರು. ಉದ್ಯಮಿಗೆ ಪ್ರಶಸ್ತಿ ನೀಡಲು ಅವಕಾಶವಿಲ್ಲ. ಕೇವಲ ವ್ಯಕ್ತಿಯು ಸಮಾಜಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಬೇಕಿದೆ. ಪ್ರಕಾಶ ಶೆಟ್ಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಆಪ್ತರು. ಇನ್ನೂ ಪ್ರಶಸ್ತಿಗೆ ಆಯ್ಕೆಯಾದ ಸುಮಾರು 30 ಮಂದಿ, ವಿವಿಧ ರಾಜಕಾರಣಿಗಳ ಆಪ್ತರಾಗಿದ್ದಾರೆ ಎಂದು ದೂರಿದರು.
ಅದಕ್ಕೆ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ರಚಿಸಲಾಗಿದ್ದ ಸಮಿತಿ ಮತ್ತದರ ಸದಸ್ಯರ ಪಟ್ಟಿ ಮತ್ತು ಅನುಸರಿಸಿದ ಮಾರ್ಗಸೂಚಿಗಳ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.