Advertisement

ಸಿತಾರ್‌ ಸಂಗೀತದ 6ನೇ ತಲೆಮಾರಿಗೆ ಪ್ರಶಸ್ತಿ ಗರಿ

10:21 AM Oct 29, 2019 | Suhan S |

ಧಾರವಾಡ: ಈ ವಂಶದಲ್ಲಿ ಹುಟ್ಟಿದ ಎಲ್ಲರ ತೊಡೆಯ ಮೇಲೂ ಸಿತಾರ್‌ ಆಸೀನವಾಗದೇ ಉಳಿದಿಲ್ಲ. ಈ ವಂಶದ ಕುಡಿಗಳಿಗೆ ರಕ್ತಗತವಾಗಿಯೇ ಬಂದಿದೆ ಸಿತಾರ್‌ ಸಂಗೀತ ವಾದನ.

Advertisement

ಇದು ಬರೋಬ್ಬರಿ 6ನೇ ತಲೆಮಾರು. ಅಂದರೆ 350 ವರ್ಷಗಳಿಂದಲೂ ಈ ಕುಟುಂಬದವರೆಲ್ಲರೂ ಸಿತಾರ್‌ ವಾದನದಲ್ಲಿಯೇ ತಮ್ಮ ಆಯುಷ್ಯ ಕಳೆದಿದ್ದಾರೆ. ಇದು ಮುಸ್ಲಿಂ ಕುಟುಂಬವಾದರೂ ಭಾರತೀಯ ಗುರುಕುಲ ಪದ್ಧತಿ ಮಾದರಿಯ ಸಂಗೀತಾಭ್ಯಾಸವೇ ಮೂಲಮಂತ್ರ. 64ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಕ್ಕಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಧಾರವಾಡದ ಮಾಳಮಡ್ಡಿಯ ನಿವಾಸಿ ಛೋಟೆ ರೆಹಮತ್‌ ಖಾನ್‌ ಅವರ ಕುಟುಂಬ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಇದು.

ರೆಹಮತ್‌ ಖಾನ್‌ ಕುಟುಂಬ ಗುಜರಾತ್‌ ರಾಜ್ಯದ ಭಾವನಗರ ಜಿಲ್ಲೆ ಮೂಲದ್ದಾಗಿದ್ದು, 1901ರಲ್ಲಿ ಧಾರವಾಡಕ್ಕೆ ಬಂದು ನೆಲೆಸಿದೆ. ಖಾನ್‌ ಅವರು ಹುಟ್ಟಿ, ಬೆಳೆದು, ಶಿಕ್ಷಣ ಪಡೆದುಕೊಂಡಿದ್ದು ಧಾರವಾಡದಲ್ಲಿ. ಆದರೆ ಕಳೆದ 30 ವರ್ಷಗಳಿಂದ ಅವರು ಸೇವೆ ಸಲ್ಲಿಸಿದ್ದು ಪಕ್ಕದ ಗೋವಾ ರಾಜ್ಯದ ಕಲಾ ಅಕಾಡೆಮಿಯಲ್ಲಿ ಸಿತಾರ್‌ ವಾದಕರಾಗಿ. ಇದೀಗ ಮತ್ತೆ ಧಾರವಾಡಕ್ಕೆ ಬಂದು ತಮ್ಮದೇ ಸಂಗೀತ ಸೇವೆ ಮುಂದುವರಿಸಿದ್ದಾರೆ. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಹೊಂದಿರುವ ಖಾನ್‌ ಅವರು ಸದ್ಯಕ್ಕೆ ಬೆಂಗಳೂರಿನ ತಮ್ಮ ಮಗನ ನಿವಾಸಕ್ಕೆ ಭೇಟಿ ಕೊಟ್ಟು ಅಲ್ಲಿಯೂ ಆಸಕ್ತರಿಗೆ ಸಂಗೀತ ಪಾಠ ಹೇಳುತ್ತಾರೆ.

ಬಾಲೆಖಾನ್‌ ಪರಂಪರೆ: ಉಸ್ತಾದ್‌ ಎಂದೇ ಖ್ಯಾತರಾಗಿರುವ ಸಿತಾರ್‌ ವಾದಕ ಪಂ| ಬಾಲೆಖಾನ್‌ ಅವರು ರೆಹಮತ್‌ ಖಾನ್‌ ಅವರ ಸಹೋದರ. ಪಂ| ಬಾಲೆಖಾನ್‌ ಸೇರಿ ಒಟ್ಟು 7 ಜನ ಸಹೋದರರು ಸಿತಾರ್‌ ಸಂಗೀತದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನಂತರದ ಅಂದರೆ 7ನೇ ತಲೆಮಾರಿನ 5 ಜನರು ಸಿತಾರ್‌ ವಾದನವನ್ನೇ ತಮ್ಮ ವೃತ್ತಿಜೀವನ ಮಾಡಿಕೊಂಡಿದ್ದಾರೆ. ಇದೀಗ 8ನೇ ತಲೆಮಾರಿನ ನಾಲ್ವರು ಮಕ್ಕಳು ಕೂಡ ಸಿತಾರ್‌ ಕಲಿಯುತ್ತಿದ್ದಾರೆ.

ಇಂತಹ ಕುಟುಂಬದ ಪಂ| ಛೋಟೆ ರೆಹಮತ್‌ ಖಾನ್‌ ಅವರು ಧಾರವಾಡದ ಸಿತಾರ್‌ ಸಂಗೀತ ಪರಂಪರೆಯ ಬಾಲೆಖಾನ್‌ ಕುಟುಂಬದ 6ನೇ ತಲೆಮಾರಿನವರು. ಪಂ| ಬಾಲೆಖಾನ್‌ ಅವರ ಸ್ವಂತತಮ್ಮ. 1987ರಲ್ಲಿಯೇ ಪಂ| ಬಾಲೆಖಾನ್‌ ಅವರಿಗೆ ಅಂದಿನ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಇದೇ ಕುಟುಂಬದಲ್ಲಿ ಎರಡನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸುತ್ತಿರುವುದು ಇಡೀ ಕುಟುಂಬ ಸದಸ್ಯರಿಗೆ ಹರ್ಷ ತಂದಿದೆ. ಧಾರವಾಡದಲ್ಲಿಯೇ ಸಣ್ಣದೊಂದು ಮನೆ ಕಟ್ಟಿಕೊಂಡು ಮುಂದಿನ ಪೀಳಿಗೆಗೆ ಸಿತಾರ್‌ ಸಂಗೀತ ಕಲಿಸುವ ಬಯಕೆ ಹೊಂದಿರುವ ರೆಹಮತ್‌ ಖಾನ್‌ ಅವರು ತಮ್ಮ ನಿವೃತ್ತಿ ಜೀವನವನ್ನು ಧಾರವಾಡದಲ್ಲಿಯೇ ಕಳೆಯಲು ಸಜ್ಜಾಗಿದ್ದಾರೆ.

Advertisement

ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗೋವಾ, ಪುಣೆ, ಕಲಕತ್ತಾ, ದೆಹಲಿ, ಲಕ್ನೋ, ತಂಜಾವೂರ, ಕನ್ಯಾಕುಮಾರಿ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಅವರು ತಮ್ಮ ಸಿತಾರ್‌ ಸಂಗೀತ ಪ್ರದರ್ಶನ ನೀಡಿದ್ದಾರೆ. ಅಷ್ಟೇಯಲ್ಲ, ಇಂಗ್ಲೆಂಡ್‌, ದುಬೈ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿಯೂ ಅವರ ಸಿತಾರ್‌ಗೆ ಜನ ತಲೆದೂಗಿದ್ದಾರೆ. ಎಷ್ಟೋ ಸಲ ಜನಜಾಗೃತಿಗಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವ ಅವರು ಸಿತಾರ್‌ ಸಂಗೀತದ ಗುರುಶಿಷ್ಯ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ.

ಧಾರವಾಡದಲ್ಲಿ ಸಾಮಾನ್ಯವಾಗಿ ಹಿಂದೂಸ್ತಾನಿ ಸಂಗೀತವೇ ಹೆಚ್ಚು ಜನಪ್ರಿಯ. ಉತ್ತರ ಹಿಂದೂಸ್ತಾನಿನಿಂದ ಬರುವವರಿಗೆ ಹಿಂದೂಸ್ತಾನಿ ಸಂಗೀತ ಪಾಠ ಹೇಳುವ ಧಾರವಾಡದಲ್ಲಿ ಸಿತಾರ್‌ ಸಂಗೀತದ ಗೂಡು ಕಟ್ಟಿ, ಅಲ್ಲಿಗೆ ಕಲಿಯಲು ಬರುವ ನೂರಾರು ಜನರಿಗೆ ಇಂದಿಗೂ ಸಿತಾರ್‌ ಸಂಗೀತವನ್ನು ಕಲಿಸುತ್ತಿರುವ ಬಾಲೆಖಾನ್‌ ಕುಟುಂಬದ ಸಂಗೀತ ಸೇವೆಯನ್ನು ಉತ್ತರ ಹಿಂದೂಸ್ತಾನಿನ ಸಂಗೀತ ಪರಂಪರೆಯ ಖಾನ್‌ದಾನಿ ಮನೆತನಗಳು ಇಂದಿಗೂ ನೆನಪಿಟ್ಟಿವೆ.

1959ರ ಜು. 4ರಂದು ಧಾರವಾಡದಲ್ಲಿ ಜನಿಸಿದ ಅವರು, ತಮ್ಮ ತಂದೆ ಪ್ರೊ| ಅಬ್ದುಲ್‌ ಕರೀಖಾನ್‌ ಅವರಿಂದಲೇ ಸಿತಾರ್‌ ಅಭ್ಯಾಸ ಮಾಡಿದರು. ತಮ್ಮ 10ನೇ ವಯಸ್ಸಿನಲ್ಲಿಯೇ ಸಿತಾರ್‌ನ ತಂತಿಗಳನ್ನು ಮೀಟಿದವರು. ಅವರ ಬೆರಳುಗಳ ತುಡಿತಕ್ಕೆ ಹೊಮ್ಮಿದ ನಾದದಿಂದ ದೆಹಲಿ, ಲಕ್ನೋ, ರಾಜಸ್ತಾನ, ಗುಜರಾತ್‌, ಮಹಾರಾಷ್ಟ್ರ, ಕೋಲ್ಕತ್ತಾ ಸೇರಿದಂತೆ ಅನೇಕ ಕಡೆಗಳಿಂದ ಈಗಲೂ ಧಾರವಾಡಕ್ಕೆ ಸಂಗೀತ ಕಲಿಯಲು ಬರುವವರಲ್ಲಿ ಎಷ್ಟೋ ಜನ ಸಿತಾರ್‌ ಮೋಹಕ್ಕೂ ಒಳಗಾಗಿದ್ದಾರೆ. ಅದಕ್ಕೆ ಕಾರಣವೇ ಪಂ| ಬಾಲೆಖಾನ್‌ ಕುಟುಂಬದ ಸಿತಾರ್‌ ಸಂಗೀತ ಪರಂಪರೆ. ಇಂತಿರುವ ಈ ಕುಟುಂಬಕ್ಕೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಧಾರವಾಡವನ್ನೇ ತನ್ನ ನೆಲೆಯಾಗಿ ಮಾಡಿಕೊಂಡು ಈ ಭಾಗದಲ್ಲಿ ಸಿತಾರ್‌ ಸಂಗೀತವನ್ನು ಪಸರಿಸಿದ ಬಾಲೆಖಾನ್‌ ಕುಟುಂಬಕ್ಕೆ ಮತ್ತೂಂದು ಗರಿ ಸಿಕ್ಕಂತಾಗಿದೆ.

ಆಕಾಶವಾಣಿ ನಂಟು: ಛೋಟೆ ರೆಹಮತ್‌ ಖಾನ್‌ ಅವರು ದೊಡ್ಡ ಸಿತಾರ್‌ ಪ್ರತಿಭೆಯಾಗಿ ಬೆಳೆಯಲು ದೊಡ್ಡ ವೇದಿಕೆಯಾಗಿದ್ದೇ ಆಕಾಶವಾಣಿ. ತಮ್ಮ 19ನೇ ವಯಸ್ಸಿನಲ್ಲಿಯೇ ಅವರು ದೆಹಲಿಯ ಆಕಾಶವಾಣಿಯಲ್ಲಿ ಸಿತಾರ್‌ ವಾದನದಿಂದ ಸೈ ಎನಿಸಿಕೊಂಡರು. ಹಿಂದೂಸ್ತಾನಿ ಸಂಗೀತದ ಮೇರು ದಿಗ್ಗಜರಾದ ಪಂ| ರಾಜ್‌ಗುರು, ಪಂ| ಮಲ್ಲಿಕಾರ್ಜುನ್‌ ಮನ್ಸೂರ್‌, ಗಂಗೂಬಾಯಿ ಹಾನಗಲ್‌ ಅವರ ಒಡನಾಟವಿತ್ತು. ಇಂದಿಗೂ ಅವರು ಆಕಾಶವಾಣಿಯ ಉನ್ನತ ದರ್ಜೆ ಕಲಾವಿದರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅತ್ಯಂತ ವರ್ಷವಾಗುತ್ತಿದೆ. ನನಗೆ ಇದೀಗ 60 ವರ್ಷ. ಸರಿಯಾದ ಸಮಯಕ್ಕೆ ಸರ್ಕಾರ ನನ್ನ ಸೇವೆಯನ್ನು ಗುರುತಿಸಿದೆ. ಈ ಪ್ರಶಸ್ತಿ ಬಂದಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. -ಛೋಟೆ ರೆಹಮತ್‌ ಖಾನ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

 

-ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next