ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಬಿಜೆಪಿಯು ತನ್ನ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಿದೆ. ಎಲ್ಲ ಶಾಸಕರಿಗೆ ವಿಪ್ ಜಾರಿಗೊಳಿಸಿ ಬಳಿಕ ವಾಪಸ್ ಪಡೆಯಲಾಗಿದ್ದು, ಗುರುವಾರ ಕಡ್ಡಾಯ ಹಾಜರಿ ಎಂದು ವಿಪ್ ನೀಡಲು ತೀರ್ಮಾನಿಸಲಾಗಿದೆ.
ಮೂರು ತಂಡಗಳಲ್ಲಿ ಮತ ಹಾಕಿಸಲು ಮೂವರು ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಸಭಾ ಚುನಾವಣ ಉಸ್ತುವಾರಿ ಕಿಶನ್ ರೆಡ್ಡಿ, ಸಚಿವರು, ಶಾಸಕರು, ಅಭ್ಯರ್ಥಿಗಳಾದ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಉಪಸ್ಥಿತರಿದ್ದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಅವರನ್ನು ಮೊದಲ ಮತ್ತು ಎರಡನೇ ಅಭ್ಯರ್ಥಿಗಳಾಗಿ ಗೆಲ್ಲಿಸಿಕೊಂಡು ಬರಲು ಯಾರು, ಯಾರಿಗೆ ಮತ ನೀಡಬೇಕು ಎನ್ನುವ ಕುರಿತು ಶಾಸಕರಿಗೆ ಸೂಚನೆ ನೀಡಲಾಗಿದೆ. ಉಳಿದ ಶಾಸಕರು ಪಕ್ಷದ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್‌ಗೆ ಮತ ಹಾಕಲು ವಿಪ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅನಂತರ ಮೂರನೇ ಅಭ್ಯರ್ಥಿಗೆ ಎರಡನೇ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಂಡು ಬರಲು ಸೂಚಿಸಲಾಗಿದೆ.
ಸಚಿವರಾದ ಆರ್. ಅಶೋಕ್, ಸುನಿಲ್ ಕುಮಾರ್ ಹಾಗೂ ಬಿ.ಸಿ. ನಾಗೇಶ್ ಅವರಿಗೆ ಪ್ರತಿಯೊಬ್ಬ ಅಭ್ಯರ್ಥಿಗೆ ಮತ ಹಾಕಲು ಗುರುತಿ ಸಿರುವ ಶಾಸಕರನ್ನು ಕರೆತಂದು ಮತ ಹಾಕಿಸುವ ಜವಾಬ್ದಾರಿ ನೀಡಲಾಗಿದೆ.
Related Articles
ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮಲ್ಲಿ ಮೂರನೇ ಅಭ್ಯರ್ಥಿಗೆ 32 ಮತಗಳಿವೆ. ಪ್ರತಿ ಬಾರಿಯೂ ರಾಜ್ಯಸಭೆ ಚುನಾವಣೆ ನಡೆದಾಗ ಸಾಕಷ್ಟು ಬದಲಾವಣೆಗಳಾಗಿವೆ. ಮತದಾನದ ಸಮಯದಲ್ಲಿಯೂ ಬದಲಾವಣೆಗಳಾಗಿರುವ ಉದಾ ಹರಣೆಗಳಿವೆ. ಜೆಡಿಎಸ್ – ಕಾಂಗ್ರೆಸ್ ಹೊಂದಾಣಿಕೆಯ ಮೇಲೆ ನಮ್ಮ ಗೆಲುವು ನಿಂತಿಲ್ಲ. ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆದರೆ, ಸಂಜೆ ಹೊತ್ತಿಗೆ ಬೇರೆ ಆಗಿತ್ತು ಎಂದು ಹೇಳಿದರು.
ಕೆಲವರು ಗೈರು
ವಿಧಾನ ಪರಿಷತ್ ಚುನಾವಣ ಪ್ರಚಾರದ ಹಿನ್ನೆಲೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಹಿತ ಹಲವು ಶಾಸಕರು ಸಭೆಗೆ ಗೈರಾಗಿದ್ದರು.
ಬಿಜೆಪಿ ಶಾಸಕರಿಗೆ ನಿರ್ಮಲಾ ಔತಣಕೂಟ
ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಶಾಸಕರಿಗೆ ಗುರುವಾರ ಔತಣಕೂಟ ಏರ್ಪಡಿಸಿದ್ದಾರೆ.