ಹೊಸದಿಲ್ಲಿ: ಶನಿವಾರ ಸಿಂಗಾಪುರದಲ್ಲಿ ನಿಧನರಾದ ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭೆ ಸದಸ್ಯ ಅಮರ್ ಸಿಂಗ್ ಅವರ ಅಂತ್ಯಕ್ರಿಯೆ ಸೋಮವಾರ ದೆಹಲಿಯ ಛತರ್‌ಪುರ್ ಚಿತಾಗಾರದಲ್ಲಿ ನೆರವೇರಿತು.
ಬೆಳಗ್ಗೆ 11.30ರ ವೇಳೆಗೆ ಅವರ ಇಬ್ಬರು ಪುತ್ರಿಯರೇ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
ಪತ್ನಿ ಪಂಕಜಾ ಸಿಂಗ್ ಹಾಗೂ ಕುಟುಂಬದ ಇತರೆ ಸದಸ್ಯರು ಉಪಸ್ಥಿತರಿದ್ದರು.
ರವಿವಾರ ಸಂಜೆ ವಿಶೇಷ ವಿಮಾನದ ಮೂಲಕ ಅಮರ್ ಸಿಂಗ್‌ರ ಪಾರ್ಥಿವ ಶರೀರವನ್ನು ಸಿಂಗಾಪುರದಿಂದ ದಿಲ್ಲಿಗೆ ತರಲಾಗಿತ್ತು. ಛತರ್‌ಪುರದ ತೋಟದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂದಿಯಾ, ಜಯಪ್ರದಾ ಸೇರಿದಂತೆ ಹಲವು ರಾಜಕೀಯ ಗಣ್ಯರು, ಕುಟುಂಬದ ಆತ್ಮೀಯರು ಮೃತರ ಅಂತಿಮ ದರ್ಶನ ಪಡೆದಿದ್ದರು.