Advertisement

ರಾಜ್ಯಸಭೆ ಚುನಾವಣೆ; ನಾಳೆ ಸಿದ್ದರಾಮಯ್ಯ ನವದೆಹಲಿಗೆ :ಹೈಕಮಾಂಡ್‌ ಜತೆ ಚರ್ಚೆ

05:32 PM May 20, 2022 | Team Udayavani |

ಕಲಬುರಗಿ: ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾರನ್ನು ಕಣಕ್ಕಿಳಿಸಬೇಕು ಹಾಗೂ ಹೆಚ್ಚುವರಿ ಮತ ಪಡೆಯುವ ನಿಟ್ಟಿನಲ್ಲಿ ಮತ್ತೊಬ್ಬ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಚರ್ಚಿಸಲು ಹೈಕಮಾಂಡ್ ಬುಲಾವ್ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರಾಯಚೂರಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 21 ಶನಿವಾರ ತಾವು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನಹದೆಹಲಿಗೆ ತೆರಳುತ್ತಿದ್ದೇವೆ.‌ ಪ್ರಮುಖವಾಗಿ ಹೆಚ್ಚುವರಿ ಮತಗಳ ಚಲಾವಣೆಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಅಥವಾ ಬೇರೆ ಏನು ಮಾಡಬಹುದು ಎಂಬ ಬಗ್ಗೆಯೂ ಚರ್ಚೆ ನಡೆಸಿ ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಎರಡೂ ತಪ್ಪು

ಪಠ್ಯದಿಂದ ಭಗತ್‌ಸಿಂಗ್‌ ಅಧ್ಯಾಯ ತೆಗೆದಿದ್ದು ಹಾಗೂ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಭಾಷಣ ಸೇರ್ಪಡೆ ಮಾಡಿರುವುದು ಎರಡೂ ತಪ್ಪು ಎಂದು ಹೇಳಿರುವುದಕ್ಕೆ ಬಿಜೆಪಿಯವರು ತಮ್ಮನ್ನು ದೇಶದ್ರೋಹಿ ಎನ್ನುತ್ತಾರೆ. ಭಗತ್‌ಸಿಂಗ್‌ ಅವರಂಥ ಹುತಾತ್ಮರ ಪಠ್ಯ ಕೈಬಿಟ್ಟವರು ದೇಶದ್ರೋಹಿಗಳೋ, ಅದನ್ನು ಮರಳಿ ಹಾಕಿಸಿದವರು ದೇಶದ್ರೋಹಿಗಳೋ’ ಎಂಬುದನ್ನು ಅವರೇ ಹೇಳಲಿ ಎಂದರು.

ಹೆಡಗೇವಾರ್ ಆರ್‌ಎಸ್‌ಎಸ್‌ ಸ್ಥಾಪನೆ ಮಾಡಿದ್ದಕ್ಕೆ ಈಗ ಗೌರವ ಕೊಡುತ್ತಿದ್ದಾರೆ. ಇದೇ ಆರ್‌ಎಸ್‌ಎಸ್‌ನಲ್ಲಿ ನಾತುರಾಮ್‌ ಗೋಡ್ಸೆ ಅವರಂಥ ಅಪರಾಧಿಗಳು ಹುಟ್ಟಿಕೊಂಡರು. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಬಿಟ್ಟು ಹೆಡಗೇವಾರ್‌ ಅವರನ್ನು ಮಕ್ಕಳಿಗೆ ಪರಿಚಯಿಸುವುದು ದೇಶದ್ರೋಹವೇ ಸರಿ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement

ಹೆಡಗೇವಾರ್ ಯಾವತ್ತಾದರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದೀರಾ? ದೇಶಕ್ಕಾಗಿ ಜೈಲಿಗೆ ಹೋಗಿದ್ದಾರಾ? ದೇಶಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಭಗತ್‌ಸಿಂಗ್‌ ಬೇಕೋ, ಆರ್‌ಎಸ್‌ಎಸ್‌ ಕಟ್ಟಿದವರು ಬೇಕೋ? ಯಾರು ದೇಶದ್ರೋಹಿಗಳು ಎಂದು ಎಂದು ಜನ ನಿರ್ಧರಿಸುತ್ತಾರೆ. ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಕಲಿಸುವುದನ್ನು ಬಿಟ್ಟು ಆರ್‌ಎಸ್‌ಎಸ್‌ ಹುಳಗಳನ್ನು ಬಿಡಬೇಡಿ’ ಎಂದೂ ಅವರು ದೂರಿದರು.

ಸಿದ್ದರಾಮಯ್ಯ ಪರಿಶಿಷ್ಟರ ವಿರೋಧಿ ಎಂದು ಬಿಜೆಪಿಯವರು ಟ್ವೀಟ್‌ ಮಾಡುತ್ತಿದ್ದಾರೆ. ಇದು ರಾಜಕೀಯ ತಂತ್ರ. ಹಿಂದುಳಿದವರಿಗೆ, ಪರಿಶಿಷ್ಟರಿಗೆ ನಾನು ಮಾಡಿದಂಥ ಒಂದು ಕೆಲಸವನ್ನಾದರೂ ಬಿಜೆಪಿಯವರು ಮಾಡಿದ್ದಾರೆಯೇ? ಪರಿಶಿಷ್ಟ ಗುತ್ತಿಗೆದಾರರಿಗೂ ಮೀಸಲಾತಿ ನೀಡಿದ್ದು ತಾವು. ಎಸ್‌ಸಿಪಿ– ಟಿಎಸ್‌ಪಿ ಜಾರಿಗೆ ತಂದಿದ್ದು ಇದೇ ಸಿದ್ದರಾಮಯ್ಯ. ತಮ್ಮ ಅಧಿಕಾರದ ಐದು ವರ್ಷಗಳಲ್ಲಿ ₹ 88 ಸಾವಿರ ಕೋಟಿಯನ್ನು ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗಿಸಿದ್ದೇನೆ. ಯಡಿಯೂರಪ್ಪ, ಜಗದೀಶ ಶೆಟ್ಟರ, ಬೊಮ್ಮಾಯಿ ಸೇರಿದಂತೆ ಬಿಜೆಪಿ ಎಲ್ಲ ಮುಖ್ಯಮಂತ್ರಿಗಳೂ ಸೇರಿಕೊಂಡು ಕೇವಲ 22 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ. ನಿಜ ಬಣ್ಣ ಬಯಲಾಗುತ್ತದೆ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಮುಂದಾಲೋಚನೆ ಇಲ್ಲದ ಸರ್ಕಾರ

‘ಮಳೆಯಿಂದಾಗಿ ಬೆಂಗಳೂರು ಅನುಭವಿಸುತ್ತಿರುವ ಬವಣೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ. ಮಳೆ ವಿಚಾರದಲ್ಲಿ ಮೂರುಕಾಸಿನ ಮುಂಜಾಗ್ರತೆಯೂ ಈ ಸರ್ಕಾರಕ್ಕೆ ಇಲ್ಲ. ಜನವರಿಯಲ್ಲಿ ಪೂರ್ವಸಿದ್ಧತೆ ಮಾಡಿಕೊಂಡು, ಸಮಸ್ಯೆಯಾಗದಂತೆ ಕ್ರಮ ವಹಿಸಬೇಕಿತ್ತು. ಈಗ ಮಳೆ ಶುರುವಾದ ಮೇಲೆ ಪರಿಹಾರ ಘೋಷಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 1500 ಕೋಟಿ ಘೋಷಿಸಿದ್ದರು. ಒಂದು ಪೈಸೆ ಕೂಡ ಕೊಡಲಿಲ್ಲ. ಈಗ ಬೊಮ್ಮಾಯಿ ಅವರು ಮತ್ತೆ 1600 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇಂಥ ಭರವಸೆಗಳಿಂದ ಬೆಂಗಳೂರಿನ ಜನರ ಸಂಕಷ್ಟ ದೂರಾಗುವುದಿಲ್ಲ’ ಎಂದೂ ಕಿಡಿ ಕಾರಿದರು.

ಒತ್ತುವರಿಯಾದ ರಾಜಕಾಲುವೆಗಳನ್ನು ತೆರವು ಮಾಡುವುದೊಂದೇ ಇದಕ್ಕೆ ಪರಿಹಾರ. ತಾವು ಅಧಿಕಾರದಲ್ಲಿದ್ದಾಗ ಒತ್ತುವರಿ ತೆರವು ಕೆಲಸ ಶುರು ಮಾಡಿದೆ. ಆದರೆ, ನಂತರ ಬಂದವರು ಅದಕ್ಕೂ ಮಣ್ಣು ಮುಚ್ಚಿದರು. ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತೇನೆ’ ಎಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಹೇಳಿಕೊಂಡಿದ್ದರು. ಅವರಿಂದ ಇನ್ನಷ್ಟು ಹಾಳಾಯಿತೇ ಹೊರತು ಸುಧಾರಣೆ ಆಗಲಿಲ್ಲ. ಎಚ್‌.ಡಿ. ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ 110 ಹಳ್ಳಿಗಳನ್ನು ಸೇರ್ಪಡೆ ಮಾಡಿ ಬೆಂಗಳೂರು ವಿಸ್ತರಣೆ ಮಾಡಿದರು. ಆದರೆ, ಅಲ್ಲಿ ಕನಿಷ್ಠ ಮೂಲ ಸೌಕರ್ಯ ನೀಡಲಿಲ್ಲ. ಇದೇ ಕಾರಣಕ್ಕೆ ಇಂದು ಸಮಸ್ಯೆ ಎದುರಾಗಿದೆ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next