Advertisement

ಕಾಂಗ್ರೆಸ್‌-ಜೆಡಿಎಸ್‌ ಜಿದ್ದಾಜಿದ್ದಿ ಕಾಳಗಕ್ಕೆ ರಾಜ್ಯಸಭೆ ಚುನಾವಣೆ ಮುನ್ನುಡಿ

03:01 AM Jun 11, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ “ಮುಸ್ಲಿಂ’ ಅಸ್ತ್ರ ಬಳಸಿ ಜೆಡಿಎಸ್‌ ಅಭ್ಯರ್ಥಿ ಸೋಲುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಈ ಬಾರಿ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಜತೆಗಿರಿಸಿಕೊಂಡೇ ರಾಜಕೀಯ ದಾಳ ಉರುಳಿಸಿದ್ದಾರೆ.

Advertisement

ಸಿ.ಎಂ. ಇಬ್ರಾಹಿಂ ಜೆಡಿಎಸ್‌ ರಾಜ್ಯಾಧ್ಯಕ್ಷ ರಾದರೂ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ಕೊಡಿಸಲು ಆಗಲಿಲ್ಲ. ಜೆಡಿಎಸ್‌ ಮುಸ್ಲಿಮರ ಪರ ಇಲ್ಲ ಎಂಬ ಸಂದೇಶ ರವಾನೆಯಾಗಬೇಕು ಎಂಬ ಸಿದ್ದರಾಮಯ್ಯ ಅವರ ಮೂಲ ಉದ್ದೇಶ ಈಡೇರಿದೆ.

ಕಾಂಗ್ರೆಸ್‌ -ಜೆಡಿಎಸ್‌ ಜಿದ್ದಾಜಿದ್ದಿನ ಹೋರಾಟಕ್ಕೆ ಈ ಚುನಾವಣೆ ವೇದಿಕೆ ಕಲ್ಪಿಸಿದ್ದು, ಇನ್ನು ಮುಂದೆ ಜೆಡಿಎಸ್‌ ಬಿಜೆಪಿಗಿಂತ ಕಾಂಗ್ರೆಸ್‌ ವಿರುದ್ಧ ಇನ್ನಷ್ಟು ಆಕ್ರಮಣಕಾರಿಯಾಗುವ ಲಕ್ಷಣಗಳಿವೆ.

“ಇನ್ನುಮುಂದೆ ಕಾಂಗ್ರೆಸ್‌ ಸಹವಾಸ ಮಾಡುವುದಿಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ನ ಸಂಭವನೀಯ ದೋಸ್ತಿಯ ಬಾಗಿಲು ಮುಚ್ಚಿದಂತಾಗಿದೆ. ಇದರಿಂದ ಕಾಂಗ್ರೆಸ್‌ನ ಕೆಲವು ಮುಖಂಡರ ಕನಸು ಭಗ್ನಗೊಂಡಂತಾಗಿದೆ.

ಲೆಹರ್‌ ಸಿಂಗ್‌ ರಾಜ್ಯಸಭೆ ಪ್ರವೇಶಿಸಿರುವುದರಿಂದ ಬಿ.ಎಸ್‌. ಯಡಿಯೂ ರಪ್ಪರಿಗೆ ವೈಯಕ್ತಿಕವಾಗಿ ಬಲ ಬಂದಿರುವುದು ಗಮನಿಸಬೇಕಾದ ಸಂಗತಿ.

Advertisement

ಬಿಜೆಪಿ ಲಾಭ
ಜೆಡಿಎಸ್‌ ತನ್ನ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ನೀಡಲಿಲ್ಲ ಎಂಬ ಅಸ್ತ್ರ ಕಾಂಗ್ರೆಸ್‌ಗೆ ದೊರೆತರೆ ಜಾತ್ಯತೀತ ಶಕ್ತಿಗಳ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಕರ್ನಾಟಕದ ವಿಚಾರದಲ್ಲಿ ಪರೋಕ್ಷವಾಗಿ ಬಿಜೆಪಿಗೆ ಸಹಕಾರ ನೀಡಿದೆ ಎಂಬ ಪ್ರತ್ಯಸ್ತ್ರ ಜೆಡಿಎಸ್‌ಗೆ ಸಿಕ್ಕಿದಂತಾಗಿದೆ. ಈ ಎರಡೂ ಪಕ್ಷಗಳು ಪರಸ್ಪರ ಜಿದ್ದಾಜಿದ್ದಿಗೆ ಬಿದ್ದಷ್ಟು ಆಡಳಿತಾರೂಢ ಬಿಜೆಪಿಗೆ ರಾಜಕೀಯವಾಗಿ ಲಾಭವೇ ಹೆಚ್ಚು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌-ಜೆಡಿಎಸ್‌ ಜಗಳ ಆದಷ್ಟು ಬಿಜೆಪಿ ಶಕ್ತಿ ಹೆಚ್ಚುತ್ತ ಹೋಗುತ್ತದೆ. ಬಿಜೆಪಿ ಯಾರೂ ಊಹಿಸದ ರೀತಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅನಾಯಾಸವಾಗಿ ಗೆದ್ದುಕೊಂಡಿದೆ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದಾಗದಂತೆ ನೋಡಿಕೊಂಡರೆ ರಾಜ್ಯದಲ್ಲಿ ಬಿಜೆಪಿಗೆ ಪ್ಲಸ್‌. ಇದನ್ನು ರಾಜ್ಯಸಭೆ ಚುನಾವಣೆ ಫ‌ಲಿತಾಂಶ ಸಾಬೀತುಮಾಡಿದೆ.

ಈ ಚುನಾವಣೆ ವಿಚಾರದಲ್ಲಿ ಸಿದ್ದು ಮತ್ತು ಡಿ.ಕೆ.ಶಿ. ಒಂದಾಗಿ ಮಲ್ಲಿಕಾ ರ್ಜುನ ಖರ್ಗೆ ಮೂಲೆಗುಂಪಾ ದಂತಾಗಿದ್ದು, ಅವರ ಮಾತು ಹೈಕ ಮಾಂಡ್‌ ಮಟ್ಟದಲ್ಲೂ ನಡೆದಿಲ್ಲ. ಇದನ್ನು ಜೆಡಿಎಸ್‌ ರಾಜಕೀಯ ವಾಗಿ ಬಳಸಿಕೊಳ್ಳದೆ ಬಿಡದು. ದಲಿತ ಸಿಎಂ ವಿಚಾರವನ್ನೆತ್ತಿ ಸಿದ್ದು ಮತ್ತು ಡಿಕೆಶಿಯನ್ನು ಹಣಿಯಬಹುದು.

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಶಕ್ತಿಶಾಲಿ ಆಗುವುದು ಜೆಡಿಎಸ್‌ಗೂ ಇಷ್ಟವಿಲ್ಲ. ಅವರ ಮಾತು ನಡೆಯ ದಂತೆ ನೋಡಿಕೊಳ್ಳಲು ಖರ್ಗೆ ಮೂಲಕ ಎಚ್‌.ಡಿ. ದೇವೇಗೌಡರು ಶತ ಪ್ರಯತ್ನ ಮಾಡಿದ್ದರು. ಅದು ಫ‌ಲಿಸದ ಅನಂತರ ಎಚ್‌.ಡಿ. ಕುಮಾರಸ್ವಾಮಿ ರಂಗಪ್ರವೇಶ ಮಾಡಿ ತಮ್ಮ ನೆಟ್‌ವರ್ಕ್‌ ಬಳಸಿದರು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ್‌ ಜತೆಗೂ ಮಾತನಾಡಿದರು. ಆದರೂ ಪ್ರಯೋಜನವಾಗಲಿಲ್ಲ.

ಈಗ ಕುಮಾರಸ್ವಾಮಿ ಸುಮ್ಮನೆ ಇರುವವರಲ್ಲ. ತಮ್ಮ ಮೊದಲ ಶತ್ರು ಸಿದ್ದರಾಮಯ್ಯ ಎಂಬಂತೆ ಮುಗಿಬೀಳಬಹುದು. ರಾಜಕೀಯವಾಗಿ ಅವರ ಪ್ರಭಾವ ಕುಗ್ಗಿಸುವ ಕಾರ್ಯತಂತ್ರಗಳು ಇನ್ನುಮುಂದೆ ಹೆಚ್ಚಾಗಿ ನಡೆಯಲಿವೆ. ಬಿಜೆಪಿಗೂ ಇದೇ ಬೇಕಾಗಿದೆ.

ಡಿಕೆಶಿ ರಿವರ್ಸ್‌ ಆಗುವರೇ?
ಸಿದ್ದರಾಮಯ್ಯ ಹಠ ಸದ್ಯಕ್ಕೆ ಡಿ.ಕೆ.ಶಿ. ಅವರನ್ನೂ ಮಣಿಸಿದೆ. ಆದರೆ ಪಕ್ಷದಲ್ಲಿ ಸಿದ್ದರಾಮಯ್ಯ ಮಾತೇ ಅಂತಿಮ ಎಂಬ ವಾತಾವರಣ ಉಂಟಾದರೆ ಡಿ.ಕೆ.ಶಿ. “ರಿವರ್ಸ್‌’ ಆಗದೆ ಇರುವುದಿಲ್ಲ. ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಕುಮಾರಸ್ವಾಮಿಯವರು ಕಾಂಗ್ರೆಸ್‌ ಅದರಲ್ಲೂ ಡಿ.ಕೆ.ಶಿ. ಮೇಲೆ ಮುಗಿಬಿದ್ದು ಆ ಬಳಿಕ ಪರ್ಯಾಯವಾಗಿ ಜನತಾ ಜಲಧಾರೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದರು. ಇದರಿಂದ ತಮ್ಮ ಒಕ್ಕಲಿಗ ನಾಯಕತ್ವಕ್ಕೆ ಸಂಚಕಾರ ಬರಬಹುದು ಎಂಬ ಆತಂಕದಿಂದ ಸದ್ಯ ಡಿ.ಕೆ.ಶಿ.ಯವರು ಸಿದ್ದರಾಮಯ್ಯ ಜತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next