Advertisement

Vijayapura: ಸುಸ್ಥಿರ ಕೃಷಿಗಾಗಿ ಆಧುನಿಕ ತಾಂತ್ರಿಕತೆ ಅಳವಡಿಕೆ ಅಗತ್ಯ: ರಾಜುಗೌಡ ಪಾಟೀಲ

04:27 PM Jan 21, 2024 | Team Udayavani |

ವಿಜಯಪುರ : ಮಳೆ ಆಶ್ರಿತವಾಗಿರುವ ವಿಜಯಪುರ ಕೃಷಿ, ಬದಲಾದ ವಾತಾವರಣದ ಪರಿಣಾಮ ಕೃಷಿ ವ್ಯವಸ್ಥೆ ಸಂಕಷ್ಟ ಎದುರಿಸುವ ದುಸ್ಥಿತಿ ಎದುರಾಗಿದೆ. ಪ್ರಕೃತಿ ವೈಪರೀತ್ಯಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನೆ ತಾಂತ್ರಿಕ ಆವಿಷ್ಕಾರಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸಲಹೆ ನೀಡಿದರು.

Advertisement

ಭಾನುವಾರ ಹಿಟ್ನಳ್ಳಿ ಕೃಷಿ ಫಾರ್ಮನಲ್ಲಿ ವಿಜಯಪುರ ಕೃಷಿ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಕೃಷಿಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರ್ಥಪೂರ್ಣವಾಗಿ ಕೃಷಿಮೇಳ ಸಂಘಟಿಸಲಾಗಿದೆ ಎಂದರು.

ಮಳೆ ಆಶ್ರಿತ ಪರಿಸರದಲ್ಲಿ ಮಳೆ ನೀರಿನ ಸಂರಕ್ಷಣೆ ಜೊತೆಗೆ ನೀರಾವರಿ ಪ್ರದೇಶದಲ್ಲಿ ನೀರಿನ ಮಿತವ್ಯಯ ಹಾಗೂ ಅವೈಜ್ಞಾನಿಕ ರಸಾಯನಿಕ ಬಳಕೆಯಿಂದ ವಿಮುಖವಾಗಬೇಕಿದೆ. ಜೊತೆಗೆ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರೈತರು ಬದಲಾವಣೆಗೆ ಹೊಂದಿಕೊಂಡ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾನೂ ಕೂಡ ವಿಜಯಪುರ ಕೃಷಿ ಮಹಾವಿದ್ಯಾಲಯದಿಂದಲೇ ಕೃಷಿ ಪದವಿ ಪಡೆದಿದ್ದು, ನಾನು ಶಿಕ್ಷಣ ಪಡೆದ ಕಾಲೇಜಿನಲ್ಲೇ ಕೃಷಿಮೇಳಕ್ಕೆ ಚಾಲನೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಕೃಷಿ ವ್ಯವಸ್ಥೆ ವ್ಯಸನಿಗಳಿಂದಾಗಿ ದುರ್ಬಲವಾಗುತ್ತಿದೆ. ಇದು ಭವಿಷ್ಯದ ಭಾರತೀಯ ಕೃಷಿ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕ ಎದುರಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

Advertisement

ಸ್ವಾತಂತ್ರ್ಯ ನಂತರದ ಭಾರತಕ್ಕೆ ವಿದೇಶದಿಂದ ಜಾನುವಾರುಗಳೂ ತಿನ್ನಲಾಗದ ಕಳಪೆ ಆಹಾರ ಧಾನ್ಯಕ್ಕೆ ಕೈಯೊಡ್ಡುವ ದುಸ್ಥಿತಿ ಇತ್ತು. ಇದೀಗ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಮಾತ್ರವಲ್ಲ ಹಿಂದೆ ಯಾವ ದೇಶದ ಎದುರು ಅಹಾರ ಧಾನ್ಯಗಳಿಗೆ ಕೈ ಒಡ್ಡುವ ದುಸ್ಥಿತಿ ಇತ್ತು. ಇದೀಗ ಅದೇ ದೇಶಗಳಿಗೆ ಭಾರತ ಗುಣಮಟ್ಟದ ಅಕ್ಕಿ ಸೇರಿದಂತೆ ಇತರೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಶಕ್ತಿ ಬಂದಿದೆ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಪ್ರಸ್ತಾವಿಕ ಮಾತನಾಡಿದರು. ವಿಜಯಪುರ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಭೀಮಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ, ಶ್ರೀನಿವಾಸ ಕೋಟ್ಯಾನ್, ಡಾ.ಎಸ್.ಎಸ್. ಅಂಗಡಿ, ಡಾ.ಬಿ.ಡಿ.ಬಿರಾದಾರ, ಡಾ.ಐ.ಕೆ.ಕಾಳಪ್ಪನವರ, ಡಾ.ಆರ್.ಬಿ.ಬೆಳ್ಳಿ, ಡಾ.ಅಶೋಕ ಸಜ್ಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Plane Crash: ಅಫ್ಘಾನಿಸ್ತಾನದಲ್ಲಿ ಪತನಗೊಂದಿರುವುದು ಭಾರತೀಯ ವಿಮಾನವಲ್ಲ; ಕೇಂದ್ರ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next