ಚೆನ್ನೈ: ಇದೇ ತಿಂಗಳ 31ರಂದು ತಮ್ಮ ರಾಜಕೀಯ ಜೀವನದ ಬಗ್ಗೆ ಕೈಗೊಂಡಿರುವ ನಿರ್ಧಾರವನ್ನು ಪ್ರಕಟಿಸುವುದಾಗಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಘೋಷಿಸಿದ್ದಾರೆ. ಮೊದಲೇ ತೀರ್ಮಾನಿಸಿದಂತೆ, ತಮ್ಮ ಅಭಿಮಾನಿಗಳ ಪ್ರತಿಕ್ರಿಯೆ ಪಡೆಯುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ಡಿ. 31ರಂದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಆದರೆ, ಇದರ ನಡುವೆಯೇ ತಾವು ರಾಜಕೀಯಕ್ಕೆ ಬರುತ್ತೇ ನೆಂದು ಯಾವತ್ತೂ ಹೇಳಿಲ್ಲ ಎಂದಿರುವುದು ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಸುದ್ದಿಗೋಷ್ಠಿಯಲ್ಲಿ ರಜನಿ ಹೇಳಿದ್ದೇನು?
ನಾನು ರಾಜಕೀಯಕ್ಕೆ ಬರುತ್ತೇನೆಂದು ಹೇಳುತ್ತಿಲ್ಲ. ಆದರೆ, ಡಿ. 31ರಂದು ನನ್ನ ಮುಂದಿನ ನಡೆಯನ್ನು ಘೋಷಿಸುತ್ತೇನಷ್ಟೆ.
ನನಗೆ ರಾಜಕೀಯ ಕ್ಷೇತ್ರದ ಸೂಕ್ಷ್ಮತೆಗಳ ಅರಿವಿಲ್ಲದಿದ್ದರೆ ನಾನು ರಾಜಕೀಯಕ್ಕೆ ಹಿಂದೆಂದೋ ಕಾಲಿಡುತ್ತಿದ್ದೆ.
ಸಮರಕ್ಕಿಳಿದ ಜಯ ಪಡೆಯಲೇಬೇಕು. ರಣಾಂಗಣದಲ್ಲಿ ಕೇವಲ ಶೌರ್ಯ, ಪರಾಕ್ರಮ ತೋರಿದರಷ್ಟೇ ಸಾಲದು.
ನನ್ನ ರಾಜಕೀಯ ಪ್ರವೇಶ ಜನರಿಗಿಂತ ಹೆಚ್ಚಾಗಿ ಮಾಧ್ಯಮಗಳಿಗೆ ಬೇಕು ಎನ್ನಿಸುತ್ತಿದೆ.
ಅಭಿಮಾನಿಗಳೇ, ಮೊದಲು ಕುಟುಂಬ, ತಂದೆ-ತಾಯಿ, ಹೆಂಡತಿ, ಮಕ್ಕಳ ಬಗ್ಗೆ ಗಮನ ಕೊಡಿ. ರಾಜಕೀಯಕ್ಕೆ ಮೊದಲ ಆದ್ಯತೆ ಬೇಡ.