Advertisement
ಚಿತ್ರದುರ್ಗದ ಕೋಟೆ ಅದು. ಸುರಿಯುವ ಕಾರ್ಗತ್ತಲಲ್ಲಿ ಬದುಕಿನ ಬೆಳಕು ಹುಡುಕುತ್ತಾ ಕೂತವರು- ಪರಮಶಿವನ್, ಮುತ್ತುರಾಜ, ಕರೀಂಖಾನರು. ರಾತ್ರಿ ನಾಟಕ ಮುಗಿದ ಮೇಲೆ ಕೋಟೆಯ ನೆತ್ತಿಯ ಮೇಲೆ ಹೀಗೆ ಕೂತು ಭವಿಷ್ಯದ ಬಗ್ಗೆ ದಿನವೂ ಯೋಚಿಸುವುದೇ ಆಗಿತ್ತು. “ಅಣ್ಣಾ, ನನಗೆ 70ರೂ. ಸಂಬಂಳ. ಇದರಲ್ಲಿ ಬದುಕು ಹೇಗೆ ಸಾಗಿಸೋದು? ನನ್ನ ಹಣೆಬರಹ ಹೇಗಿದೆಯೋ ಏನೋ…’ ಮುತ್ತುರಾಜರ ಗಲಿಬಿಲಿಯ ಮಾತು ಇದು. ಆಗ ಹಾರ್ಮೋನಿಯಂ ಪರಮಶಿವನ್ ಅವರಿಗೆ 110 ರೂ. ಕರೀಂಖಾನರಿಗೆ 100ರೂ ಸಂಬಳ ಇತ್ತು. “ಮುತ್ತುರಾಜಾ ಏಕೆ ತಲೆ ಕೆಡಿಸಿಕೊಳ್ತೀಯಾ? ನೀನು ಈ ಭೂಮಿಗೆ ಬಂದಾಗಲೇ ಮುಂದೇನು ಆಗಬೇಕು ಅಂತ ದೇವರು ಹಣೇಲಿ ಬರೆದಾಗಿದೆ. ಭವಿಷ್ಯದ ಬಗ್ಗೆ ಚಿಂತೆ ಬೇಡ. ಹುಟ್ಟಿಸಿದವನು ಹುಲ್ಲು ಮೇಯಿಸದೇ ಇರೋಲ್ಲ’ ಪರಮಶಿವನ್ ಹೀಗೆ ಸಮಾಧಾನ ಮಾಡೋದು. ಕರೀಂಖಾನರು ಬೆನ್ನು ತಟ್ಟಿ ಧೈರ್ಯ ಹೇಳ್ಳೋದು. ಬೇಸರವಾದಾಗಲೆಲ್ಲಾ ಹೀಗೆ ಕೋಟೆಯ ನೆತ್ತಿಯ ಮೇಲೆ ರಾತ್ರಿಗಳನ್ನು ಕಳೆದು, ಬೆಳಗ್ಗೆ ಕೋಟೆಯ ದಿಡ್ಡಿ ಬಾಗಿಲಿನಲ್ಲಿ ಇದ್ದ ಹೋಟೆಲ್‌ನಲ್ಲಿ ಇಡ್ಲಿ ತಿಂದು ಕ್ಯಾಂಪಿಗೆ ಹೋಗೋದು ನಡೆಯುತ್ತಲೇ ಇತ್ತು.
ನಾನು ಸುಬ್ಬಯ್ಯನಾಯ್ದು ಅವರಿಗೆ – ಗುಬ್ಬಿ ಕಂಪೆನಿಯಲ್ಲಿ ಮುತ್ತುರಾಜ ಅಂತಿದ್ದಾನೆ. ಬಹಳ ಚೆನ್ನಾಗಿ ಹಾಡ್ತಾನೆ, ಅಭಿನಯ ಮಾಡ್ತಾನೆ. ಅವನನ್ನು ಕರೆದುಕೊಂಡು ಬರಲೇ’ ಅಂದೆ. ಅದಕ್ಕೆ ಅವರು “ಕೇಳಿ ನೋಡಿ, ಬಂದರೆ ಸಂತೋಷ ‘ ಅಂದರು. ಸುಬ್ಬಯ್ಯನಾಯ್ದು ಅವರ ಕಾರು ತಗೊಂಡು ನೇರವಾಗಿ ಮೈಸೂರು ಕ್ಯಾಂಪ್‌ಗೆ ಹೋಗಿ, ಅಲ್ಲಿದ್ದ ಮುತ್ತುರಾಜನನ್ನು ಕರೆದುಕೊಂಡು ಸುಬ್ಬಯ್ಯನಾಯ್ಡು ಅವರ ಕಂಪೆನಿಗೆ ಬಂದೆವು. ಮುತ್ತುರಾಜನಿಗೆ ಗುಬ್ಬಿಕಂಪೆನಿಯಲ್ಲಿ 60ರೂ. ಸಂಬಳ ಇತ್ತು. ಇಲ್ಲಿಗೆ ಬಂದ ಮೇಲೆ 80ರೂ. ಅವರ ತಂಗಿ ಶಾರದಮ್ಮರಿಗೆ 20ರೂ. ಒಟ್ಟಾರೆ 100ರೂ. ಸಂಬಳ ಅಂತ ನಿಗಧಿಯಾಯಿತು. ಅಷ್ಟೊತ್ತಿಗೆ ಮುತ್ತುರಾಜರ ತಂದೆ ಪುಟ್ಸಾಮಯ್ಯನವರು ತೀರಿಕೊಂಡಿದ್ದರಿಂದ, ಸಂಸಾರದ ನೊಗ ಇವರೇ ಹೊರುವಂತಾಗಿತ್ತು’
Related Articles
Advertisement
” ಮುತ್ತುರಾಜ ರಾಜ್‌ಕುಮಾರ್ ಆದ ಮೇಲೂ ಅಂಥ ಬದಲಾವಣೆ ಏನೂ ಆಗಲಿಲ್ಲ. ಆದದ್ದು ಒಂದೇ. ಆಗ ಬಿಳಿ ಪೈಜಾಮ, ಜುಬ್ಬ, ಆಗಾಗ ಪಂಚೆಯುಡುತ್ತಿದ್ದರು. ಹೆಸರು, ಹಣ ಎಲ್ಲಾ ಬಂದಮೇಲೆ ರೇಷ್ಮೆ ಪಂಚೆ, ಜುಬ್ಬ ಧರಿಸುತ್ತಿದ್ದರು. ಇದೇ ಬದಲಾವಣೆ. ಯಾವಾಗಲು ಹೇಳ್ಳೋರು. “ನಾನೇನಾದ್ರು ಒಳ್ಳೇ ಸ್ಥಿತಿವಂತನಾದರೆ ನಿಮ್ಮನ್ನು ಮದ್ರಾಸ್ ಕರೆಸಿಕೊಂಡು ಬಿಡ್ತೀನಿ ಅಣ್ಣಾವ್ರೇ. ನಿಮ್ಮಂಥಾ ಸಂಗೀತ ತಿಳಿದ ಹಾರ್ಮೋನಿಯಂ ಕಲಾವಿದರು ಸಿಗೋದು ಕಷ್ಟ ‘ ಅಂತಿದ್ದರು. ಹಾಗೇ, ಕರ್ನಾಟಕ ಕಲಾವಿದರ ಸಂಘ ಅಂತ ಮಾಡಿ ನಾಟಕಗಳನ್ನು ಆಡುವಾಗ ಹಾರ್ಮೋನಿಯಂ ನುಡಿಸಲು ನೀವು ಬರಬೇಕು ಅಂತ ಕರೆಸಿಕೊಂಡರು. ಕರ್ನಾಟಕವೆಲ್ಲಾ ಸುತ್ತಾಡಿ ನಾಟಕಗಳನ್ನು ಕೊಡ್ತಾ ಇದ್ವಿ ‘ ಪರಮಶಿವನ್ ನೆನಪಿಸಿಕೊಳ್ಳುತ್ತಾರೆ.
“ಇಷ್ಟೇ ಅಲ್ಲ, ಹಳೇ ನೆನಪು ಬಂದಾಗೆಲ್ಲಾ ನಮ್ಮ ಮನೆ ಮುಂದೆ ಮುತ್ತುರಾಜನ ಕಾರು ಬಂದು ಬಿಡೋದು. ಮನೆಗೆ ಹೋಗಿ, ಹರಟಿ – ಇವತ್ತು ನಾನೇ ಊಟಕ್ಕೆ ಬಡಿಸ್ತೀನಿ ಅಣ್ಣಾವ್ರೇ ಅಂತ ತಾವೇ ಊಟ ಬಡಿಸಿ, ಅನ್ನಕ್ಕೆ ತುಪ್ಪ ಹಾಕಿ ಸಂತೋಷ ಪಡುತ್ತಿದ್ದರು. ಇಡೀ ದಿನ ಕಂದಕಗಳನ್ನು ಹಾಡುತ್ತಾ, ಲೆಗ್ ಹಾರ್ಮೋನಿಯಂ ನುಡಿಸುತ್ತಾ ಕಾಲ ಕಳೆದು ಬರುತ್ತಿದ್ದೆವು. “ಆಕಸ್ಮಿಕ’ ಚಿತ್ರದ “ಅನುರಾಗದ ಭೋಗ ‘ ಹಾಡಿದೆಯಲ್ಲಾ… ರಾಜ್‌ಕುಮಾರ್‌ರ ತಂದೆ ಪುಟ್ಟಸ್ವಾಮಯ್ಯ ನವರು ಎಚ್ಚಮನಾಯಕ ನಾಟಕದಲ್ಲಿ ಮೋಹಿನಿಯನ್ನು ನೆನಪಿಸಿಕೊಂಡು ಹಾಡುತ್ತಿದ್ದ ಹಾಡದು. ಆಕಸ್ಮಿಕ ಸಿನಿಮಾ ನಿರ್ಮಾಣದ ವೇಳೆ, ಈ ಹಾಡು ಸಿನಿಮಾಕ್ಕೆ ಬೇಕು ಅಂತ ನನ್ನ ಕರೆಸಿ, ಹಾಡಿಸಿ, ಕೊನೆಗೆ ಚಿತ್ರದಲ್ಲಿ ನೀವೇ ಹಾರ್ಮೋನಿಯಂ ನುಡಿಸಬೇಕು ಅಂತ ಹಠ ಮಾಡಿದರು’
” ರಾಜ್‌ಕುಮಾರ್ ಇವತ್ತೂ ಏಕೆ ಮುಖ್ಯ ಅಂದರೆ, ಅವರು ಅಪ್ಪನ ಗುಣಗಳನ್ನೆಲ್ಲಾ ಎರೆದುಕೊಂಡಿದ್ದಾರೆ. ಅವರ ನಯ, ವಿನಯ ಯಾವುದೂ ಅಭಿನಯವಾಗಿರಲಿಲ್ಲ. ಕೂಡಿ ತಿನ್ನಬೇಕು, ದೊಡ್ಡವರಿಗೆ ಗೌರವ ಕೊಡಬೇಕು- ಎಂಬಂಥ ಸದ್ಗುಣಗಳನ್ನು ಸ್ಟಾರ್ ಆದರೂ ಬಿಡಲಿಲ್ಲ. ನಾನು ಅವರ ಮನೆಯಿಂದ ವಾಪಸ್ಸು ಬರಬೇಕಾದರೆ ಗೇಟು ತನಕ ತಾವೇ ಬಂದು ಬೀಳ್ಕೊàಡೋರು. ಅಣ್ಣಾವ್ರನ್ನ ಹುಷಾರಾಗಿ ಕರೆದುಕೊಂಡು ಹೋಗಿ ಮನೆಗೆ ಬಿಟ್ಟು ಬರಬೇಕು ಅಂತ ಡ್ರೈವರ್‌ಗೆ ಹೇಳ್ಳೋರು. ನಾನು ಮನೆಗೆ ಬಂದ ಮೇಲೆ ತಲುಪಿದ್ದೇನೋ ಇಲ್ಲವೋ ಅಂತ ತಿಳಿಯೋಕೆ ಅವರೇ ಪೋನು ಮಾಡೋರು. ಇವೆಲ್ಲಾ ನಮ್ಮ ಮುತ್ತುರಾಜರಿಗೆ ತಂದೆಯವರಿಂದ ಬಳುವಳಿಯಾಗಿ ಬಂದ ಗುಣಗಳೇ’ ಹೀಗೆ ಹೇಳಿ ಪರಮಶಿವನ್ ಅನುರಾಗದ ಭೋಗ ಹಾಡನ್ನು ಹಾರ್ಮೋನಿಯಂನಲ್ಲಿ ನುಡಿಸಿ ಮುಚ್ಚಿಟ್ಟರು.
ಥ್ರಿ ಮಸ್ಕಟೀಯರ್ಕನಕಪುರ, ಚಿತ್ರದುರ್ಗ, ಹುಬ್ಬಳ್ಳಿ ಕ್ಯಾಂಪ್‌ಗ್ಳಲ್ಲಿರಾಜ್‌ಕುಮಾರ್ ಕೈ ಕೈ ಹಿಡಿದುಕೊಂಡು ಓಡಾಡಿದವರು ಈ ಪರಮ ಶಿವನ್. ಸಕಲೇಶಪುರದ ಕ್ಯಾಂಪ್‌ನಲ್ಲಿ ರಾಜ್‌ಕುಮಾರ್‌ರಿಗೆ ಪ್ರಥಮ ಬಾರಿಗೆ ಹನುಮಂತನ ಪಾರ್ಟು ಕೊಡಿಸಿದ್ದರು. ಸುಮಾರು 600 ಕಂದ ಪದ್ಯಗಳಿದ್ದವು. ಅಣ್ಣಾವ್ರೇ ನನ್ನ ಕೈಲಿ ಇಷ್ಟೊಂದು ಕಂದಕ ಹೇಳ್ಳೋಕೆ ಆಗುತ್ಯೇ ಅಂದಾಗ ಧೈರ್ಯ ತುಂಬಿ ಸ್ಟೇಜಿನ ಮೇಲೆ ನಿಲ್ಲಿಸಿದವರು ಇದೇ ಪರಮಶಿವನ್ ಮೇಷ್ಟ್ರು. ಆ ಹೊತ್ತಿಗೆ. ರಾಜ್‌ಕುಮಾರ್ , ಪಿಟೀಲು ಶಂಕರಪ್ಪ, ಪರಮಶಿವನ್ ಮೂರು ಜನರನ್ನ ಥ್ರಿà ಮಸ್ಕಟೀಯರ್ ಅಂತಲೇ ಕರೆಯುತಿದ್ದರು. ಆಗ ತಾನೇ ಬಿಡುಗಡೆಯಾಗಿದ್ದ ಇಂಗ್ಲೀಷ್ ಚಿತ್ರದ ಹೆಸರು ಅದು. ಈ ತ್ರಿಮೂರ್ತಿಗಳದ್ದೂ ಒಂದೇ ಥರಹದ ಜುಬ್ಬ, ಒಂದೇ ರೀತಿಯ ಶರಾಯಿ, ಒಂದೇ ತರಹದ ಪರಿಸ್ಥಿತಿಯೂ ಕೂಡ. ಕಾಫಿಗೆ ಹೋದರೂ, ಊಟಕ್ಕೆ ಕುಳಿತರೂ ಮೂವರೂ ಒಟ್ಟೊಟ್ಟಿಗೆ . ದೇಹ ಮೂರು, ಆತ್ಮ ಒಂದೇ ಅಂತಾರಲ್ಲ; ಆರೀತಿ. “ರಾಜ್‌ಕುಮಾರ್ ದತ್ತಿ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ. ಈಗ ಮುತ್ತುರಾಜ ಇದ್ದಿದ್ದರೆ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ನಾನೆಂದರೆ ಅವರಿಗೆ ಬಹಳ ಪ್ರೀತಿ. ಅಣ್ಣಾವ್ರೇ, ನಾನು ಚೆನ್ನಾಗಿ ಆದರೆ ನಿಮ್ಮನ್ನು ಮಡ್ರಾಸ್‌ಗೆ ಕರೆಸಿಕೊಳ್ತೀನಿ. ನೀವು ಹನುಮಂತ ಪಾತ್ರ ಮಾಡಿಸದೇ ಇದ್ದಿದ್ದರೆ ನಾನೆಲ್ಲಿ ಮುಂದೆ ಬರ್ತಿದ್ದೆ ‘ ಹೀಗೆ ಕಡೇ ವರೆಗೂ ನಿಷ್ಕಲ್ಮಶವಾಗಿ ನೆನಪಿಸಿಕೊಳ್ಳುತ್ತಲೇ ಬದುಕಿದ್ದರು’ ಕಟ್ಟೆ ಗುರುರಾಜ್