Advertisement

ಕನ್ನಡದಲ್ಲಿ ಎಂದಿಗೂ ಅಸ್ತಂಗತವಾಗದ ಧ್ರುವತಾರೆ

09:34 PM Apr 24, 2019 | Lakshmi GovindaRaju |

ಚಾಮರಾಜನಗರ: ಡಾ.ರಾಜ್‌ಕುಮಾರ್‌ ಮೇರು ವ್ಯಕ್ತಿತ್ವದ ಕಲಾವಿದರಾಗಿದ್ದು, ಚಲನಚಿತ್ರಗಳಲ್ಲಿನ ಅವರ ಅಭಿನಯ, ಸುಶ್ರಾವ್ಯ ಕಂಠಸಿರಿ, ಭಕ್ತಿ, ಭಾವಗೀತೆಗಳು ಇಂದಿಗೂ ಅವಿಸ್ಮರಣೀಯವಾಗಿವೆ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರತ್ನ, ಪದ್ಮಭೂಷಣ, ಮೇರುನಟ ಡಾ.ರಾಜ್‌ಕುಮಾರ್‌ 91ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ‌ರು.

ಪಾತ್ರಕ್ಕೆ ಜೀವ ತುಂಬುತ್ತಿದ್ದ ರಾಜ್‌: ಅಭಿನಯ ಕಲೆಯಲ್ಲಿ ನವರಸಗಳನ್ನು ಮೈಗೂಡಿಸಿಕೊಂಡಿದ್ದ ರಾಜ್‌ಕುಮಾರ್‌ ನಟಿಸಿರುವ ಪ್ರತಿಯೊಂದು ಚಲನಚಿತ್ರಗಳು ಜೀವನಮೌಲ್ಯಗಳು ಹಾಗೂ ಆದಶ‌ìಗಳನ್ನು ಪ್ರಮುಖವಾಗಿ ಪ್ರತಿಪಾದಿಸುತ್ತವೆ. ವಿವಿಧ ಬಗೆಯ ಪಾತ್ರಗಳಿಗೆ ಜೀವತುಂಬುವ ಕಲೆ ರಾಜ್‌ಕುಮಾರ್‌ ಅವರಿಗಿತ್ತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಚಿತ್ರಗಳ ಮೂಲಕ ಕನ್ನಡಾಭಿಮಾನವನ್ನು ಜನರಲ್ಲಿ ಬಿತ್ತಿದ ಜನಾನುರಾಗಿಯಾಗಿದ್ದರು ಎಂದರು.

ಕನ್ನಡ ನಾಡಿಗೆ ಬಲ ನೀಡಿದ ವರನಟ: ಚಿತ್ರರಂಗದ ಮೂಲಕ ಕನ್ನಡ ಭಾಷೆಯನ್ನು ಬೆಳೆಸಿ ಕನ್ನಡದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಡಾ. ರಾಜ್‌ಕುಮಾರ್‌ ಅವರ ಕೊಡುಗೆ ಅಪಾರವಾಗಿದೆ. ಗೋಕಾಕ್‌ ಚಳವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕನ್ನಡ ನಾಡಿಗೆ ಬಲ ನೀಡಿದ ಕೀರ್ತಿ ರಾಜ್‌ಗೆ ಸಲ್ಲುತ್ತದೆ ಎಂದು ತಿಳಿಸಿದರು.

ಡಾ.ರಾಜ್‌ಕುಮಾರ್‌ ಅವರಿಗೆ 70 ವರ್ಷ ದಾಟಿದ್ದರೂ ಉತ್ತಮ ಯೋಗಪಟುವಾಗಿದ್ದರು. ಅವರಲ್ಲಿದ್ದ ಮುಗ್ಧತೆ, ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿಯಾಗಿದೆ. ನಮ್ಮ ಜಿಲ್ಲೆಯವರೇ ಆಗಿರುವುದು ನಮ್ಮ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ಪರಿಪೂರ್ಣ ವ್ಯಕ್ತಿತ್ವ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿ, ಡಾ.ರಾಜ್‌ಕುಮಾರ್‌ ಅವರ ಹೆಸರಿನಲ್ಲೇ ಒಂದು ಆಗಾಧ ಶಕ್ತಿಯಿದೆ. ರಾಜ್‌ ಅವರು ಅಭಿನಯ, ಭಾಷೆ, ಪರಿಪೂರ್ಣ ವ್ಯಕ್ತಿತ್ವದಂತಹ ಮೂರು ಮಜಲುಗಳನ್ನು ಹೊಂದಿದ್ದರಿಂದ ಕಲಾದೇವತೆ ಅವರಿಗೆ ಒಲಿದಿದ್ದಳು ಎಂದರು.

ಧ್ರುವತಾರೆ: ಡಾ.ರಾಜ್‌ಕುಮಾರ್‌ ಮಹಾನ್‌ ಕಲಾವಿದರಾಗಿದ್ದರು. ಕನ್ನಡ ಭಾಷೆಯನ್ನು ನಾಡಿನ ಮನೆಮನೆಗಳಿಗೆ, ಹಳ್ಳಿ ಹಳ್ಳಿಗಳಿಗೆ ತಲುಪಿಸಿದ ಗೌರವ ರಾಜ್‌ ಅವರಿಗೆ ಸಲ್ಲಬೇಕು. ಅವರ ಅಭಿನಯದಲ್ಲಿ ಭಾವನಾತ್ಮಕ ಚಿಂತನೆಯಿತ್ತು. ದನಿಯಲ್ಲಿ ರೋಮಾಂಚನವಿತ್ತು. ಆ ಮೂಲಕ ರಾಜ್‌ಕುಮಾರ್‌ ಕನ್ನಡದಲ್ಲಿ ಎಂದೂ ಸಹ ಅಸ್ತಂಗತವಾಗದ ಧ್ರುವತಾರೆಯಾಗಿದ್ದಾರೆ ಎಂದು ತಿಳಿಸಿದರು.

ಪರಿಪೂರ್ಣ ಜೀವನಮೌಲ್ಯ: ಮೈಸೂರು ಆಕಾಶವಾಣಿ ಉದ್ಘೋಷಕ ಹಾಗೂ ಚಿಂತಕ ಉಮೇಶ್‌ ಅವರು ವಿಶೇಷ ಉಪನ್ಯಾಸ ನೀಡಿ ಡಾ ರಾಜ್‌ಕುಮಾರ್‌ ಅವರು ಅಭಿನಯದಲ್ಲಿ ಸಾಗರದಷ್ಟು ಆಳದ ದೈತ್ಯ ಪ್ರತಿಭೆ ಹೊಂದಿದ್ದರು. ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಜನಪದ ಕಥೆಗಳ ಆಧಾರಿತ ಎಲ್ಲಾ ಪಾತ್ರಗ‌ಳಲ್ಲಿ ನಟಿಸಿ ಕನ್ನಡ ಪ್ರಜ್ಞೆಯಾಗಿದ್ದಾರೆ. ಇವರ ಚಿತ್ರಗಳು ಪರಿಪೂರ್ಣ ಜೀವನಮೌಲ್ಯಗಳನ್ನು ಎತ್ತಿ ಹಿಡಿದು ಉತ್ತಮ ಅಭಿರುಚಿಯನ್ನು ಸೂಸುವಂತಿದ್ದವು. ಪ್ರತಿಭೆಯ ಜತೆಗೆ ನೋಡುಗರನ್ನು ತನ್ನತ್ತ ಸೆಳೆಯುವ ಶಕ್ತಿ ರಾಜ್‌ ಅವರಿಗಿತ್ತು ಎಂದ‌ರು.

ಕನ್ನಾಢಾಭಿಮಾನ ಹೆಚ್ಚು: ಮಹದೇಶ್ವರ, ಮಂಟೇಸ್ವಾಮಿಯಂತಹ ಸಿದ್ಧಪುರುಷರು ನಡೆದಾಡಿದ ನೆಲದಲ್ಲಿ ಜನಿಸಿದ ರಾಜ್‌ಕುಮಾರ್‌ ಅವರು ಕನ್ನಡಾಭಿಮಾನವನ್ನು ನಾಡಿನ ಜನತೆಯಲ್ಲಿ ಬಿತ್ತಿ ಬೆಳೆದವರು. ಯಾವುದೇ ಮಾದರಿಯ ಚಿತ್ರಗಳ ಪಾತ್ರಗಳಿಗೆ ಪರಾಕಾಯ ಪ್ರವೇಶ ಮಾಡುತ್ತಿದ್ದ ಕಲೆ ರಾಜ್‌ ಅವರಿಗೆ ಸಿದ್ದಿಸಿತ್ತು. ಅಲ್ಲದೆ ಆ ಪಾತ್ರಕ್ಕೆ ಜೀವ ತುಂಬುವ ದೈತ್ಯಶಕ್ತಿ ಹೊಂದಿದ್ದರು. ಸರ್ವಜ್ಞ, ಕಬೀರ, ಕನಕದಾಸ, ಕಾಳಿದಾಸ ರಂತಹ ವåಹಾನ್‌ ಸಂತರ ಪಾತ್ರಗಳಲ್ಲಿ ಸುಲಲಿತವಾಗಿ ಅಭಿನಯ ನೀಡಿದ್ದರು. ಎಲ್ಲಾ ಬಗೆಯ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಶ್ರೇಷ್ಠ ಗಾಯಕರು ಸಹ ಆಗಿದ್ದರು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ.ರಮೇಶ್‌, ಉಪನ್ಯಾಸಕ‌ ಸುರೇಶ್‌ ಋಗ್ವೇದಿ ಇದ್ದರು. ಜಿಲ್ಲೆಯ ಹೆಸರಾಂತ ಸ್ಥಳೀಯ ಕಲಾವಿದರು ನಡೆಸಿಕೊಟ್ಟ ಡಾ.ರಾಜ್‌ ಗೀತೆಗಳ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next