ಅಭಿಮಾನ ಅನ್ನೋದೇ ಹಾಗೆ. ತಮ್ಮ ಪ್ರೀತಿಯ ನಟರನ್ನೋ ಅಥವಾ ತಾವು ಇಷ್ಟಪಡುವ ಕ್ರೀಡಾಪಟುಗಳನ್ನೋ ತುಂಬು ಅಭಿಮಾನದಿಂದ ಕಾಣುವ ಮಂದಿ ಎಲ್ಲೆಡೆ ಕಾಣಸಿಗುತ್ತಾರೆ. ಅದೆಷ್ಟೋ ಮಂದಿ ಅಂತಹ ನಟರ, ಕ್ರೀಡಾಪಟುಗಳ ಭಾವಚಿತ್ರಗಳನ್ನು ಪೂಜಿಸುವುದುಂಟು. ಕರ್ನಾಟಕದ ವಿಷಯಕ್ಕೆ ಬಂದರೆ ಡಾ.ರಾಜಕುಮಾರ್ ಅವರ ಅದೆಷ್ಟೋ ಅಭಿಮಾನಿಗಳು ರಾಜ್ ಭಾವಚಿತ್ರವನ್ನು ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ.
ಈಗ ಹೊಸ ಸುದ್ದಿಯೆಂದರೆ, ಡಾ.ರಾಜಕುಮಾರ್ ಅವರ ಭಾವಚಿತ್ರಗಳಿರುವ ಅಂಗಿಯನ್ನು ಧರಿಸುವ ಮೂಲಕ ಮತ್ತಷ್ಟು ಅಭಿಮಾನ ಮೆರೆಯುತ್ತಿದ್ದಾರೆ ಎಂಬುದೇ ವಿಶೇಷ. ಹೌದು, ರಾಜಕುಮಾರ್ ಅವರು ನಟಿಸಿರುವ “ಆಪರೇಷನ್ ಡೈಮೆಂಡ್ ರಾಕೆಟ್’, “ಕಸ್ತೂರಿ ನಿವಾಸ’ ಮತ್ತು “ಮೇಯರ್ ಮುತ್ತಣ್ಣ’ ಚಿತ್ರಗಳಲ್ಲಿದ್ದ ಗೆಟಪ್‌ನ ಭಾವಚಿತ್ರಗಳಿರುವ ಅಂಗಿ ಸದ್ಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳ ಪಾಲಿಗೆ ಖುಷಿಯನ್ನು ಹೆಚ್ಚಿಸಿದೆ.
ಈ ಅಂಗಿಯಲ್ಲಿ ಕನ್ನಡದ ವರನಟ ಡಾ.ರಾಜಕುಮಾರ್ ಅವರ ಭಾವಚಿತ್ರಗಳು ರಾರಾಜಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೂಡ ಆ ಅಂಗಿ ಧರಿಸುವ ಕಾತುರದಲ್ಲಿದ್ದಾರೆ. ಹೀಗಾಗಿ ರಾಜಕುಮಾರ್ ಭಾವಚಿತ್ರವಿರುವ ಅಂಗಿ ಕನ್ನಡದ ಬ್ರಾಂಡ್ ಆಗುತ್ತಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ರಾಜಕುಮಾರ್ ಭಾವಚಿತ್ರ ಇರುವ ಅಂಗಿಯನ್ನು ಮೊದಲು ಧರಿಸಿದ್ದು, ಅವರ ಮೊಮ್ಮಗ ಧೀರೇನ್ ರಾಮ್‌ಕುಮಾರ್. ಹೌದು, ಧೀರೇನ್ ರಾಮ್‌ಕುಮಾರ್ ಅವರು ಹಿಂದೊಮ್ಮೆ ಎಲ್ಲೋ ಹೋಗಿದ್ದ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳ ಭಾವಚಿತ್ರ ಇರುವ ಶರ್ಟ್ ನೋಡಿದ್ದರಂತೆ.
ಆಗ ಅವರಿಗೆ ನಮ್ಮ ತಾತನ ಚಿತ್ರಗಳ ಫೋಟೋ ಬಳಸಿ ಯಾಕೆ ಅಂಗಿ ಮಾಡಿಸಬಾರದು ಎಂಬ ಯೋಚನೆ ಬಂದಿದೆ. ಕೊನೆಗೆ ಅವರು ಅದೇ ರೀತಿಯ ಅಂಗಿಯನ್ನು ಹೊಲಿಸಿಕೊಂಡು ಧರಿಸಿದ್ದಾರೆ. ಆ ಬಳಿಕ ಅದೊಂದು ಟ್ರೆಂಡ್ ಶುರುವಾಗಿದೆ. ಸದ್ಯಕ್ಕೆ ಒಂದಷ್ಟು ಅಭಿಮಾನಿಗಳು ರಾಜಕುಮಾರ್ ಭಾವಚಿತ್ರ ಇರುವ ಅಂಗಿಯನ್ನು ಧರಿಸಲು ಮುಗಿಬಿದ್ದಿದ್ದು, ಅದೇ ರೀತಿಯ ಶರ್ಟ್‌ಗಳನ್ನು ಕೊಳ್ಳಲು ಆರ್ಡರ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸಾಮಾಜಿಕ ತಾಣದಲ್ಲಿ ಇದು ಸದ್ದು ಮಾಡುತ್ತಿದೆ.