ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತಾ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐಗೆ ಮಹತ್ವದ ದಾಖಲೆ ಸಿಕ್ಕಿದೆ. ಶಾರದಾ ಚಿಟ್ ಫಂಡ್ ಹಗರಣದ ಮುಖ್ಯ ಸಂಚುಕೋರ ಸುದೀಪ್ತ ಸೇನ್ ಆಪ್ತ ಅಧಿಕಾರಿಯ ಜೊತೆಗೆ ರಾಜೀವ್ ಕುಮಾರ್ ಮಾತನಾಡಿದ ಐದಕ್ಕೂ ಹೆಚ್ಚು ಫೋನ್ ಕರೆಗಳ ವಿವರ ಸಿಬಿಐಗೆ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಿರುವ ಸಾಕ್ಷಿ ಸಮೇತ ಆರೋಪವನ್ನು ರಾಜೀವ್ ಕುಮಾರ್ ವಿರುದ್ಧ ಶೀಘ್ರದಲ್ಲೇ ಸಿಬಿಐ ದಾಖಲಿಸಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಿಧಾನ್ ನಗರ್ ಕಮಿಷನರ್ ಆಗಿದ್ದಾಗ ಕುಮಾರ್ ಈ ಫೋನ್ ಕರೆಗಳನ್ನು ಮಾಡಿದ್ದರು. ಆದರೆ ಎಸ್‌ಐಟಿಗೆ ಮುಖ್ಯಸ್ಥರಾದ ನಂತರ ಕರೆ ಮಾಡಲಾಗಿತ್ತೇ ಎಂಬ ಬಗ್ಗೆ ಯಾವುದೇ ವಿವರವನ್ನು ಸಿಬಿಐ ನೀಡಿಲ್ಲ. ರಾಜೀವ್ ಈ ಪ್ರಕರಣದಲ್ಲಿ ಭಾಗಿಯಾಗಿರುವ ವಿಷಯ ಪಶ್ಚಿಮ ಬಂಗಾಳದಲ್ಲಿ ಭಾರಿ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿತ್ತು. ಬಿಜೆಪಿ ಹಾಗೂ ಟಿಎಂಸಿ ಪರಸ್ಪರ ದೋಷಾ ರೋಪಣೆ ಗಳನ್ನು ಮಾಡಿಕೊಂಡಿದ್ದವು.