ಚೆನ್ನೈ: ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಆಶೀರ್ವಾದ ಪಡೆಯಲು ತಾನು ಅವರ ಪಾದಸ್ಪರ್ಶಿಸಿದ ಗಳಿಗೆಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಅಭಿಮಾನಿಗಳ ಜತೆ ಮಾತನಾಡುತ್ತ ಮೆಲುಕು ಹಾಕಿದರು.
ಚೆನ್ನೈನ ಕೋಡಂಬಾಕಂನಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಗುರುವಾರ ಅಭಿಮಾನಿಗಳ ಜತೆಗಿನ 3ನೇ ದಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಅವರು, ಯಾರೂ ತನ್ನ ಕಾಲಿಗೆ ಬೀಳಬೇಡಿ, ನೀವು ನಿಮ್ಮ ತಂದೆ, ತಾಯಿ, ದೇವರ ಕಾಲಿಗೆ ಬೀಳಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡ ರಜನಿಕಾಂತ್, ತಾನು ಬೆಂಗಳೂರಿನಲ್ಲಿದ್ದಾಗ ರಾಜ್ ಅವರ ಸಿನಿಮಾವನ್ನು ತುಂಬಾ ಕುತೂಹಲದಿಂದ ವೀಕ್ಷಿಸಿಸುತ್ತಿರುವುದಾಗಿ ಹೇಳಿದರು. ನಿಮ್ಮ(ಅಭಿಮಾನಿಗಳ) ಉತ್ಸಾಹ ಮತ್ತು ಸಾಮರ್ಥ್ಯದ ಬಗ್ಗೆ ತಿಳಿದಿದೆ. ನಾನು ಕೂಡಾ ಯುವಕನಾಗಿದ್ದಾಗ ಹೀಗೆ ಮಾಡಿದ್ದೆ, ನಾ 16ವರ್ಷದವನಾಗಿದ್ದಾಗ ಬೆಂಗಳೂರಿನಲ್ಲಿ ಡಾ.ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅವರು ನನಗೆ ಆದರ್ಶರಾಗಿದ್ದರು. ಅವರು ಖ್ಯಾತ ನಟರಾದ ಶಿವಾಜಿಗಣೇಶನ್ ಸರ್ ಹಾಗೂ ಎಂಜಿಆರ್ ಸರ್ ಅವರು ಸೇರಿದರೆ ಒಬ್ಬ ರಾಜ್ ಕುಮಾರ್ ಆಗಲು ಸಾಧ್ಯ ಎಂದು ಹೇಳಿದರು.
ಡಾ.ರಾಜ್ ಕುಮಾರ್ ಅವರು ತಮ್ಮ ಸಿನಿಮಾ ಶತದಿನೋತ್ಸವ ಪೂರೈಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ನಾನು ಆಗ ಮೊದಲ ಬಾರಿ ಅವರನ್ನು ಕಂಡಿದ್ದೆ. ಆಗ ನನ್ನ ಮನಸ್ಸಿನಲ್ಲಿ ರೀಲ್ ನಲ್ಲಿ ಅಭಿನಯಿಸುತ್ತಿದ್ದ ಚಿತ್ರ ನನ್ನ ಮನಸ್ಸಿನಲ್ಲಿ ಮೂಡಿತ್ತು, ಆದರೆ ಅವರು ನನ್ನ ಕಣ್ಣ ಮುಂದೆ ನಿಜವಾಗಿ ನಿಂತಿದ್ದನ್ನು ಕಂಡು ಆನಂದಕ್ಕೊಳಗಾಗಿದ್ದೆ, ನಾನು ಅವರ ಬಳಿ ಹೋದವನೇ ಪಾದ ಮುಟ್ಟಿ ನಮಸ್ಕರಿಸಿದ್ದೆ. ಈ ಹಿನ್ನೆಲೆಯಲ್ಲಿ ನಾನು ಕೂಡಾ ನಿಮ್ಮ ಅಭಿಮಾನವನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ರಜನಿ ತಮ್ಮ ಅನುಭವವನ್ನು ಬಿಚ್ಚಿಟ್ಟರು.