ಚಾಮರಾಜನಗರ: ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಸಮುಚ್ಚಯದ ಶಿಕ್ಷಣ ಸಂಸ್ಥೆಗಳ ಅಭಿವೃದ್ದಿ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಶಿವರಾತ್ರಿರಾಜೇಂದ್ರಸ್ವಾಮಿಗಳ 107ನೇ ಜಯಂತ್ಯುತ್ಸವ ಶ್ರೀಗಳ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಅವರಣದಿಂದ ವಿವಿಧ ಜನಪದ ಕಲಾತಂಡಗಳು 3500 ವಿದ್ಯಾರ್ಥಿನಿ ಯರೊಳಗೊಂಡ ಭವ್ಯ ಬೆಳ್ಳಿ ರಥದಲ್ಲಿರಿಸಿದ್ದ ರಾಜೇಂದ್ರಶ್ರೀಗಳ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸುತ್ತೂರು ಮಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶ್ರೀ ಡಾ. ಶಿವರಾತ್ರಿರಾಜೇಂದ್ರಸ್ವಾಮೀಜಿ ಯವರ 107ನೇ ಜಯಂತಿಯನ್ನು ಚಾಮರಾಜನಗರದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಶ್ರೀ ಮಠದ ಅಭಿವೃದ್ದಿ ಹಾಗೂ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳಿಗೆ ಶ್ರೀಗಳ ಕೊಡುಗೆಅಪಾರವಾಗಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹಕ್ಕೆ ಶೈಕ್ಷಣಿಕ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇಈ ಭಾಗದಲ್ಲಿ ಶಾಲೆಗಳನ್ನು ತೆರೆದು ಹೆಣ್ಣು ಮಕ್ಕಳಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ರಾಜೇಂದ್ರಶ್ರಿಗಳು ನೀಡಿದ್ದರು ಎಂದರು.
ಅವಕಾಶ ದೊರೆತಿರುವುದು ನನ್ನ ಪುಣ್ಯ: ಮಹಾನ್ ತಪಸ್ವಿಗಳಾದ ಶ್ರೀಗಳು ಬಹಳ ಕಷ್ಟಕಾಲದಲ್ಲಿ ಶ್ರೀಮಠವನ್ನು ಮುನ್ನಡೆಸಿ, ಭದ್ರ ಬುನಾದಿಯನ್ನು ಹಾಕಿ ಇಂದು ವಿಶ್ವ ಮಟ್ಟದಲ್ಲಿ ಸುತ್ತೂರು ಸಂಸ್ಥಾನ ಪ್ರಖ್ಯಾತಿಯನ್ನು ಹೊಂದಲು ಅವರ ಹಾಕಿಕೊಟ್ಟ ಮಾರ್ಗ, ಪರಿಶ್ರಮ ಕಾರಣವಾಗಿದೆ. ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಊಟಕ್ಕೆ ತೊಂದರೆಯಾದಾಗ ತಮ್ಮ ಚಿನ್ನದ ಕರಡಿಗೆಯನ್ನು ಮಾರಾಟ ಮಾಡಿ, ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿರುವ ನಿದರ್ಶನವನ್ನು ಕೇಳಿದ್ದೇನೆ. ಆದೇಹಾದಿಯಲ್ಲಿ ನಮ್ಮ ಈಗಿನ ಶ್ರೀಗಳಾದಶಿವರಾತ್ರಿದೇಶಿಕೇಂದ್ರಸ್ವಾಮಿಗಳು ಸಾಗುತ್ತಿದ್ದಾರೆ.
ರಾಜೇಂದ್ರಗಳ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರೀಗಳು ಶ್ರಮಿಸುತ್ತಿದ್ದಾರೆ, ಇಂದು ರಾಜೇಂದ್ರಶ್ರೀಗಳ 107ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದು ಸ್ಮರಿಸಿಕೊಂಡರು.
ಬಳಿಕ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಿಂದ ಚಾಮರಾಜೇಶ್ವರ ದೇವಾಲಯದವರೆಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳುಮೆರಗು ನೀಡಿದವು. ಹರವೆ ಮಠದ ಶ್ರೀಸರ್ಪಭೂಷಣಸ್ವಾಮೀಜಿ, ಮರಿಯಾಲ ಮಠದ ಶ್ರೀಮುರುಘರಾಜೇಂದ್ರ ಸ್ವಾಮೀಜಿ, ನಗರ ಮಠದ ಶ್ರೀಚನ್ನಬಸವಸ್ವಾಮೀಜಿ, ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಇದ್ದರು.