ಕೃಷಿಯಿಂದ ಏನು ಸಾಧ್ಯ? ಜೀವನ ನಡೆಸೋಕೆ ಆಗುತ್ತಾ ಅಂತ ಮೂಗು ಮುರಿಯೋರಿಗೆ, ರಾಜ್‌ಕುಮಾರರ ಬದುಕೇ ಸಾಕ್ಷಿ. ಬಹುಬೆಳೆ ಪದ್ಧತಿಯಿಂದ ವಾರ್ಷಿಕ ಇವರಿಗೆ 10 ಲಕ್ಷ ಆದಾಯ ಬರುತ್ತಿದೆ. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.
ಬೀದರ ತಾಲೂಕಿನ ನಾಗೋರಾ ಗ್ರಾಮದ ರಾಜಕುಮಾರ ರಾಯಗೊಂಡ ಅವರದು ಕೃಷಿ ಕುಟುಂಬ. ತಂದೆ ಅಡಿವೆಪ್ಪ 15 ವರ್ಷದ ಹಿಂದೆ ತೀರಿಕೊಂಡ ಬಳಿಕ, ಮೊದಲನೇ ವರ್ಷದ ಪಿ.ಯು.ಸಿಯಲ್ಲೇ ಓದನ್ನು ಮೊಟಕುಗೊಳಿಸಿದ ಈತ ತಮ್ಮ ಕೆಂಪು-ಕಪ್ಪು ಮಿಶ್ರಿತ ಜಮೀನಿನಲ್ಲಿಯೇ ಬಹುಬೆಳೆ ಪದ್ಧತಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕೈಗೊಂಡರು.
ಒಟ್ಟು 12 ಎಕರೆ ಜಮೀನಿದೆ. ಏಳು ಎಕರೆಗೆ ಹೊಸದಾಗಿ ಮೂರು ಕೊಳವೆಬಾವಿ ತೋಡಿಸಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ಎಕರೆಯಲ್ಲಿ ಪ್ರತಿಭಾ ತಳಿಯ ನಾಟಿ ಅರಿಷಿಣ ಗಡ್ಡೆ ಆಳೆತ್ತರಕ್ಕೆ ಸಮೃದ್ಧವಾಗಿ ಬೆಳೆದು ನಿಂತಿದೆ. ಇನ್ನುಳಿದ 5 ಎಕರೆಯಲ್ಲಿ ಕಳೆದ ಆರು ವರ್ಷಗಳಿಂದ ರೆಡ್‌ಲೇಡಿ ಪಪ್ಪಾಯ, ಜಿ-9 ಬಾಳೆ, ಕೇರಳ ಶುಂಠಿ, ಹೈಬ್ರಿಡ್ ಟೊಮೆಟೊ ಮತ್ತು ಗುಂಟೂರು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ.
ಹನಿ ನೀರಾವರಿ ಪದ್ಧತಿಯಿಂದ ಎಲ್ಲ ಬೆಳೆಗಳೂ ಉಳಿದಿವೆ. ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಿರುವುದರಿಂದ, ಹತ್ತು ಎಮ್ಮೆ, ಕೋಳಿ, ಪಾರಿವಾಳ, 2 ಆಡು ಮತ್ತು ಕುರಿ ಸಾಕಣೆ ಮಾಡಿ, ತೋಟಕ್ಕೆ ಬೇಕಾಗುವಷ್ಟು ತಿಪ್ಪೆಗೊಬ್ಬರ ಉತ್ಪಾದಿಸಿಕೊಳ್ಳುತ್ತಿದ್ದಾರೆ. ಬೆಳೆಗಳ ಕೀಟ ರೋಗ ಬಾಧೆಯ ಹತೋಟಿಗಾಗಿ ಜೀವಾಮೃತ ಮತ್ತು ಬೆಳ್ಳುಳ್ಳಿ, ಮೆಣಸಿನಕಾಯಿ ಕಷಾಯವನ್ನು ಬಳಸುತ್ತಿದ್ದಾರೆ.
ಇವರಲ್ಲಿ ಎರೆಹುಳುವಿನ 4 ತೊಟ್ಟಿಗಳಿವೆ. ಇದರಿಂದ ವರ್ಷಕ್ಕೆ 20 ಟನ್ ಎರೆಹುಳು ಗೊಬ್ಬರ ದೊರೆಯುತ್ತಿದೆ. ಒಂದು ಎಕರೆಯಲ್ಲಿ ಮಣ್ಣಿಲ್ಲದೆ ಹಣ್ಣು, ತರಕಾರಿಗಳನ್ನು ಪೋಷಕಾಂಶವುಳ್ಳ ನೀರಿನಲ್ಲಿಯೇ ಬೆಳೆಸಬಹುದಾದ ಹೈಡ್ರೋಪೋನಿಕ್ಸ್ ಪದ್ಧತಿಯಲ್ಲಿ ಮೇವು ಬೆಳೆಯುತ್ತಿದ್ದಾರೆ. ಕಳೆ ತೆಗೆಯುವ ಯಂತ್ರ, ಸೌರವಿದ್ಯುತ್ ಚಾಲಿತ ಪಂಪ್‌ಸೆಟ್, ಕೀಟ ನಿಯಂತ್ರಣಕ್ಕೆ ಸೋಲಾರ್ ಲೈಟ್ ಟ್ರ್ಯಾಪ್, ಹಂದಿಗಳನ್ನು ಓಡಿಸಲು ಗಾಳಿಯಂತ್ರ ಮುಂತಾದ ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಕೂಲಿ ಆಳುಗಳ ಕೊರತೆ ಕಾಡಿಲ್ಲ. ರಾಜಕುಮಾರರ ವಾರ್ಷಿಕ ಆದಾಯ 10 ಲಕ್ಷ ದಾಟಿದೆ. ಕೃಷಿಯಿಂದ ಲಾಭ ಇಲ್ಲ ಅನ್ನುವವರು ಇವರನ್ನು ನೋಡಿ ಕಲಿಯಬೇಕು. ಕೃಷಿಯ ಆದಾಯದಿಂದಲೇ ನನ್ನ ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದೇನೆ. ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುವ ರಾಜ್‌ಕುಮಾರರಿಗೆ, ಬಾಗಲಕೋಟೆಯ ತೋಟಗಾರಿಕೆ ವಿವಿಯ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ದೊರೆತಿದೆ.
-ಚಂದ್ರಕಾಂತ