Advertisement

ಎರಡೂ ತೋಳುಗಳ ಕಸಿ: ಏಷ್ಯಾದಲ್ಲೇ ಮೊದಲು; ಹೊಸ ವೈದ್ಯಕೀಯ ಮೈಲಿಗಲ್ಲನ್ನು ಸಾಧಿಸಿದ ಭಾರತ

10:26 AM Mar 18, 2023 | Team Udayavani |

ಜೈಪುರ: ಎರಡು ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಯಶಸ್ವಿಯಾಗಿ ತೋಳುಗಳ ಕಸಿ ಮಾಡುವ ಮೂಲಕ ಭಾರತ ಹೊಸ ವೈದ್ಯಕೀಯ ಮೈಲಿಗಲ್ಲನ್ನು ಸಾಧಿಸಿದೆ.

Advertisement

ರಾಜಸ್ಥಾನದ ಅಜ್ಮೀರ್‌ ಮೂಲದ ಪ್ರೇಮಾ ರಾಮ್(33) ಎರಡೂ ತೋಳುಗಳ ಕಸಿಗೆ ಒಳಗಾದ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾನೆ. ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೈಗಳನ್ನು ಕಳೆದುಕೊಂಡದ್ದೇಗೆ?: 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾ ರಾಮ್‌‌ ಅವರಿಗೆ ವಿದ್ಯುತ್‌ ಕಂಬದಿಂದ ಶಾಕ್ ತಾಗಿ ಕೈಗಳಿಗೆ ಗಂಭೀರ ಸ್ವರೂಪದ ಗಾಯಾಗಳಾಗುತ್ತವೆ. ಜೀವ ಉಳಿಯಬೇಕಾದರೆ ಕೈಗಳನ್ನು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಕೈಗಳಲ್ಲಿದೆ ಕೃತಕ ಕೈಗಳನ್ನು ಅಳವಡಿಸಲು ಕುಟುಂಬ ಪ್ರಯತ್ನಿಸುತ್ತದೆ.  ಅದರಿಂದ ಕೆಲಸ ಮಾಡಲು ಆಗುವುದಿಲ್ಲ. ತೋಳುಗಳ ಹಂತದಿಂದ ಕೈಗಳನ್ನು ಕತ್ತರಿಸಿದ ಬಳಿಕ ಕುಟುಂಬದವರ ಬೆಂಬಲದಿಂದ ಕೈಗಳು ಮಾಡಬೇಕಾದ ಕಾರ್ಯವನ್ನು ಕಾಲುಗಳಿಂದಲೇ ಮಾಡಲು ಪ್ರೇಮಾ ರಾಮ್‌ ಅಭ್ಯಾಸ ಮಾಡಿಕೊಳ್ಳುತ್ತಾರೆ.

ಹತ್ತಾಕ್ಕೂ ಹೆಚ್ಚಿನ ವರ್ಷದ ಬಳಿಕ ಇದೀಗ ಯಶಸ್ವಿಯಾಗಿ ಪ್ರೇಮಾ ರಾಮ್‌ ಎರಡೂ ತೋಳುಗಳ ಕಸಿ ಮಾಡಿಸಿಕೊಂಡಿದ್ದು, ಈ ಕಸಿ ಕ್ರಿಯೆ ಆದ ಏಷ್ಯಾದ ಮೊದಲ ವ್ಯಕ್ತಿ ಪ್ರೇಮಾ ರಾಮ್‌ ಆಗಿದ್ದಾರೆ.

“ನನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ನಾನು ತುಂಬಾ ನೊಂದುಕೊಂಡಿದ್ದೆ. ಆರಂಭದಲ್ಲಿ ಎಲ್ಲವೂ ಸವಾಲಾಗಿತ್ತು. ದಿನನಿತ್ಯದ ಕಾರ್ಯವನ್ನು ನಿರ್ವಹಿಸಲು ನಾನು ನನ್ನ ಸಹೋದರರು ಮತ್ತು ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬೇಕಾಗಿತ್ತು. ನಾನು ಯಾವತ್ತೂ ಸೋಲು ಒಪ್ಪಿಕೊಳ್ಳಲಿಲ್ಲ ಒಂದಲ್ಲ ಒಂದು ದಿನ ಈ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತದೆ ಎನ್ನುವ ಭಾವನೆ ನನ್ನಲ್ಲಿತ್ತು. ನಾನು ಕುಟುಂಬ ಹಾಗೂ ವೈದ್ಯರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನು ಬಿಇಡಿ ಶಿಕ್ಷಣವನ್ನು ಇತ್ತೀಚೆಗೆ ಮುಗಿಸಿದ್ದೇನೆ. ನನಗೆ ಜಗತ್ತಿನಲ್ಲಿ ಅಸಾಧ್ಯವೆನ್ನುವುದು ಯಾವುದು ಇಲ್ಲ. ನಾನು ಸ್ವಂತವಾಗಿ ಇನ್ನು ಏನನ್ನು ಬೇಕಾದರೂ ಮಾಡಬಹುದು ಎನ್ನುವುದು ಈಗ ಮನದಟ್ಟಾಗಿದೆ” ಎಂದು ಪ್ರೇಮಾ ರಾಮ್‌ ಹೇಳುತ್ತಾರೆ.

Advertisement

ಸದ್ಯ ಪ್ರೇಮಾ ರಾಮ್‌ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಇದು ಮುಂದಿನ 18 ರಿಂದ 24 ತಿಂಗಳುಗಳವರೆಗೆ ಮುಂದುವರಿಯುಲಿದೆ.

ಈ ಮೊದಲು ಯೂರೋಪಿನಲ್ಲಿ ಎರಡು ತೋಳುಗಳ ಕಸಿ ನಡೆದಿದ್ದು, ಏಷ್ಯಾದಲ್ಲಿ ಎರಡೂ ತೋಳುಗಳ ಕಸಿ ಇದೇ ಮೊದಲು ಎಂದು ಗ್ಲೋಬಲ್ ಆಸ್ಪತ್ರೆಗಳಲ್ಲಿ ಪ್ಲಾಸ್ಟಿಕ್, ಕೈ ಮತ್ತು ಪುನರ್ನಿರ್ಮಾಣ ಮೈಕ್ರೋಸರ್ಜರಿ ಮತ್ತು ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ ನಿಲೇಶ್ ಜಿ ಸತ್ಭಾಯ್ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next