ನವದೆಹಲಿ: ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ಪರಿಣಾಮ ರಾಜಸ್ಥಾನ್ ಸರ್ಕಾರ ಸೋಮವಾರದಿಂದ (ಏಪ್ರಿಲ್ 05) ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಿಸಿದ್ದು, ಮಲ್ಟಿಪ್ಲೆಕ್ಸ್ ಹಾಗೂ ಜಿಮ್ ಗಳನ್ನು ಬಂದ್ ಮಾಡಲು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ವಾರಾಂತ್ಯಕ್ಕೆ ಲಾಕ್ ಡೌನ್ ಜಾರಿಗೊಳಿಸಿದೆ.
ಇದನ್ನೂ ಓದಿ:ಮೌಲ್ಯಾಂಕನ ಕುರಿತ ನಿರ್ಧಾರ ಎರಡು ದಿನದಲ್ಲಿ ಪ್ರಕಟ: ಎಸ್. ಸುರೇಶ್ ಕುಮಾರ್
ರಾತ್ರಿ 8ರಿಂದ ಬೆಳಗ್ಗೆ 6ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಬಂದ್ ಆಗಿರಲಿದ್ದು, ಫುಡ್ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಮುಖ್ಯ ಗೃಹ ಕಾರ್ಯದರ್ಶಿ ಅಭಯ್ ಕುಮಾರ್ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ, 1ರಿಂದ 9ನೇ ತರಗತಿವರೆಗೆ ಏಪ್ರಿಲ್ ರಿಂದ 19ರವರೆಗೆ ರದ್ದುಪಡಿಸಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಕಾಲೇಜು ವಿದ್ಯಾರ್ಥಿಗಳ ತರಗತಿಗಳನ್ನು ರದ್ದುಪಡಿಸಲಾಗಿದೆ. ನರ್ಸಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸಭೆ, ಸಮಾರಂಭದಲ್ಲಿ 100ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಹೊರ ರಾಜ್ಯದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಆರ್ ಟಿ ಪಿಸಿಆರ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ರಾಜಸ್ಥಾನದಲ್ಲಿ ಕೋವಿಡ್ ಸೋಂಕಿತರ ಸಂಕ್ಯೆ 3,39,325ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2,829ಕ್ಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.