Advertisement
ಅನರ್ಹತೆ ನೋಟಿಸ್ ಪ್ರಶ್ನಿಸಿ ಬಂಡಾಯ ಶಾಸಕರು ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆ ಗುರುವಾರ ರಾತ್ರಿಯೇ ನಡೆಯಿತು.
ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಂದೂಡಿದ ನ್ಯಾಯಾಲಯವು ಅಂದು ಸಂಜೆ 5ರ ವರೆಗೆ ಸಚಿನ್ ಸಹಿತ ಯಾವುದೇ ಬಂಡಾಯ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಸ್ಪೀಕರ್‌ಗೆ ಸೂಚನೆ ನೀಡಿದೆ. ಈ ಮಧ್ಯೆ ಸ್ಪೀಕರ್ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ ಬಳಿಕ ಬಂಡಾಯ ಶಾಸಕರನ್ನು ವಾಪಸ್ ಕರೆತರುವ ಎಲ್ಲ ಯತ್ನಗಳು ಮುಗಿದಿವೆ ಎಂದು ಕಾಂಗ್ರೆಸ್ ಹೇಳಿದೆ.
Related Articles
ವಿಪ್ ಉಲ್ಲಂಘಿಸಿದ ಮತ್ತು ಪಕ್ಷ ವಿರೋಧಿ ಚಟುವಟಿಕೆಗಾಗಿ ಸಚಿನ್ ಸಹಿತ 19 ಕಾಂಗ್ರೆಸ್ ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲಷ್ಟೇ ವಿಪ್ ಅನ್ವಯವಾಗುತ್ತದೆ ಎನ್ನುವುದು ಬಂಡಾಯ ಶಾಸಕರ ವಾದ. ಹೀಗಾಗಿ ನೋಟಿಸ್ ವಿರುದ್ಧ ಗುರುವಾರ ಬೆಳಗ್ಗೆ ಶಾಸಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Advertisement
ಸಂಜೆ ಅರ್ಜಿ ವಿಚಾರಣೆಗೆ ಬಂದಾಗ ತರಾತುರಿಯಲ್ಲಿ ಅರ್ಜಿ ಸಲ್ಲಿಸಿರುವ ಕಾರಣ ಕೆಲವು ಅಂಶಗಳು ಬಿಟ್ಟುಹೋಗಿದ್ದು, ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂದು ಬಂಡಾಯ ಶಾಸಕರ ಪರ ವಕೀಲರು ಕೇಳಿಕೊಂಡರು. ಒಪ್ಪಿದ ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಮತ್ತಷ್ಟು ಶಾಸಕರ ನಿರೀಕ್ಷೆ?ಗುರುಗ್ರಾಮದ ಹೊಟೇಲ್‌ನಲ್ಲಿರುವ ಸಚಿನ್ ಪೈಲಟ್ ಬೆಂಬಲಿಗ ಶಾಸಕರು ಗುರುವಾರ ರಾತ್ರಿ ವಾಸ್ತವ್ಯ ಬದಲಿಸಿದ್ದಾರೆ. ಇನ್ನಷ್ಟು ಶಾಸಕರು ಬರಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ಕೊಠಡಿಗಳನ್ನು ಕಾದಿರಿಸಲಾಗಿದೆ ಎನ್ನಲಾಗುತ್ತಿದೆ. ವರವಾಗಲಿದೆಯೇ ಕರ್ನಾಟಕದ ತೀರ್ಪು?
2011ರ ಕರ್ನಾಟಕದ ಪ್ರಕರಣದಲ್ಲಿ ಸು.ಕೋ. ನೀಡಿರುವ ತೀರ್ಪು ಬಂಡಾಯ ಶಾಸಕರಿಗೆ ವರವಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಅಂದು ಸಿಎಂ ಬಿಎಸ್‌ವೈ ವಿರುದ್ಧ ಬಂಡಾಯವೆದ್ದಿದ್ದ 11 ಬಿಜೆಪಿ ಶಾಸಕರ ಅನರ್ಹತೆಯನ್ನು ಸು.ಕೋ. ವಜಾ ಮಾಡಿತ್ತು. ಸಿಎಂ ಮೇಲೆ ವಿಶ್ವಾಸವಿಲ್ಲ ಎಂದು ಶಾಸಕರು ಅಭಿಪ್ರಾಯಪಟ್ಟದ್ದಕ್ಕಾಗಿ ಅನರ್ಹಗೊಳಿಸಲಾಗದು ಎಂದಿತ್ತು. ರಾಜಸ್ಥಾನದಲ್ಲೂ ಪೈಲಟ್ ನೇತೃತ್ವದ ತಂಡವು ಬೇರೆ ಪಕ್ಷವನ್ನು ಬೆಂಬಲಿಸುವ ಅಥವಾ ಬಿಜೆಪಿಗೆ ಸೇರುವುದಾಗಿ ಹೇಳಿಲ್ಲ. ಕಳೆದ ವರ್ಷವೂ ಕಾಂಗ್ರೆಸ್ – ಜೆಡಿಎಸ್‌ನ 15 ಬಂಡಾಯ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲೇಬೇಕೆಂದು ಒತ್ತಡ ಹೇರುವಂತಿಲ್ಲ ಎಂದು ಸು. ಕೋ. ತೀರ್ಪು ನೀಡಿತ್ತು. ಈ ತೀರ್ಪು ಪರಿಗಣಿಸಿದರೆ ಪೈಲಟ್ ತಂಡಕ್ಕೆ ಜಯ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.