Advertisement

ಕನ್ಹಯ್ಯ ಹತ್ಯೆಗೆ ರಾಜಸ್ಥಾನ ಸರ್ಕಾರವೇ ಕಾರಣ; ರೇಣುಕಾಚಾರ್ಯ

05:34 PM Jul 05, 2022 | Team Udayavani |

ಹೊನ್ನಾಳಿ: ರಾಜಸ್ಥಾನದ ಉದಯಪುರದ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆಗೈದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಾಣ ಬೆದರಿಕೆ ಹಾಕಿದವರನ್ನು ಬಂಧಿಸಿದರೆ ಸಾಲದು, ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕನ್ಹಯ್ಯ ಲಾಲ್‌ ಜೀವ ಬೆದರಿಕೆ ಇದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಕನ್ಹಯ್ಯ ಲಾಲ್‌ ಹತ್ಯೆಗೆ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ. ಕೂಡಲೇ ರಾಷ್ಟ್ರಪತಿಗಳು ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ರಾಹುಲ್‌ ಗಾಂಧಿ ಯವರನ್ನು ಇಡಿ ಕಚೇರಿಗೆ ಕರೆದ ತಕ್ಷಣ ಪ್ರತಿಭಟನೆ ಮಾಡುವ ಕಾಂಗ್ರೆಸ್‌ನವರು, ಕನ್ಹಯ್ಯ ಲಾಲ್‌ ಹತ್ಯೆ ಮಾಡಿದಾಗ ಏಕೆ ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಪ್ರತಿಭಟನೆ ಮಾಡದ ನಿಮಗೆ ನಾಚಿಕೆಯಾಗಬೇಕು ಎಂದು ಕುಟುಕಿದರು.

ನನಗೆ ಎಷ್ಟೇ ಏಕವಚನದಲ್ಲಿ ಬೈಯಲಿ, ನಾನು ಅದನ್ನು ಕ್ಷೇತ್ರದ ಜನರ ಪಾದ ಕಮಲಗಳಿಗೆ ಅರ್ಪಿಸುತ್ತೇನೆ. ಈಗಾಗಲೇ ಅವಳಿ ತಾಲೂಕಿನ ಜನರು ಮೂರು ಬಾರಿ ನನ್ನನ್ನು ಗೆಲ್ಲಿಸಿ ಉತ್ತರ ನೀಡಿದ್ದಾರೆ. 2023ರ ಚುನಾವಣೆಯಲ್ಲೂ ಮತ್ತೆ ಉತ್ತರ ನೀಡುತ್ತಾರೆ ಎಂದರು.

ಶಾಸಕರ ನಿವಾಸದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ರಶ್ಮಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್‌, ಪುರಸಭೆ ಅಧ್ಯಕ್ಷ ಟಿ.ಎಚ್‌. ರಂಗನಾಥ್‌, ಬಗರ್‌ಹುಕುಂ ಸಾಗುವಳಿ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಇ. ನಾಗರಾಜ್‌, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ವಿವಿಧ ಪದಾಧಿಕಾರಿಗಳು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ನಾವೆಲ್ಲಾ ಭಾರತೀಯರು, ಭಾರತ್‌ ಮಾತಾಕೀ ಜೈ ಎಂದು ಹೇಳುವವರಿಗೆ ಮಾತ್ರ ಈ ನೆಲದಲ್ಲಿ ವಾಸಿಸಲು ಹಕ್ಕಿದೆ. ಪಾಕಿಸ್ತಾನ ಜಿಂದಾಬಾದ್‌ ಎನ್ನುವವರಿಗೆ ಇಲ್ಲಿರಲು ನೈತಿಕತೆ ಇಲ್ಲ. ಕಾಂಗ್ರೆಸ್‌ನವರು ಓಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಾ ಮಾಡುತ್ತಾ ಬಂದಿದ್ದಾರೆ. ನಾವೆಂದಿಗೂ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ.
ಎಂ.ಪಿ. ರೇಣುಕಾಚಾರ್ಯ,
ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next