ನವದೆಹಲಿ:ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ “ನಾವಿಬ್ಬರೂ ಒಂದು’ ಎಂಬ ಸಂದೇಶ ಸಾರಲು ಮುಂದಾಗಿದ್ದಾರೆ.
ಸಂದರ್ಶನವೊಂದರಲ್ಲಿ ಪೈಲಟ್ ಅವರನ್ನು “ವಿಶ್ವಾಸಘಾತುಕ’ ಎಂದು ಹೇಳಿ ವಿವಾದ ಸೃಷ್ಟಿಸಿದ ಬಳಿಕ ಕಾಂಗ್ರೆಸ್ ವರಿಷ್ಠ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಇಬ್ಬರು ನಾಯಕರು ನವದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ.
ಡಿ.4ರಂದು ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸಲಿರುವುದರಿಂದ ಮಂಗಳವಾರದ ಭೇಟಿ ಪ್ರಾಮುಖ್ಯತೆ ಪಡೆದಿದೆ. “ನಮಗೆ ಪಕ್ಷವೇ ಪ್ರಧಾನ. ಕಳೆದು ಹೋಗಿರುವ ವರ್ಚಸ್ಸನ್ನು ಮರು ಸ್ಥಾಪಿಸುವುದೇ ಆದ್ಯತೆ’ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಶಾಸಕ ಸಚಿನ್ ಪೈಲಟ್ ಮಾತನಾಡಿ “ಭಾರತ್ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ಸುಗೊಳಿಸುತ್ತೇವೆ. ಅದಕ್ಕೆ ಅದ್ಧೂರಿ ಸ್ವಾಗತ ನೀಡುತ್ತೇವೆ’ ಎಂದರು. ಇಂದೋರ್ನಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗೆಹ್ಲೋಟ್ ಮತ್ತು ಪೈಲಟ್ ಪಕ್ಷದ ಆಸ್ತಿ ಎಂದಿದ್ದರು.