Advertisement

ರಾಜಸ್ಥಾನ, ಛತ್ತೀಸ್‌ಗಢ, ಎಂಪಿ ಈಡೇರದ ಅಧಿಕಾರ ಹಂಚಿಕೆ

12:28 AM May 16, 2023 | Team Udayavani |

ಕರ್ನಾಟಕದಲ್ಲಿ ಅಭೂತಪೂರ್ವವಾಗಿ ಗೆದ್ದಿರುವ ಕಾಂಗ್ರೆಸ್‌ನಲ್ಲೀಗ ಮುಖ್ಯಮಂತ್ರಿ ಆಯ್ಕೆ ತಲೆನೋವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಈ ಸಂಬಂಧ ಹಗ್ಗಜಗ್ಗಾಟ ನಡೆಯುತ್ತಿದೆ. ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಜತೆಗೆ ಅಧಿಕಾರ ಹಂಚಿಕೆಗೆ ಒಪ್ಪುತ್ತಿಲ್ಲವಂತೆ. ಇದಕ್ಕೆ ಕಾರಣ ರಾಜಸ್ಥಾನ ಮತ್ತು ಛತ್ತೀಸ್‌ಗಢ‌ದಲ್ಲಿನ ಬೆಳವಣಿಗೆ. ಹಾಗಾದರೆ ಈ ಎರಡು ರಾಜ್ಯಗಳಲ್ಲಿ ಆಗಿದ್ದೇನು? ಯಾಕೆ ಈ ರಾಜ್ಯಗಳ ವಿಚಾರವೇ ಚರ್ಚೆಯಾಗುತ್ತಿದೆ?

Advertisement

ರಾಜಸ್ಥಾನ (ಗೆಹ್ಲೋಟ್-ಪೈಲಟ್‌)
2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆಗ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾಗಿದ್ದವರು ಸಚಿನ್‌ ಪೈಲಟ್‌. ಅಲ್ಲಿನ ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಪೈಲಟ್‌ ಅವರು ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು.

2013ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸೋತಿದ್ದು, ಇದಾದ ಬಳಿಕ 2014ರಲ್ಲಿ ಸಚಿನ್‌ ಪೈಲಟ್‌ ರಾಜಸ್ಥಾನ ಪಿಸಿಸಿಯ ಅಧ್ಯಕ್ಷ ಗಾದಿ ವಹಿಸಿಕೊಂಡು, ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟಿದ್ದರು. ಹೀಗಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದ ಮೇಲೆ ನಿರೀಕ್ಷಿತವಾಗಿಯೇ ಮುಖ್ಯಮಂತ್ರಿ ಹುದ್ದೆ ಕೇಳಿದ್ದರು.

ಕಾಂಗ್ರೆಸ್‌ ಹೈಕಮಾಂಡ್‌ಗೆ ಈ ವಿಚಾರ ಬಹಳ ತಲೆನೋವಾಗಿತ್ತು. ಅಶೋಕ್‌ ಗೆಹ್ಲೋಟ್ ಮತ್ತು ಸಚಿನ್‌ ಪೈಲಟ್‌ ಇಬ್ಬರೂ ಶಕ್ತಿ ಪ್ರದರ್ಶನ ಮಾಡಿದ್ದರು. ಅಂತಿಮವಾಗಿ ರಾಹುಲ್‌ ಗಾಂಧಿಯವರು, ಅಶೋಕ್‌ ಗೆಹ್ಲೋಟ್ ಅವರನ್ನು ಸಿಎಂ ಆಗಿ ಆರಿಸಿ, ಸಚಿನ್‌ ಪೈಲಟ್‌ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಯಿತು.

ಸಚಿನ್‌ ಪೈಲಟ್‌ ಅವರ ಬೆಂಬಲಿಗರು ಪ್ರತಿಪಾದಿಸಿದ್ದ ಪ್ರಕಾರ ಆಗ ಅಧಿಕಾರ ಹಂಚಿಕೆಯ ಸೂತ್ರವಾಗಿತ್ತು. ಮೊದಲ 2.5 ವರ್ಷ ಅಶೋಕ್‌ ಗೆಹ್ಲೋಟ್ ಮತ್ತು ಉಳಿದ 2.5 ವರ್ಷ ಸಚಿನ್‌ ಪೈಲಟ್‌ ಅವರು ಸಿಎಂ ಆಗಬೇಕು ಎಂಬ ನಿಯಮ ರೂಪಿತವಾಗಿತ್ತು. ಆದರೆ, ಅಶೋಕ್‌ ಗೆಹ್ಲೋಟ್ ಅವರ ಬೆಂಬಲಿಗರು ಇದನ್ನು ತಳ್ಳಿಹಾಕಿದ್ದರು.

Advertisement

ಕಡೆಗೆ 2022ರಲ್ಲಿ ಅಶೋಕ್‌ ಪೈಲಟ್‌ ವಿರುದ್ಧವೇ ಸಚಿನ್‌ ಪೈಲಟ್‌ ಮತ್ತು ಅವರ ಬೆಂಬಲಿಗರು ಬಂಡೆದಿದ್ದರು. ಆಗ ಸಚಿನ್‌ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಈ ಸಮಸ್ಯೆಯನ್ನು ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ನಿವಾರಿಸಿದ್ದರು. ಮುನಿಸಿಕೊಂಡಿದ್ದ ಸಚಿನ್‌ ಪೈಲಟ್‌ ಸಮಾಧಾನಗೊಂಡಿದ್ದರು. ಆದರೆ ಇವರಿಗೆ ಮತ್ತೆ ಡಿಸಿಎಂ ಹುದ್ದೆ ಸಿಗಲಿಲ್ಲ. ಈಗ ಮತ್ತೆ ಅಶೋಕ್‌ ಗೆಹ್ಲೋಟ್ ವಿರುದ್ಧವೇ ಬಂಡೆದ್ದಿರುವ ಪೈಲಟ್‌, ಮತ್ತೆ ಪಾದಯಾತ್ರೆ ಕೈಗೊಂಡು ಹೋರಾಟ ನಡೆಸಿದ್ದಾರೆ.

ಮೂಲಗಳು ಹೇಳುವಂತೆ 2022ರಲ್ಲಿ ಸಚಿನ್‌ ಪೈಲಟ್‌ ಅವರು ಬಂಡೇಳಲು ಪ್ರಮುಖ ಕಾರಣವೇ ಸಿಎಂ ಹುದ್ದೆ. ಆಗ ಅವರ ಬೆಂಬಲಿಗರು ಹುದ್ದೆ ಬಿಟ್ಟುಕೊಡುವಂತೆ ಅಶೋಕ್‌ ಗೆಹ್ಲೋಟ್ ಅವರನ್ನು ಕೇಳಿಕೊಂಡಿದ್ದರು. ಆಗ ಒಪ್ಪದೇ ಇದ್ದುದಕ್ಕೆ ಸಚಿನ್‌ ಪೈಲಟ್‌ ಬಂಡೆದಿದ್ದರು ಎಂದು ಹೇಳಲಾಗುತ್ತಿದೆ.

ಛತ್ತೀಸ್‌ಗಢ (ಬಗೇಲ್‌-ದಿಯೋ)
2018ರಲ್ಲೇ ರಾಜಸ್ಥಾನ ವಿಧಾನಸಭೆ ಚುನಾವಣೆ ಜತೆ ಜತೆಗೇ ಛತ್ತೀಸ್‌ಗಢ ದಲ್ಲಿಯೂ ಚುನಾವಣೆ ನಡೆದಿತ್ತು. ಆಗ ಬಿಜೆಪಿಯನ್ನು ಕಾಂಗ್ರೆಸ್‌ ಸೋಲಿಸಿತ್ತು. ವಿಶೇಷವೆಂದರೆ ಆಗ ಕಾಂಗ್ರೆಸ್‌ ಸಾಮೂಹಿಕ ನಾಯಕತ್ವದಲ್ಲಿ ನಡೆದು ಯಶಸ್ವಿಯಾಗಿತ್ತು. ಅಲ್ಲಿ ಭೂಪೇಶ್‌ ಬಗೇಲ್‌ ಮತ್ತು ಸಿಂಗ್‌ ದಿಯೋ ಅವರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆದಿತ್ತು.

ಆಗಲೂ ಇವರಿಬ್ಬರ ನಡುವೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸಂಧಾನ ನಡೆಸಿದ್ದರು. ಕಡೆಗೆ ಭೂಪೇಶ್‌ ಬಗೇಲ್‌ ಅವರನ್ನು ಸಿಎಂ ಸ್ಥಾನಕ್ಕೆ ಆರಿಸಲಾಗಿತ್ತು. ಅಲ್ಲದೆ ಇಬ್ಬರ ನಡುವೆ ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರ ಇಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಒಪ್ಪಿದ್ದ ಸಿಂಗ್‌ ದಿಯೋ ಭೂಪೇಶ್‌ ಬಗೇಲ್‌ ಅವರು ಮೊದಲ ಅವಧಿಗೆ ಸಿಎಂ ಆಗಲು ಒಪ್ಪಿಕೊಂಡಿದ್ದರು. ಬಿಜೆಪಿಯ ರಮಣ್‌ ಸಿಂಗ್‌ ಅವರು ಸಿಎಂ ಆಗಿದ್ದ ವೇಳೆ ಸಿಂಗ್‌ ದಿಯೋ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅತ್ಯಂತ ಯಶಸ್ವಿಯಾಗಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಅವರು ಪಕ್ಷದ ಪ್ರಣಾಳಿಕೆಯನ್ನೂ ರೂಪಿಸುವಲ್ಲಿಯೂ ನೆರವಾಗಿದ್ದರು. ಇದರಿಂದಾಗಿಯೇ ಬಿಜೆಪಿಯಲ್ಲಿ ಸೋಲಿಸಲಾಗಿತ್ತು ಎಂಬುದು ದಿಯೋ ಅವರ ಬೆಂಬಲಿಗರ ವಾದ.

ವಿಚಿತ್ರವೆಂದರೆ ಛತ್ತೀಸ್‌ಗಢದಲ್ಲಿಯೂ 2022ರಲ್ಲಿ ಭೂಪೇಶ್‌ ಬಗೇಲ್‌ ಮತ್ತು ಸಿಂಗ್‌ ದಿಯೋ ಬೆಂಬಲಿಗರ ನಡುವೆ ಸಂಘರ್ಷ ಉಂಟಾಗಿತ್ತು. ಸಿಂಗ್‌ ದಿಯೋ ಅವರು ಭೂಪೇಶ್‌ ವಿರುದ್ಧ ಸಿಟ್ಟಿಗೆದ್ದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಉಳಿದ ನಾಲ್ಕು ಸಚಿವ ಸ್ಥಾನಗಳನ್ನು ತಮ್ಮಲ್ಲೇ ಇರಿಸಿಕೊಂಡಿದ್ದರು.

ಆಗ ಅಧಿಕಾರ ಹಂಚಿಕೆಯ ಸೂತ್ರ ಮುಂದಿಟ್ಟುಕೊಂಡು ದಿಯೋ ಬೆಂಬಲಿಗರು ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಆದರೆ ಭೂಪೇಶ್‌ ಬಗೇಲ್‌ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಲಿಲ್ಲ. ಕಡೆಗೆ ಮತ್ತೆ ಹೈಕಮಾಂಡ್‌ ಮಧ್ಯಪ್ರವೇಶಿಸಿ ಭೂಪೇಶ್‌ ಮತ್ತು ದಿಯೋ ಮಧ್ಯೆ ಸಂಧಾನ ಏರ್ಪಡಿಸಿ ವಿವಾದ ತಣ್ಣಗಾಗಿಸಿತ್ತು.

ಮಧ್ಯ ಪ್ರದೇಶ (ಕಮಲ್‌-ಸಿಂಧಿಯಾ)
2018ರಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಮತ್ತೂಂದು ರಾಜ್ಯ ಮಧ್ಯಪ್ರದೇಶ. ಇಲ್ಲಿಯೂ ಕಾಂಗ್ರೆಸ್‌ ಹಿರಿಯ ನಾಯಕ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ನಡುವೆ ಸಿಎಂ ಗಾದಿಗಾಗಿ ಫೈಟ್‌ ನಡೆದಿತ್ತು.

2018ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕಮಲ್‌ನಾಥ್‌ ಅವರು ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾಗಿದ್ದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಇವರಿಬ್ಬರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಪಕ್ಷದ ಗೆಲುವಿಗಾಗಿ ರಾಜ್ಯಾದ್ಯಂತ ಓಡಾಡಿದ್ದರು. ಆಗಲೂ ಯುವನೇತಾರರಾಗಿದ್ದ ಸಿಂಧಿಯಾ ಅವರೇ ಸಿಎಂ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಕಮಲ್‌ನಾಥ್‌ ಅವರಿಗೆ ಮಣೆ ಹಾಕಿತು. ಆದರೆ ಕಮಲ್‌ನಾಥ್‌ ಅವರ ಸರಕಾರ ಹೆಚ್ಚು ದಿನ ಬಾಳಲಿಲ್ಲ. ಮೊದಲೇ ಅಸಮಾಧಾನಗೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಬೆಂಬಲಿಗರನ್ನು ಬಿಜೆಪಿ ಸೆಳೆದುಕೊಂಡಿತು. ಕಮಲ್‌ನಾಥ್‌ ಸರಕಾರ ಬಿದ್ದಿತು.

Advertisement

Udayavani is now on Telegram. Click here to join our channel and stay updated with the latest news.

Next