Advertisement

ಯಾರಿಗೂ ಭಯ ಬೇಡ : ಸಿಎಎ ಜನಜಾಗೃತಿ ಸಮಾವೇಶದಲ್ಲಿ ರಾಜನಾಥ ಸಿಂಗ್‌

11:01 AM Jan 28, 2020 | Team Udayavani |

ಮಂಗಳೂರು: “ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಮುಸ್ಲಿಮರು ಸಹಿತ ಯಾರೂ ಭಯಪಡಬೇಡಿ. ನೀವೆಲ್ಲರೂ ಭಾರತದ ನಾಗರಿಕರಾಗಿಯೇ ಇರುತ್ತೀರಿ. ಈ ಕಾಯ್ದೆಯಿಂದ ನಿಮಗೆ ಯಾವತ್ತೂ ತೊಂದರೆ ಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಭರವಸೆ ನೀಡಿದ್ದಾರೆ.

Advertisement

ಬಿಜೆಪಿ ರಾಜ್ಯ ಸಮಿತಿಯು ಸಿಎಎ ಪರ ಜನ ಜಾಗೃತಿ ಮೂಡಿಸಲು ಮಂಗಳೂರಿನ ಕೂಳೂರು ಬಳಿಯ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಸೋಮವಾರ ಆಯೋಜಿ ಸಿದ್ದ ಬೃಹತ್‌ ಸಮಾವೇಶದಲ್ಲಿ ರಾಜನಾಥ ಸಿಂಗ್‌ ದಿಕ್ಸೂಚಿ ಭಾಷಣ ಮಾಡಿದರು. ಕಾಂಗ್ರೆಸ್‌ನವರು ಸಿಎಎ ಮುಂದಿಟ್ಟುಕೊಂಡು ಮುಸ್ಲಿಮರಲ್ಲಿ ಭಯದ ವಾತಾ ವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆ ಮೂಲಕ ಅಶಾಂತಿ ಸೃಷ್ಟಿಸುವ ಪ್ರಯತ್ನವಿದು. ಆದರೆ ಈ ದೇಶದ ಮುಸ್ಲಿಮರು ಕಾಂಗ್ರೆಸ್‌ನವರ ಈ ರೀತಿಯ ಯತ್ನಕ್ಕೆ ಕಿವಿಗೊಡಬಾರದು. ಮುಸ್ಲಿಮರ ಜತೆಗೆ ಬಿಜೆಪಿಯಿದ್ದು, ಸಿಎಎ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದರು.

ಸರ್ವಧರ್ಮ ಸಮಭಾವ ಭಾರತದ ಸಂಸ್ಕೃತಿ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಪ್ರಧಾನಿ ಮೋದಿ ಅವರ ಆಡಳಿತ ಧ್ಯೇಯ. ಸರಕಾರದ ಯಾವುದೇ ಸೌಲಭ್ಯಗಳನ್ನು ಧರ್ಮದ ಆಧಾರದಲ್ಲಿ ನೀಡಿಲ್ಲ. ಸಿಎಎ ಕಾನೂನು ಯಾವುದೇ ಸಮುದಾಯ, ಧರ್ಮಕ್ಕೆ ಹೊಡೆತ ನೀಡಲು ಮಾಡಿದ್ದಲ್ಲ. ಬಿಜೆಪಿ ಕಾರ್ಯ ಕರ್ತರು ಇದನ್ನು ಮುಸ್ಲಿಂ ಸಹೋದರರಿಗೆ ಮನವರಿಕೆ ಮಾಡಬೇಕು ಎಂದವರು ಕರೆ ನೀಡಿದರು. ಭಾರತವು ವಿಭಜನೆಯಾದಾಗ ಪಾಕಿಸ್ಥಾನದಲ್ಲಿ ಧಾರ್ಮಿಕ ಕಾರಣಗಳಿಂದ ದೌರ್ಜನ್ಯಕ್ಕೊಳಗಾದವರು ಭಾರತಕ್ಕೆ ಬರಲು ಬಯಸಿದರೆ ಅದಕ್ಕೆ ಭಾರತ ಸ್ಪಂದಿಸಬೇಕೆಂದು ಗಾಂಧೀಜಿಯವರು ನೆಹರೂರನ್ನು ಕೋರಿದ್ದರು.

ಅಂಥವರಿಗೆ ಪೌರತ್ವ ನೀಡಬೇಕು ಎಂದಿದ್ದರು. ಅಂದು ಗಾಂಧೀಜಿ ಬಯಸಿದ್ದನ್ನು ಮೋದಿ ಸರಕಾರ ಈಗ ಸಾಕಾರ ಗೊಳಿಸಿದೆ. ಸಿಎಎ ಜಾರಿಗೆ ತಂದು ಭಾರತ ತನ್ನ ನೈತಿಕ ಕರ್ತವ್ಯವನ್ನು ಪೂರೈಸಿದೆ ಎಂದು ರಕ್ಷಣಾ ಸಚಿವರು ನುಡಿದರು.

ಸಿಎಎ ಜಾರಿ ಮಾಡದಿರುವುದು ದೊಡ್ಡ ಪ್ರಮಾದ
ಕೆಲವು ರಾಜ್ಯಗಳು ಸಿಎಎ ಅನುಷ್ಠಾನ ಮಾಡುವುದಿಲ್ಲ ಎಂದು ನಿರ್ಣಯ ಅಂಗೀಕರಿಸಿವೆ. ಸಿಎಎ ಕೇಂದ್ರ ಸರಕಾರದ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ಕಾನೂನು ಆಗಿದೆ. ಅದನ್ನು ಜಾರಿ ಮಾಡುವುದಿಲ್ಲ ಎಂದು ಹೇಳುವುದು ಅತಿ ದೊಡ್ಡ ತಪ್ಪು ಎಂದರು.

Advertisement

ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಈಡೇರಿಸುವ ಕಾರ್ಯ ಮಾಡಿದೆ. ಅಯೋಧ್ಯೆ ಯಲ್ಲಿ ಭವ್ಯ ರಾಮಮಂದಿರ ನಿರ್ಮಿಸುವುದಾಗಿ ಪ್ರಣಾಳಿಕೆ ಯಲ್ಲಿ ಭರವಸೆ ನೀಡಿದ್ದೇವೆ. ಈಗ ಸುಪ್ರೀಂ ತೀರ್ಪು ಬಂದಿದ್ದು, ಅಲ್ಲಿ ರಾಮ ಮಂದಿರ ನಿರ್ಮಿಸುತ್ತೇವೆ. ಯಾವುದೇ ಶಕ್ತಿಗೂ ಇದು ತಡೆಯಲು ಸಾಧ್ಯವಿಲ್ಲ ಎಂದರು.

ಯಾರನ್ನೂ ಕೆಣಕುವುದಿಲ್ಲ, ಕೆಣಕಲು ಬಂದರೆ ಬಿಡುವುದಿಲ್ಲ
ಭಾರತವು ಈಗ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ; ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ವಿರಾಜಮಾನವಾಗಿದೆ. ನಾವು ಯಾರನ್ನೂ ಕೆಣಕಲು ಹೋಗುವುದಿಲ್ಲ. ನಮ್ಮನ್ನು ಯಾರಾದರೂ ಕೆಣಕಲು ಬಂದರೆ ಬಿಡುವುದೂ ಇಲ್ಲ. ನಿಮಗೆ ಪುಲ್ವಾಮಾ ಘಟನೆ ನೆನಪಿರ ಬಹುದು. ನಮ್ಮ ದೇಶದೊಳಗೆ ಭಯೋತ್ಪಾದನೆ ನಡೆಸಿದ ಭಯೋತ್ಪಾದಕರನ್ನು ಪಾಕ್‌ ನೆಲದೊಳಗೆ ನುಗ್ಗಿ ಸದೆ ಬಡಿದಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.

48 ನಿಮಿಷಗಳ ಕಾಲ ರಾಜನಾಥ ಮಾತು
ಸಂಜೆ 4.18ಕ್ಕೆ ವೇದಿಕೆಗೆ ಆಗಮಿಸಿದ ರಾಜನಾಥ ಸಿಂಗ್‌ 4.58ಕ್ಕೆ ಭಾಷಣವನ್ನು ಆರಂಭಿಸಿ 5.46ಕ್ಕೆ ಮುಕ್ತಾಯಗೊಳಿಸಿ ದರು. ಒಟ್ಟು 48 ನಿಮಿಷಗಳ ಕಾಲ ಮಾತನಾಡಿದರು.

ಮಂಗಳೂರು ರಥೋತ್ಸವ ಉಲ್ಲೇಖ
ಮಂಗಳೂರಿಗೆ ಭವ್ಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ವಾಣಿಜ್ಯ ಮತ್ತು ಔದ್ಯಮಿಕವಾಗಿಯೂ ಮಂಗಳೂರಿಗೆ ಹೆಚ್ಚಿನ ಮಹತ್ವವಿದೆ. ಮಂಗಳೂರು ರಥೋತ್ಸವವು ಪ್ರಸಿದ್ಧವಾಗಿದ್ದು, ದೇಶಾದ್ಯಂತದ ಜನರು ಇದರಲ್ಲಿ ಭಾಗವಹಿಸುತ್ತಾರೆ ಎಂದು ರಕ್ಷಣಾ ಸಚಿವರು ತಮ್ಮ ಭಾಷಣದಲ್ಲಿ ಉಲ್ಲೇಖೀಸಿದರು.

ಪಿಒಕೆ ಭಾರತದ ಭಾಗವಾಗಲಿದೆ
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗುವ ಕನಸನ್ನು ಸಾಕಾರಗೊಳಿಸಿದ್ದೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಕೂಡ ನಮ್ಮ ಭಾಗವಾಗಲಿದೆ ಎಂದು ಸಿಂಗ್‌ ಹೇಳಿದರು.

ವಿರೋಧ ಏಕೆ? ಕಾಂಗ್ರೆಸ್‌ಗೆ ಪ್ರಶ್ನೆ
ವಾಜಪೇಯಿ ಪ್ರಧಾನಿ ಮತ್ತು ಆಡ್ವಾಣಿಯವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಡಾ| ಮನಮೋಹನ್‌ ಸಿಂಗ್‌ ಅವರು ಪಾಕ್‌, ಬಾಂಗ್ಲಾ ಮತ್ತು ಅಫ್ಘಾನಿಸ್ಥಾನಗಳಲ್ಲಿ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಪೌರತ್ವ ಕೊಡಬೇಕು ಎಂದು ಒತ್ತಾಯಿಸಿದ್ದರು ಎಂದು ನೆನಪಿಸಿದ ರಕ್ಷಣಾ ಸಚಿವರು, “ನಿಮ್ಮದೇ ನಾಯಕರ ಬೇಡಿಕೆಯನ್ನು ಈಡೇರಿಸಿದ್ದೇವೆ. ಮತ್ಯಾಕೆ ನೀವು ವಿರೋಧಿಸುತ್ತೀರಿ?’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಬಹಿರಂಗವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next