ಮಲೆನಾಡು ಪ್ರದೇಶದ ತಾಲೂಕುಗಳಾದ ಸಾಗರ ,ಹೊಸನಗರ,ತೀರ್ಥಹಳ್ಳಿ ತಾಲೂಕುಗಳಲ್ಲಿ ರಾಗಿ ,ತೊಗರಿ ಬೆಳೆಗಳು ಕಾಣೋದು ಕಷ್ಟ. ಕಳೆದ ವರ್ಷ ಹಲವು ಬೆಳೆಗಳನ್ನು ಫಸಲು ಕುಸಿತ ಮತ್ತು ಮಾರುಕಟ್ಟೆ ದರದ ಏರು ಪೇರಿನ ಕಾರಣ ಈ ಭಾಗದ ರೈತರು ಕಡಿಮೆ ಪರಿಶ್ರಮ ಮತ್ತು ಕಡಿಮೆ ಖರ್ಚು ತಗಲುವ ಕೃಷಿ ನಡೆಸುತ್ತ ಸಾಗಿದ್ದಾರೆ. ಇಂಥ ಸಂದರ್ಭದಲ್ಲೇ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿಯ ಯುವ ರೈತ ಬಿ.ರಘುರಾಮ, ಈ ವರ್ಷ ರಾಗಿ ಕೃಷಿ ನಡೆಸಿದ್ದು ಬಂಪರ್ ಫಸಲು ದೊರೆತಿದೆ.
ಕೃಷಿ ಹೇಗೆ ?: ಸಾಗರ-ತೀರ್ಥಹಳ್ಳಿ ಹೆದ್ದಾರಿಯ ಯಡೇಹಳ್ಳಿಯಲ್ಲಿ ಇವರ ಹೊಲವಿದೆ. ಒಣ ಮಣ್ಣಿನಿಂದ ಕೂಡಿದ ಜಮೀನು ಇವರದು. ಹಲವು ರ್ಷಗಳಿಂದ ಈ ಹೊಲದಲ್ಲಿ ಶುಂಠಿ,ಹತ್ತಿ, ಮೆಕ್ಕೆಜೋಳ,ಭತ್ತ ಇತ್ಯಾದಿ ಕೃಷಿ ನಡೆಸಿದ್ದ ಇವರು ಈ ವರ್ಷ ರಾಗಿ ಬೆಳೆಯಲು ನಿರ್ಧರಿಸಿದರು.ಈ ವರ್ಷದ ಜೂನ್ ಕೊನೆಯ ವಾರದ ಸುಮಾರಿಗೆ ಹೊಲವನ್ನು ಟ್ರಾಕ್ಟರ್ ನಿಂದ ಹದಗೊಳಿಸಿ ಜುಲೈ ಮೊದಲವಾರ ರಾಗಿ ಬೀಜ ಬಿತ್ತನೆ ಮಾಡಿದರು. 3 ಎಕರೆ ಹೊಲದಲ್ಲಿ 26 ಕೆಜಿ ರಾಗಿ ಬೀಜ ಬಿತ್ತಿದ್ದರು. ಮೊಳಕೆಯೊಡೆದು ಗಿಡವಾಗಿ ಬೆಳೆಯಲಾರಂಭಿಸುತ್ತಿದ್ದಂತೆ 20:20 ಕಾಂಪ್ಲೆಕ್ಸ್ ಗೊಬ್ಬರ ನೀಡಿದ್ದರು.
ನಂತರ 25 ದಿನಕ್ಕೆ ಒಮ್ಮೆಯಂತೆ ಇನ್ನು 2 ಸಲ ಗೊಬ್ಬರ ನೀಡಿದ್ದರು.ಈ ವರ್ಷ 2 3 ದಿನಕ್ಕೊಮ್ಮೆ ಹಗುರ ಮಳೆಯಾದ ಕಾರಣ ಹದವಾಗಿ ನೀರು ದೊರೆತಂತಾಗಿ ರಾಗಿ ಹುಲುಸಾಗಿ ಬೆಳೆದಿದೆ. ಇವರ ಕೃಷಿಗೆ ತಾಯಿ ನಾಗಮ್ಮ ಪ್ರತಿ ಹಂತದಲ್ಲಿ ಮಾರ್ಗದರ್ಶನ ಮಾಡಿದ್ದು ಯಶಸ್ವಿ ಕೃಷಿಗೆ ಕಾರಣರಾಗಿದ್ದಾರೆ.
ಲಾಭ ಹೇಗೆ ?: ಇವರು ಮೂರು ಎಕರೆ ಹೊಲದಲ್ಲಿ ರಾಗಿ ಬೆಳೆಯಲು ಭೂಮಿ ಹದಗೊಳಿಸಿದ್ದು,ರಾಗಿ ಬೀಜ ಖರೀದಿ,ಬಿತ್ತನೆ ಕೂಲಿ, ಕಳೆ ನಿರ್ವಹಣೆ, ಗೊಬ್ಬರ.. ಇತ್ಯಾದಿ ಎಲ್ಲ ಲೆಕ್ಕಹಾಕಿದರೂ ಸುಮಾರು ರೂ.24 ಸಾವಿರ ಖರ್ಚಾಗಿದೆ. ರಾಗಿ ಗಿಡಗಳು ಹುಲುಸಾಗಿ ಬೆಳೆದು ಬಂಪರ್ ಫಸಲು ದೊರತಿದೆ. ಎಕರೆಗೆ ಸರಾಸರಿ 20 ಕ್ವಿಂಟಾಲ್ ನಂತೆ ಒಟ್ಟು 50 ಕ್ವಿಂಟಾಲ್ ಪಸಲು ಸಿಕ್ಕಿದೆ.ರಾಗಿ ಕ್ವಿಂಟಾಲ್ ಗೆ ರೂ.2000 ಮಾರುಕಟ್ಟೆ ದರವಿದೆ.
ಇದರಿಂದ ಇವರಿಗೆ ಸುಮಾರು ರೂ.1 ಲಕ್ಷ ಆದಾಯ ದೊರೆತಿದೆ. ಕೃಷಿ ನಿರ್ವಹಣೆ ಖರ್ಚನ್ನಲ್ಲ ಕಳೆದರೆ ರೂ.80 ಸಾವಿರ ಲಾಭ ದೊರೆಯುತ್ತದೆ. ಕಟಾವಾದ ಬಳಿಕ ರಾಗಿ ಗಿಡಗಳ ಒಣ ಕಾಂಡಗಳು ಜಾನುವಾರುಗಳಿಗೆ ಮೇವಾಗಿ ಬಳಕೆಯಾಗುವ ಕಾರಣ ಇದರಿಂದ ಸಹ ಆದಾಯ ದೊರೆತಿದೆ. ರಾಗಿಗೆ ಪ್ರಾಣಿ ಪಕ್ಷಿಗಳ ಕಾಟವೂ ಇಲ್ಲ,ಗಿಡಗಳಿಗೆ ರೋಗ ಬಾಧೆಯೂ ಇಲ್ಲದ ಕಾರಣ ಲಾಭದ ಕೃಷಿ ಇದು ಎಂಬ ಅನುಭವದ ಮಾತು ಇವರದಾಗಿದೆ.
ಮಾಹಿತಿಗಾಗಿ ಇವರ ಮೊಬೈಲ್ ಸಂಖ್ಯೆ 9880373258 ನ್ನು ಸಂಪರ್ಕಿಸಬಹುದಾಗಿದೆ.
* ಎನ್.ಡಿ.ಹೆಗಡೆ ಆನಂದಪುರಂ