Advertisement

ರಾಜಾಡಿ ಕಿಂಡಿ ಅಣೆಕಟ್ಟು: ಗೇಟು ಅಳವಡಿಕೆಗೆ ರೈತರ ಆಗ್ರಹ

06:31 PM Nov 11, 2020 | mahesh |

ಕುಂದಾಪುರ: ತಲ್ಲೂರು ಗ್ರಾಮದ ರಾಜಾಡಿ ಕಳುವಿನ ಬಾಗಿಲಿನಲ್ಲಿ 4.44 ಕೋ.ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದರಿಂದ ಈ ಭಾಗದ ಹತ್ತಾರು ಊರುಗಳ ನೂರಾರು ಮಂದಿ ರೈತರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಆದರೆ ಕಾಮಗಾರಿಯೆಲ್ಲ ಪೂರ್ಣಗೊಂಡಿದ್ದು, ಇನ್ನೀಗ 10-15 ದಿನಗಳಲ್ಲಿ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭವಾಗಲಿದ್ದು, ಅಣೆಕಟ್ಟಿಗೆ ಬಾಗಿಲು (ರೇಡಿಯಲ್‌ ಗೇಟು) ಅಳವಡಿಸದಿದ್ದರೆ ಗದ್ದೆಗಳಿಗೆ ಉಪ್ಪು ನೀರು ದಾಂಗುಡಿಯಿಡುತ್ತದೆ.

Advertisement

ರಾಜಾಡಿಯ ಈ ಕಿಂಡಿ ಅಣೆಕಟ್ಟುವಿಗೆ ತುರ್ತಾಗಿ ರೇಡಿಯಲ್‌ ಗೇಟುಗಳನ್ನು ಹಾಕಬೇಕು. ಇದರಿಂದ ಈ ಭಾಗದ ನೂರಾರು ಎಕರೆ ಗದ್ದೆಗಳಿಗೆ ಅನುಕೂಲವಾಗಲಿದೆ ಎನ್ನುವುದು ಇಲ್ಲಿನ ರೈತರ ಬೇಡಿಕೆಯಾಗಿದೆ.

4.44 ಕೊ..ರೂ. ವೆಚ್ಚ
ಈ ರಾಜಾಡಿ ಕಳುವಿನ ಬಾಗಿಲು ಬಳಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕು ಎನ್ನುವುದು ರಾಜಾಡಿ, ತಲ್ಲೂರು, ಕೋಟೆಬಾಗಿಲು, ಹರೇ ಗೋಡು, ಕನ್ಯಾನ ಮತ್ತಿತರ ಭಾಗದ ರೈತರ 15 ವರ್ಷಗಳ ಬೇಡಿಕೆಯಾಗಿತ್ತು. ಅನೇಕ ವರ್ಷಗಳ ಬೇಡಿಕೆಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಸ್ಪಂದಿಸಿದ್ದು, ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟಿಗಾಗಿ 4.44 ಕೋ.ರೂ. ಅನುದಾನವನ್ನು ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಜನವರಿ, ಫೆಬ್ರವರಿ ಯಲ್ಲೇ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ಈಗ ಮಳೆಗಾಲವು ಮುಗಿದಿರು ವುದರಿಂದ ರೇಡಿಯಲ್‌ ಗೇಟುಗಳನ್ನು ಇಳಿಸಲು ಸೂಕ್ತ ಸಮಯ ಎನ್ನುವುದು ರೈತರ ಆಗ್ರಹವಾಗಿದೆ.

ನೂರಾರು ಎಕರೆ ಗದ್ದೆ
ಈ ಕಿಂಡಿ ಅಣೆಕಟ್ಟುವಿನಿಂದ ರಾಜಾಡಿ, ಕೋಟೆಬಾಗಿಲು, ತಲ್ಲೂರು, ಕನ್ಯಾನ, ಹರೇಗೋಡು, ತೋಟಬೈಲು, ಗುಬ್ಬುಕೋಣ ಸುತ್ತಮುತ್ತಲಿನ ಪರಿಸರದ ಸಾವಿರಾರು ಮಂದಿ ರೈತರ ನೂರಕ್ಕೂ ಮಿಕ್ಕಿ ಎಕರೆ ಗದ್ದೆಗಳಿಗೆ ಅನುಕೂಲವಾಗಲಿದೆ. ಈಗ ಹಲಗೆ (ಗೇಟು) ಅಳವಡಿಸದಿದ್ದರೆ ಈ ಎಲ್ಲ ಪ್ರದೇಶಗಳ ಗದ್ದೆಗಳಿಗೂ ಉಪ್ಪು ನೀರು ನುಗ್ಗಿ, ಹಿಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಅಡ್ಡಿಯಾಗಲಿದೆ.

ಶಾಸಕರಿಗೂ ಮನವಿ
ರಾಜಾಡಿಯ ಕಿಂಡಿ ಅಣೆಕಟ್ಟಿನ ಗೇಟುಗಳನ್ನು ಕೂಡಲೇ ಅಳವಡಿಸಲು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಹಾಗೂ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟಿಸಬೇಕು ಎನ್ನುವುದಾಗಿ ಇಲ್ಲಿನ ರೈತರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ಬಗ್ಗೆ ಕೂಡಲೇ ಗಮಹರಿಸಲಾಗುವುದು. ಉದ್ಘಾಟನೆ ಸಂಬಂಧ ಸಂಸದರ ಬಳಿ ಮಾತನಾಡಿ ದಿನ ನಿಗದಿಪಡಿಸ ಲಾಗುವುದು ಎನ್ನುವುದಾಗಿ ಭರವಸೆ ನೀಡಿದ್ದಾರೆ.

Advertisement

ಶೀಘ್ರ ಅಳವಡಿಕೆ
ರಾಜಾಡಿ ಕಿಂಡಿ ಅಣೆಕಟ್ಟಿನ ಗೇಟುಗಳನ್ನು ಶೀಘ್ರ ಅಳವಡಿಸಲಾಗುವುದು. ಇನ್ನು ಕೂಡ ಕೆಲವೆಡೆಗಳಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಕಾರ್ಯ ಮುಗಿದಿಲ್ಲ. ಕಟಾವು ಪೂರ್ಣಗೊಳ್ಳದೇ ಗೇಟು ಹಾಕಿದಲ್ಲಿ, ಗದ್ದೆಗಳಿಗೆ ನೀರು ನುಗ್ಗಿ, ಹಾನಿಯಾಗುವ ಸಂಭವವೂ ಇದೆ. ಕಟಾವು ಮುಗಿದ ತತ್‌ಕ್ಷಣ ಅಳವಡಿಸಲಾಗುವುದು.
– ನಾಗಲಿಂಗ ಎಚ್‌., ಕಿರಿಯ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ ಕುಂದಾಪುರ

ಗದ್ದೆಗೆ ಉಪ್ಪು ನೀರು
ಹರೇಗೋಡು ಸೇರಿದಂತೆ ಸುತ್ತಮುತ್ತಲಿನ ನೂರಾರು ಎಕರೆ ಗದ್ದೆಗಳಿಗೆ ಈಗಾಗಲೇ ಉಪ್ಪು ನೀರು ನುಗ್ಗುತ್ತಿದ್ದು, ಕೂಡಲೇ ಕಿಂಡಿ ಅಣೆಕಟ್ಟುವಿಗೆ ಗೇಟು ಅಳವಡಿಸದಿದ್ದರೆ ಎರಡನೇ ಬೆಳೆಗೆ ಸಮಸ್ಯೆಯಾಗಲಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ.
– ವಿಶ್ವನಾಥ ಗಾಣಿಗ ಹರೇಗೋಡು, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next