ಡಾ.ರಾಜಕುಮಾರ್ ಹುಟ್ಟಿದ್ದು ಗಾಜನೂರಿನಲ್ಲಿ. ಅವರು ಹುಟ್ಟಿದ ಮನೆ ಈಗಲೂ ಇದೆ. ಈ ಕುರಿತ ಪೀಠಿಕೆ ಯಾಕೆ ಎಂಬ ಪ್ರಶ್ನೆ ಸಹಜ. ಆ ಮನೆಯಲ್ಲಿ ಇದುವರೆಗೆ ಶಿವರಾಜ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್‌ರಾಜಕುಮಾರ್ ಚಿತ್ರಗಳು ಚಿತ್ರೀಕರಣವಾಗಿಲ್ಲ. ಆದರೆ, ರಾಜ್ ಮೊಮ್ಮಗ ವಿನಯ್ ರಾಜಕುಮಾರ್ ಅವರ ಚಿತ್ರದ ಟೀಸರ್‌ಗಾಗಿ ಅಣ್ಣಾವ್ರು ಹುಟ್ಟಿದ ಆ ಗಾಜನೂರು ಮನೆಯಲ್ಲಿ ಚಿತ್ರೀಕರಣಗೊಂಡಿದೆ ಎಂಬುದೇ ವಿಶೇಷ.
ಅಂದಹಾಗೆ, ಆ ಚಿತ್ರ “ಗ್ರಾಮಾಯಣ’. ಈಗಾಗಲೇ ಚಿತ್ರದ ಮೊದಲ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ ಬಂದಿದ್ದು ಗೊತ್ತೇ ಇದೆ. ಆ ಸಿನಿಮಾದ ಟೀಸರ್ ನೋಡಿದವರು, ವಿನಯ್‌ರಾಜಕುಮಾರ್ ಅವರು ಹೊಸ ಗೆಟಪ್‌ನಲ್ಲಿ ಸಖತ್ ರಾ ಆಗಿ ಕಾಣುತ್ತಾರೆ ಎಂದಿದ್ದರು. ಆ ಚಿತ್ರ ಸದ್ಯದ ಮಟ್ಟಿಗೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವುದು ನಿಜ. ಈಗ ಶೇ.50 ರಷ್ಟು ಚಿತ್ರೀಕರಣ ಗೊಂಡಿದ್ದು, ಇತ್ತೀಚೆಗೆ ವಿನಯ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೊಂದು ಟೀಸರ್ ಬಿಡುಗಡೆಯಾಗಿತ್ತು.
ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡ ಆ ಟೀಸರ್‌ಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಒಂದು ನಿಮಿಷಗಳ ಕಾಲ ಇರುವ ಆ ಟೀಸರ್ ಪಕ್ಕಾ ಮಾಸ್ ಆಗಿದ್ದು, ಹಿನ್ನೆಲೆ ಸಂಗೀತ ಕೂಡ ಅದ್ಭುತವಾಗಿದೆ. ಎರಡನೇ ಟೀಸರ್ ಟ್ರೆಂಡಿಂಗ್‌ನಲ್ಲಿದ್ದು, 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಮೆಚ್ಚುಗೆ ಪಡೆದಿದೆ. ದೇವನೂರು ಚಂದ್ರು ನಿರ್ದೇಶನದ ಈ ಚಿತ್ರವನ್ನು ಎಲ್‌ಎಂಕೆ μಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಎನ್‌ಎಲ್‌ಎನ್ ಮೂರ್ತಿ ನಿರ್ಮಾಣ ಮಾಡಿದ್ದಾರೆ.
ನಿರ್ಮಾಪಕರು ಡಾ.ರಾಜಕುಮಾರ್ ಅಭಿಮಾನಿಯಾಗಿದ್ದು, ಪ್ರೀತಿಯಿಂದಲೇ ಅವರು ವಿನಯ್ ರಾಜಕುಮಾರ್ ಅವರನ್ನು ಹೊಸ ರೀತಿ ಈ ಸಿನಿಮಾದಲ್ಲಿ ತೋರಿಸುವ ಆಸೆ ಹೊಂದಿದ್ದಾರೆ. ಕಥೆ ಪಕ್ಕಾ ಗ್ರಾಮೀಣ ಸೊಗಡು ಹೊಂದಿದ್ದು, ಈಗಿನ ವಾಸ್ತವತೆಗೆ ಹೇಳಿ ಮಾಡಿಸಿದ ಕಥೆ ಆದ್ದರಿಂದ ಚಿತ್ರ ನಿರ್ಮಾಣ ಮಾಡಿದ್ದಾಗಿ ಹೇಳುತ್ತಾರೆ. ಬೆಂಗಳೂರು, ದೇವನೂರು, ಅರಸಿಕೆರೆ, ಬಾಣವಾರ, ಕಡೂರು ಸುತ್ತಮುತ್ತ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ವಿನಯ್‌ರಾಜಕುಮಾರ್ ಇದೇ ಮೊದಲ ಬಾರಿಗೆ ವಿಶೇಷ ಗೆಟಪ್ ಹಾಗು ಪಾತ್ರದಲ್ಲಿ ಮಿಂಚಿದ್ದಾರೆ.
ಅವರಿಲ್ಲಿ ಸೀನ ಎಂಬ ಪಾತ್ರ ಮಾಡುತ್ತಿದ್ದು, ಹುಟ್ಟೂರು ಬಿಟ್ಟು ಬೆಂಗಳೂರು ಸೇರುವ ಇವತ್ತಿನ ಹುಡುಗರ ಪೈಕಿ, ತನ್ನೂರಲ್ಲೇ ಕೆಲಸ ಮಾಡಿ, ಏನಾದರೊಂದು ಸಾಧನೆ ಮಾಡಬೇಕು ಎಂದು ಹಂಬಲಿಸುವ ಪಾತ್ರವನ್ನು ವಿನಯ್ ಮಾಡಿದ್ದಾರಂತೆ. ಊರಲ್ಲಿ ಆಗುವಂತಹ ಕೆಲವು ಅನ್ಯಾಯದ ವಿರುದ ಪ್ರತಿಭಟಿಸುವ ಪಾತ್ರವಂತೆ ಅದು. ಐದು ಭರ್ಜರಿ ಫೈಟ್ಸ್ ಇರಲಿದ್ದು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಸಂಗೀತವಿದೆ. ಅಭಿಷೇಕ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸೀತಾಕೋಟೆ, ಮಂಜುನಾಥ್ ಹೆಗ್ಡೆ, ಶ್ರೀನಿವಾಸ ಪ್ರಭು, ಸಂಪತ್‌ಕುಮಾರ್, ಧರ್ಮಣ್ಣ ಇತರರು ಇದ್ದಾರೆ.