ಈ ಚಿಟಿ ಚಿಟಿ ಮಳೆಯಲ್ಲಿ ಸಂಜೆ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕೆನಿಸಿ ದಾಗ ಮೊದಲು ನೆನಪಾಗುವುದು ಬೋಂಡಾ ಬಜ್ಜಿ. ಆದರೆ ಯಾವಾಗಲೂ ಬೋಂಡಾ ಬಜಿ ತಿನ್ನೋದಕ್ಕೆ ಬೇಜಾರು. ಈ ಹೊತ್ತಿನಲ್ಲಿ ವಿಭಿನ್ನ ರುಚಿಯ ಬಿಸಿಬಿಸಿ ತಿಂಡಿಗಳನ್ನು ಮಾಡಿ ಸವಿಯಿರಿ. ಜೊತೆಗೆ ಬಿಸಿಬಿಸಿ ಕಾಫಿ ಅಥವಾ ಚಹಾ ಹೀರುತ್ತಿದ್ದರೆ ಸಂಜೆ ಸರಿದದ್ದೇ ಗೊತ್ತಾಗುವುದಿಲ್ಲ.
ಆಲೂ ಕಟ್ಲೇಟ್
ಬೇಕಾಗುವ ಸಾಮಗ್ರಿ: 2 ಆಲೂಗಡ್ಡೆ, 1 ಈರುಳ್ಳಿ, ತುರಿದ ಶುಂಠಿ-ಬೆಳ್ಳುಳ್ಳಿ, ಖಾರದ ಪುಡಿ, ಗರಮ್ ಮಸಾಲಾ 1/2 ಚಮಚ, ಜೋಳದ ಹಿಟ್ಟು – 4 ಟೀ ಚಮಚ, ರವೆ ಹಿಟ್ಟು – 3 ಟೀ ಚಮಚ, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕರಿಬೇವು.
ತಯಾರಿಸುವ ವಿಧಾನ: ಆಲೂಗಡ್ಡೆಗಳನ್ನು ಚೆನ್ನಾಗಿ ಕುದಿಸಿ, ಅವು ಚೆನ್ನಾಗಿ ಬೆಂದ ನಂತರ ಕಿವುಚಿ ಒಂದೆಡೆ ತೆಗೆದಿಡಿ. ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಅದರಲ್ಲಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ, ಬೆಳ್ಳುಳ್ಳಿ , ಗರಮ್ ಮಸಾಲೆ, ಖಾರದ ಪುಡಿ, ಹಸಿಮೆಣಸಿನಕಾಯಿ ಹಾಕಿ, ನಂತರ ಕಿವುಚ್ಚಿಟ್ಟ ಆಲೂಗಡ್ಡೆಯನ್ನು ಅದಕ್ಕೆ ಸೇರಿಸಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಕಿ ಸ್ವವ್‌ನಿಂದ ಕೆಳಗಿಳಿಸಿ 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಇನ್ನೊಂದೆಡೆ ಜೋಳದ ಹಿಟ್ಟು ಮತ್ತು ರವೆಯನ್ನು ಸ್ವಲ್ಪ ಬಿಸಿ ನೀರನ್ನು ಹಾಕಿ ಬೆರೆಸಿಕೊಳ್ಳಿ. ಆಲೂಗಡ್ಡೆ ಮಿಶ್ರಣವನ್ನು ಕಟ್ಲೇಟ್ ಆಕಾರಕ್ಕೆ ತಟ್ಟಿಕೊಳ್ಳಿ. ತಟ್ಟಿಕೊಂಡ ಆಲೂಗಡ್ಡೆ ಮಿಶ್ರಣದ ಎರಡೂ ಬದಿ ರವೆಹಿಟ್ಟು ಜೋಳದ ಹಿಟ್ಟಿನ ಮಿಶ್ರಣವನ್ನು ಹಚ್ಚಿ, ನಂತರ ಕಾದ ಎಣ್ಣೆಯಲ್ಲಿ ಒಂದೊಂದೆ ಕಟ್ಲೇಟ್ ತೇಲಿ ಬಿಡಿ. ಕೆಂಪಾದ ಬಳಿಕ ಹೊರ ತೆಗೆಯಿರಿ. ರುಚಿಯಾದ ಕಟ್ಲೇಟ್ ಸವಿಯಲು ಸಿದ್ಧ. ಟೊಮೆಟೊ ಸಾಸ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಆಲೂ ಕಟ್ಲೇಟ್ ಚೆನ್ನಾಗಿರುತ್ತದೆ.
ವೆಜಿಟೇಬಲ್ ಪಕೋಡಾ
ಬೇಕಾಗುವ ಸಾಮಗ್ರಿ: ಬಡೆಸೋಪು, ಕೊತ್ತಂಬರಿ ಬೀಜ, (ಬಡೆಸೋಪು, ಕೊತ್ತಂಬರಿ ಬೀಜಗಳನ್ನು ಒಟ್ಟಿಗೆ ಪುಡಿ ಮಾಡಿಕೊಳ್ಳಬೇಕು), ಅಜುವಾನ, ಕಡಲೆ ಹಿಟ್ಟು, ಉಪ್ಪು, ಎಣ್ಣೆ, ಮೆಂತೆ ಸೊಪ್ಪು, ಕ್ಯಾರೆಟ್, ದೊಣ್ಣೆಮೆಣಸು, ಆಲೂಗೆಡ್ಡೆ, ಕಾಯಿಮೆಣಸು, ಪಾಲಕ್ ಸೊಪ್ಪು, ಬದನೆ, ಈರುಳ್ಳಿ, ಪನ್ನೀರ್, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ನೀರು.
ಮಾಡುವ ವಿಧಾನ: ಮೇಲಿನ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಯೊಂದರಲ್ಲಿ ಮಿಶ್ರಣಗೊಳಿಸಿ ಹತ್ತು ನಿಮಿಷಗಳ ಕಾಲ ಹಾಗೆಯೇ ಪಕ್ಕದಲ್ಲಿಟ್ಟುಕೊಳ್ಳಿರಿ. ಮಿಶ್ರಗೊಳಿಸುವ ಅವಧಿಯಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿರಿ. ತವಾವೊಂದರಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಅವುಗಳನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ. ಬಳಿಕ ಎಣ್ಣೆಯಿಂದ ಬೇರ್ಪಡಿಸಿ. ಸವಿಯಲು ಕೊಡಿ.
ಪರಿಪ್ಪು ವಡ
ಬೇಕಾಗುವ ಸಾಮಗ್ರಿ: ಕಡ್ಲೆ ಬೇಳೆ, ಈರುಳ್ಳಿ, ಹಸಿಮೆಣಸು, ಜೀರಿಗೆ, ಕಾಳುಮೆಂಸಿನ ಪುಡಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಎಣ್ಣೆ
ತಯಾರಿಸುವ ವಿಧಾನ: ಕಡ್ಲೆ ಬೇಳೆಯನ್ನು ತೊಳೆದು ಸುಮಾರು 4 ರಿಂದ 5 ಗಂಟೆ ನೆನೆಸಿ ತೆಗೆದಿಡಿ. ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಸರಿಯಾದ ದ್ರವ್ಯತೆಗಾಗಿ ಕೊಂಚ ನೀರು ಸೇರಿಸಿ. ತರಿತರಿಯಾಗಿ ರುಬ್ಬಿ. ಇದಕ್ಕೆ ಜೀರಿಗೆ, ಹಸಿಮೆಣಸು, ಕರಿಬೇವಿನ ಎಲೆ, ಈರುಳ್ಳಿ, ಕಾಳುಮೆಣಸು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮತ್ತೂಮ್ಮೆ ಮಿಕ್ಸಿಗೆ ಹಾಕಿ ರುಬ್ಬಿ. ದಪ್ಪ ತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮಿಶ್ರಣವನ್ನು ಚಿಕ್ಕದಾಗಿ ರೊಟ್ಟಿಯಂತೆ ತಟ್ಟಿ. ಎಣ್ಣೆಯಲ್ಲಿ ಬಿಡಿ. ನಡುನಡುವೆ ತಿರುವುತ್ತಾ ಹುರಿಯಿರಿ. ಸುಮಾರು ಕೆಂಬಣ್ಣ ಬಂದ ಬಳಿಕ ತೆಗೆಯಿರಿ. ಬಿಸಿಬಿಸಿಯಿಂದಂತೆಯೇ ಕಾಯಿಚಟ್ನಿ, ಟೊಮೆಟೊ ಕೆಚಪ್‌ನೊಂದಿಗೆ ಸರ್ವ್ ಮಾಡಿ.
ಸುಲಭಾ ಆರ್. ಭಟ್