ಬೆಂಗಳೂರು: ನಗರದ 2,515 ಕಡೆ ಮಳೆ ನೀರು ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಆ ಪೈಕಿ ಮೂರು ವರ್ಷದಲ್ಲಿ 479 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಬುಧವಾರ ಹೈಕೋರ್ಟ್‌ಗೆ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಿದೆ.
ನಗರದಲ್ಲಿ ಮಳೆ ನೀರು ಕಾಲುವೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಸಿಟಿಜನ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಮುಖ್ಯ ಇಂಜಿನಿಯರ್ (ಮಳೆ ನೀರು ಕಾಲುವೆ ವಿಭಾಗ) ಬಿ.ಎಸ್. ಪ್ರಹ್ಲಾದ್ ಮಳೆ ನೀರು ಕಾಲುವೆಗಳ ಕುರಿತ ವಸ್ತುಸ್ಥಿತಿ ವರದಿಯನ್ನು ಪ್ರಮಾಣಪತ್ರ ರೂಪದಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2,515 ಕಡೆ ಮಳೆ ನೀರು ಕಾಲುವೆ ಒತ್ತುವರಿ ಗುರುತಿಸಲಾಗಿದೆ. ಇದರಲ್ಲಿ 2016-17 ಮತ್ತು 2017-18ರಲ್ಲಿ 428 ಮತ್ತು 2018-19ರಲ್ಲಿ 51 (ಇದುವರೆಗೆ) ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಉಳಿದಂತೆ 450 ಒತ್ತುವರಿಗಳ ಸರ್ವೆ ಪೂರ್ಣಗೊಳಿಸಿ, 399 ಪ್ರಕರಣಗಳ ತೆರವಿಗೆ ಗುರುತಿಸಲಾಗಿದೆ. 1,637 ಕಡೆ ಸರ್ವೆ ಕೈಗೊಳ್ಳಬೇಕಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ “ಅಂತರ್ ಇಲಾಖಾ ಸಮನ್ವಯ ಸಮಿತಿ’ ತೆರವು ಕಾರ್ಯಾಚರಣೆಯ ಪರಿಶೀಲನೆ ನಡೆಸುತ್ತಿದೆ.
ಪಾಲಿಕೆ ವ್ಯಾಪ್ತಿಯ ಎಂಟು ಕಾರ್ಯನಿರ್ವಾಹಕ ಇಂಜಿನಿಯರುಗಳು, ಕೋರಮಂಗಲ ವ್ಯಾಲಿಯ ಒಬ್ಬ ಕಾರ್ಯನಿರ್ವಾಹಕ ಅಭಿಯಂತರರು ತಮ್ಮ ವಲಯಗಳ ವ್ಯಾಪ್ತಿಯಲ್ಲಿ ಮಳೆ ನೀರು ಕಾಲುವೆಗಳ ಒಂದಾವರ್ತಿ ಹೂಳು ತೆಗೆಯಲು ಟೆಂಡೆರ್ ಕರೆದಿದ್ದಾರೆ. ಈ ಟೆಂಡರ್‌ಗಳಿಗೆ 2018ರ ಡಿ.24ರಂದು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈಗಾಲೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದು, ಕಾರ್ಯಾದೇಶ ಪಡೆದ 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ಇದಲ್ಲದೇ 842 ಕಿ.ಮೀ. “ಲೈನ್ ಕ್ಯಾನಲ್’ (ಎರಡು ಬದಿಗಳಲ್ಲಿ ತಡೆಗೋಡೆಗಳು ಇರುವ ಮಳೆ ನೀರು ಕಾಲುವೆ) ಪೈಕಿ 400 ಕಿ.ಮೀ ವಿಸ್ತೀರ್ಣದ ವಾರ್ಷಿಕ ನಿರ್ವಹಣೆಗೆ 2018ರ ಅ.10ರಂದು ಟೆಂಡರ್ ಕರೆಯಲಾಗಿದೆ. ಇದರ ಅನುಮೋದನೆಗಾಗಿ 2019ರ ಜ.17ರಂದು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು ಎಂದು ಪ್ರಮಾಣಪತ್ರದಲ್ಲಿ ಬಿಬಿಎಂಪಿ ಹೇಳಿದೆ.