Advertisement
ಸಾಂಪ್ರದಾಯಿಕಕ್ಕಿಂತ ಭಿನ್ನವಾಗಿ ತಡವಾಗಿ ಸುರಿಯುತ್ತಿರುವ ಭಾರೀ ಮಳೆ ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಅಡಿಕೆ ಬೆಳೆ ನಾಶವಾಗುತ್ತಿದ್ದರೆ, ಭತ್ತದ ಬೆಳೆಯೂ ಕೈಗೆ ಸಿಗುವ ಹಾಗಿಲ್ಲ.
Related Articles
ಅಡಿಕೆ ಬೆಳೆಯ ಸಮಸ್ಯೆ ಒಂದೆಡೆಯಾದರೆ ಭತ್ತದ ಬೆಳೆಯ ರೈತನಿಗೂ ಮಳೆಯ ಸಮಸ್ಯೆ ಕಾಡುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ನೇಜಿ ನಾಟಿ ಮಾಡಿದ್ದ ರೈತ ವರ್ಗ ಸೆಪ್ಟಂಬರ್ ತಿಂಗಳಾದರೂ ಕಡಿಮೆಗೊಳ್ಳದ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದಾನೆ. ನಾಟಿ ಮಾಡಿದ ನೇಜಿ ಪ್ರಸ್ತುತ ಪೈರಾಗಿ ಬೆಳೆದಿದ್ದು, ತೆನೆ ಬಿಡುವ ಸಮಯವಾಗಿದೆ. ಈ ಹಂತದಲ್ಲಿ ಮಳೆ ಬಿದ್ದರೆ ರೈತನ ಪಾಲಿಗೆ ಭತ್ತದ ಕಾಳಿನ ಬದಲಿಗೆ ಜೊಳ್ಳು ಮಾತ್ರ ಸಿಗುತ್ತದೆ. ತೆನೆ ಬಿಡುವ ಸಂದರ್ಭದಲ್ಲಿ ಬಿಸಿಲಿನ ಅಗತ್ಯವಿದ್ದು, ಆದರೆ ಈ ಬಾರಿ ರೈತರ ಪಾಲಿಗೆ ಪ್ರಕೃತಿ ಕರುಣೆ ತೋರಿಲ್ಲ.
Advertisement
ಮೇ, ಜೂನ್ ತಿಂಗಳಲ್ಲಿ ಸಮರ್ಪಕವಾದ ಮಳೆ ಬರದೆ ಕಂಗಾಲಾಗಿದ್ದ ರೈತರು ನೇಜಿ ನಾಟಿ ಮಾಡುವುದಕ್ಕೆ ಪರದಾಟ ನಡೆಸಿದ್ದರು. ಆದರೆ ನೇಜಿ ನಾಟಿ ಮಾಡಿದ ನಂತರ ಸುರಿದ ಮಳೆಗೆ ಭತ್ತದ ರೈತ ಸ್ವಲ್ಪಮಟ್ಟಿಗೆ ಖುಷಿಯಾಗಿದ್ದ. ಮಳೆಯಿಂದಾಗಿ ಬೆಳೆ ಫಸಲು ಹೆಚ್ಚು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ. ಆದರೆ ಇದೀಗ ಎಲ್ಲವೂ ತಲೆಕೆಳಗಾಗಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ ರೈತನ ಸ್ಥಿತಿ. ಅಡಿಕೆಗೆ ಕೊಳೆರೋಗ ಬಂದು ನಾಶವಾಗಿದೆ. ಭತ್ತ ತೆನೆ ಬಿಡುವ ಮೊದಲೇ ಹಾಳಾಗುವಂತಾಗಿದೆ. ಒಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಇಲ್ಲದಂತಾಗಿದೆ.
ಭತ್ತ ಬೆಳೆಯೂ ಕೈಗಿಲ್ಲದ ಸ್ಥಿತಿವಿಪರೀತ ಮಳೆಯ ಕಾರಣ ಭತ್ತದ ಬೆಳೆಯ ಬಗ್ಗೆ ಯಾವುದೇ ಆಶೆ ಇಟ್ಟುಕೊಳ್ಳುವಂತಿಲ್ಲ. ಮಳೆ ಇಲ್ಲದೆ ಭತ್ತ ಬೆಳೆಯ ಈ ಬಾರಿ ತಡವಾಗಿಯೇ ಆರಂಭಿಸಲಾಗಿತ್ತು. ಇದೀಗ ಮಳೆಯ ಬಿಡುವು ಕೊಡುವುದೇ ಇಲ್ಲ. ಹಾಗಾಗಿ ಭತ್ತದ ಬೆಳೆ ಕೈಗೆ ದೊರಕುವ ಬಗ್ಗೆ ಆಶಾಭಾವನೆ ಇಲ್ಲ. ಅಡಿಕೆ ಅರ್ಧಕ್ಕರ್ಧ ಈಗಾಗಲೇ ನಾಶವಾಗಿದೆ. ಇನ್ನು ಔಷಧಿ ಸಿಂಪಡಣೆ ನಡೆಸಿದರೂ ದೊಡ್ಡ ಮಟ್ಟದ ಪ್ರಯೋಜನವಿಲ್ಲ. ಹಳ್ಳಿಯ ಎಲ್ಲಾ ಭಾಗದ ಅಡಕೆ ತೋಟಗಳಲ್ಲಿ ಬಹುತೇಕ ಅಡಕೆ ಮರಗಳಲ್ಲಿ ರೋಗ ಕಾಣಿಸಿಕೊಂಡಿದೆ..
– ರಾಮಣ್ಣ ಗೌಡ ಪಾಲೆತ್ತಾಡಿ - ರಾಜೇಶ್ ಪಟ್ಟೆ