ಹೊಸದಿಲ್ಲಿ: “ದೇಶದ ಹಲವಾರು ರಾಜ್ಯಗಳಲ್ಲಿ ನಡೆಯುತ್ತಿರುವ ಮಳೆರಾಯನ ಅಬ್ಬರ ಮುಂದುವರಿದಿದೆ. ಮಳೆಯಿಂದ ತೊಯ್ದು ತೊಪ್ಪೆಯಾಗಿರುವ ಕೇರಳದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದ್ದು, ಆ ರಾಜ್ಯದ ಎಂಟು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
“ಎರ್ನಾಕುಳಂ, ಇಡುಕ್ಕಿ, ತೃಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಟ್ ಅಲರ್ಟ್ ನೀಡಲಾಗಿದೆ.
ಈ ಪ್ರಾಂತ್ಯಗಳಲ್ಲಿ 20 ಸೆಂ.ಮೀ.ನಷ್ಟು ಮಳೆಯಾಗುವ ಸಾಧ್ಯತೆಯಿದೆ’ ಎಂದು ಐಎಂಡಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕೇರಳದ ಕರಾವಳಿ ಪ್ರಾಂತ್ಯಗಳಲ್ಲಿರುವ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಕೂಡದೆಂದು ಕೇರಳ ವಿಪತ್ತು ನಿರ್ವಹಣ ಪ್ರಾಧಿಕಾರ (ಎಸ್‌ಡಿಎಂಎ) ಹೇಳಿದೆ. ಲಕ್ಷದ್ವೀಪ ಸಮೂಹದಲ್ಲಿ ಕಾಣಿಸಿಕೊಂಡಿದ್ದ ಚಂಡಮಾರುತವು ಕೇರಳದ ಕಡೆಗೆ ಸ್ಥಳಾಂತರಗೊಂಡಿದೆ.
Related Articles
ಚಂಡಮಾರುತದ ಅಲೆಗಳು ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬರುತ್ತಿವೆ ಎಂದು ಐಎಂಡಿ ತಿಳಿಸಿದೆ.
ಮಳೆ ಆವರಿಸಿರುವ ಹಾಗೂ ಆವರಿಸಲಿರುವ ಪ್ರಾಂತಗಳಲ್ಲಿ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇರಳ ಸರಕಾರ ಹೇಳಿದೆ. ಮಳೆ ಪೀಡಿತ ಪ್ರತೀ ಜಿಲ್ಲೆಯಲ್ಲೂ, ಪ್ರತೀ ಪ್ರಾಂತ್ಯದಲ್ಲೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಗಳನ್ನು (ಎನ್‌ಡಿಆರ್‌ಎಫ್) ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್ಗೆ ಎಸ್‌ಡಿಎಂಎ ಕೂಡ ಸಾಥ್ ನೀಡುತ್ತಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಅಸ್ಸಾಂ: ರೈಲಿನಲ್ಲಿದ್ದವರ ಏರ್‌ಲಿಫ್ಟ್
ಅಸ್ಸಾಂನ ಡಿಮಾಹಸಾವೊ ಜಿಲ್ಲೆಯ ಹಾಫ್ಲಾಂಗ್ ಎಂಬಲ್ಲಿರುವ ರೈಲು ನಿಲ್ದಾಣದ ಪಕ್ಕದಲ್ಲಿರುವ ಗುಡ್ಡ ಕುಸಿದಿದ್ದು, ಅದರ ಜತೆಯಲ್ಲೇ ಅಗಾಧವಾದ ಮಳೆಯಾಗುತ್ತಿರುವ ಪರಿಣಾಮ, ಹಾಫ್ಲಾಂಗ್ ರೈಲು ನಿಲ್ದಾಣದಿಂದ ಹೊರಡಬೇಕಿದ್ದ ಗುವಾಹಾಟಿ- ಸಿಲ್ಚಾರ್ ಎಕ್ಸ್‌ಪ್ರೆಸ್ ರೈಲು ಸ್ಥಗಿತವಾಯಿತು.
ರೈಲು ನಿಲ್ದಾಣವೆಲ್ಲ ಜಲಾವೃತ್ತವಾದ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ ಸುಮಾರು 100 ಪ್ರಯಾಣಿಕರನ್ನು ಏರ್‌ಲಿಫ್ಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಅಕ್ಕಪಕ್ಕದ ಬೆಟ್ಟಗಳಿಂದ ರೈಲು ನಿಲ್ದಾಣಕ್ಕೆ ಮಳೆ ನೀರು ಪ್ರವಾಹ ರೀತಿಯಲ್ಲಿ ತುಂಬಿಕೊಳ್ಳುತ್ತಲೇ ಇದ್ದು, ಮಂಗಳವಾರದಂದು ಅಲ್ಲಿ ಕೆಲವು ರೈಲುಗಳ ಬೋಗಿಗಳು ಮಗುಚಿಕೊಂಡಿವೆ.
ಮುಂದುವರಿದ ಭೂಕುಸಿತ: ತೀವ್ರ ಮಳೆಯಿಂದಾಗಿ ಅಸ್ಸಾಂನಲ್ಲಿ ಭೂಕುಸಿತ ಪ್ರಕರಣಗಳು ಇನ್ನೂ ಹೆಚ್ಚಾಗಿವೆ. ಭಾರತೀಯ ರೈಲ್ವೇಯ ಈಶಾನ್ಯ ಗಡಿ ರೈಲ್ವೆ (ಎನ್‌ಎಫ್ಆರ್) ಕಾರ್ಯಾಚರಣೆಯ ವ್ಯಾಪ್ತಿಯಲ್ಲಿರುವ ಲಂಮ್‌ಡಿಂಗ್-ಬದಾರ್‌ಪುರದಲ್ಲಿ ವಲಯದಲ್ಲಿ ಅತೀ ಹೆಚ್ಚು ಭೂಕುಸಿತಗಳು ಸಂಭವಿಸಿವೆ.
ತ್ರಿಪುರಾ, ಮೇಘಾಲಯ, ಮಿಜೋರಾಂ ಹಾಗೂ ಅಸ್ಸಾಂನ ದಕ್ಷಿಣದ ಪ್ರಾಂತ್ಯಗಳಿಗೆ ರೈಲ್ವೇ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖವಾದ ಭಾಗವಾಗಿದೆ. ಆದರೆ ಇಲ್ಲಿ ಸಂಭವಿಸಿರುವ ಭೂ ಕುಸಿತಗಳಿಂದಾಗಿ ರೈಲ್ವೆ ಸಂಪರ್ಕ ಕಡಿತಗೊಂಡಂತಾಗಿದೆ.