Advertisement

ಕೊರಟಗೆರೆಯಲ್ಲಿ ಮಳೆ ಆವಾಂತರ: ಸೇತುವೆ ಬಳಿ ಪ್ರತಿಭಟನೆ

09:47 PM Sep 10, 2022 | Team Udayavani |

ಕೊರಟಗೆರೆ :ತಾಲೂಕಿನಾದ್ಯಾಂತ ಭೀಕರ ರಣ ಮಳೆ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದ್ದು ನಮ್ಮ ಸಮಸ್ಯೆಯನ್ನು ಹೇಳೋರು ಕೇಳೋರೇ ಇಲ್ಲಾ ಎಂದು ಗ್ರಾಮಸ್ಥರು ಸೇತುವೆ ಬಳಿ ಪ್ರತಿಭಟಿಸಿದ ಘಟನೆ ನಡೆಯಿತು.

Advertisement

ತಾಲೂಕಿನ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಹನುಮೇನಹಳ್ಳಿ-ಸೋಂಪುರ ಗ್ರಾಮದ ಸಂಪರ್ಕ ಸೇತುವೆ ಕಳೆದ 4 ದಿನಗಳ ಹಿಂದೆ ರಣ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಗ್ರಾಮಸ್ಥರಿಗೆ ಸಂಪರ್ಕ ಸೇತುವೆಯೇ ಇಲ್ಲದಂತಾಗಿದೆ.ಈ ಗ್ರಾಮದಿಂದ ಶಾಲಾ ಕಾಲೇಜಿಗೆ ಹೋಗುವಂತಹ ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ಹೋಗುವಂತಹ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಮತ್ತು ತುರ್ತು ಆರೋಗ್ಯ ಸೇವೆಯನ್ನು ಪಡೆಯಲು ಬಯಸುವ ವಯೋವೃದ್ಧರು ಸಂಪರ್ಕ ಸೇತುವೆ ಇಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಸಮಸ್ಯೆಗೆ ಯಾವೊಬ್ಬ ಜನಪ್ರತಿನಿಧಿಯೂ ಬರುತ್ತಿಲ್ಲ ಸೇತುವೆ ಬಿದ್ದ ಮೊದಲ ದಿನ ನಾಮಕೇವಾಸ್ತೇಗೆ ಸ್ಥಳ ಪರಿಶೀಲನೆ ಮಾಡಿದ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಬಿಟ್ಟರೆ ಗ್ರಾಮಸ್ಥರಿಗೆ ಜೀವನ ನಡೆಸಲು ಬೇಕಾಗಿರುವಂತಹ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ಸೇತುವೆ ಬಿದ್ದು ಸಮಸ್ಯೆಯಾಗಿದ್ದರೂ ಪಿಡಬ್ಯೂಡಿ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಮಳೆಯಿಂದ ತಾಲೂಕಿನಲ್ಲಿ ಸುಮಾರು 40 ಕ್ಕೂ ಹೆಚ್ಚು ಸೇತುವೆ ಮುರಿದುಬಿದ್ದು, ಲೆಕ್ಕಕ್ಕಿಲ್ಲದಷ್ಟು ರಸ್ತೆ ಹಾಳಾಗಿದ್ದು ಸಂಪೂರ್ಣ ಜನಸಂಪರ್ಕವೇ ಇಲ್ಲದಂತಾಗಿದೆ. ಆದರೂ ಅಧಿಕಾರಿಗಳು ಮಾತ್ರ ಯಾವೊಂದು ಕ್ರಮ ಕೈಗೊಳ್ಳದೇ ಇದ್ದಾರೆ ಎಂದರು.

ಘಟನಾ ಸ್ಥಳಕ್ಕೆ ಪಿಎಸ್ಐ ನಾಗರಾಜು ಭೇಟಿ ನೀಡಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿ ಪ್ರತಿಭಟನಕಾರರಿಗೆ ಮನ ಒಲಿಸಿದರು.

Advertisement

1.30 ಕೋಟಿ ಸಂಪರ್ಕ ಸೇತುವೆ ಕುಸಿತ :ಕೆಳದ 4 ವರ್ಷಗಳ ಹಿಂದೆ ಬ್ರಿಜ್ಡ್ ಕಂ ಬ್ಯಾರಿಕೇಡ್ ನ್ನು ಗ್ರಾಮದ ಗರುಡಾಚಲ ನದಿಗೆ ಅಡ್ಡಲಾಗಿ ಕಟ್ಟಿರುವಂತ ಸೇತುವೆ ಕಳಪೆ ಕಾಮಗಾರಿಯಿಂದ ಮಳೆಗೆ ಕೊಚ್ಚಿಹೋಗಿದ್ದು ಅದೃಷ್ಟವಶಾತ್ ಯಾವುದೇ ಸಾವು-ನೋವು ಮತ್ತು ಹೆಚ್ಚಿನ ಅನಾಹುತ ಸಂಭವಿಸಿಲ್ಲ.

20 ಕಿ.ಮೀ ದುರ್ಗಮನ ರಸ್ತೆ ಸಂಚಾರ ಬ್ರಿಜ್ಡ್ ಇದ್ದು ಸಂದರ್ಭದಲ್ಲಿ ಗೌರಿಬಿದನೂರು- ಕೊರಟಗೆರೆ ಮುಖ್ಯ ರಸ್ತೆಗೆ ಕೇವಲ ಅರ್ಧ ಕಿ.ಮೀ ಸಂಪರ್ಕ ಪಡೆಯುತ್ತಿದ್ದ ಜನರಿಗೆ ಇಂದು ನಗರ ಪ್ರದೇಶಕ್ಕೆ ಹೋಗಲು 20 ಕಿ.ಮೀ ಸುತ್ತು ಬಳಸಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ, ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ತಾತ್ಕಾಲಿಕ ಸೇತುವೆ ವ್ಯವಸ್ಥೆಯನ್ನು ಕಲ್ಪಿಕೊಡಬೇಕು ಶೀಘ್ರವಾಗಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಆಧ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೇತುವೆ ಕೊಚ್ಚಿಕೊಂಡು ಹೋಗಲು ಕಳಪೆ ಕಾಮಗಾರಿಯೇ ಮುಖ್ಯ ಕಾರಣವಾಗಿದ್ದು ಸೇತುವೆ ನಿರ್ಮಾಣಕ್ಕೆ 1.30 ಕೋಟಿ ರೂ ವ್ಯಯ ಮಾಡಲಾಗಿದೆ ಸೇತುವೆ ನಿರ್ಮಾಣಕ್ಕೆ ಸರಿಯಾದ ಕ್ರಮವಾದ ಗುಣಮಟ್ಟದ ವಸ್ತುಗಳನ್ನು ನಿರ್ಮಾಣ ಕಾರ್ಯಕ್ಕೆ ಬಳಸದೇ ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಗುತ್ತಿಗೆದಾರನ ಬಗ್ಗೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು.

-ಹನುಮೇಶ್, ಬೈಚಾಪುರ ಗ್ರಾ.ಪಂ ಸದಸ್ಯರು.

20 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮತ್ತು 4 ದಿನದ ಹಿಂದೆ ಕಾಲುವೆ ಕಿತ್ತುಹೋಗಿರುವುದರಿಂದ ನಾನು ಕಾಲೇಜಿಗೆ ಹೋಗಿಲ್ಲ ,ನನ್ನನ್ನು ಕಾಲೇಜಿಗೆ ಕರೆದುಕೊಂಡು ಹೋಗುವವರು ಯಾರೂ ಇಲ್ಲ. ಇದೇ ರೀತಿ ನಮ್ಮೂರಿನಲ್ಲಿ ಸೂಕ್ತ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ನಮ್ಮೂರಿನಲ್ಲಿಯೇ ಉಳಿಯುತ್ತಿದ್ದಾರೆ. ಶೀಘ್ರ ಸಮಸ್ಯೆಗೊಂದು ಇತಿಶ್ರೀ ಹಾಡುವ ಮೂಲಕ ನಮಗೆ ಶಿಕ್ಷಣ ಕಲಿಯಲು ಅನುವು ಮಾಡಿಕೊಡಬೇಕು.

-ಲಾವಣ್ಯ, ದ್ವಿತೀಯ ಪದವಿ ವಿದ್ಯಾರ್ಥಿನಿ, ಹನುಮೇನಹಳ್ಳಿ.

ನಾನು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಶೀಘ್ರವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಗ್ರಾಮಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಾನು ಅವರ ಅತ್ಯಾಗತ್ಯ ಸೇವೆಗಾಗಿ ಜೊತೆಯಿರುತ್ತೇನೆ.

-ಪಿ.ಆರ್ ಸುಧಾಕರ್ ಲಾಲ್, ಮಾಜಿ ಶಾಸಕ

ಸಿದ್ದರಾಜು. ಕೆ.ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next