Advertisement

ಮಳೆ ಆರ್ಭಟ: ರಸ್ತೆ ಸಂಚಾರಕ್ಕೆ ಅಡೆತಡೆ

03:34 PM Jun 17, 2017 | Team Udayavani |

ಆಳಂದ: ಒಂದೆಡೆ ಮುಂಗಾರು ಮಳೆ ಸುರಿಯುವ ಸಂತೋಷ. ಇನ್ನೊಂದೆಡೆ ತಾಲೂಕಿನ ಪ್ರಮುಖ ರಸ್ತೆಗಳ ಸಂಪರ್ಕ ಸೇತುವೆ ಹಾಗೂ ಸೇತುವೆ ರಸ್ತೆಗಳಿಗೆ ಹಾನಿಯಾಗಿ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. 

Advertisement

ಪಟ್ಟಣದಿಂದ ತಡಕಲ್‌ ಮಾರ್ಗವಾಗಿ ಸಂಚರಿಸುವ ಮಲಂಗ ಮತ್ತು ಸುಭಾಷ ಗುತ್ತೇದಾರ ತೋಟದ ಹತ್ತಿರದಿಂದ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಸೇತುವೆಗೆ ಮತ್ತು ರಸ್ತೆಗೆ ಹಾನಿ ಆಗಿದ್ದರಿಂದ ಮತ್ತೆ ಸಂಚಾರಕ್ಕೆ ತೊಂದರೆ ಉಂಟಾಗಿ ವಾಹನಗಳು ಮಾರ್ಗ ಬದಲಿಸಿ ಸಂಚರಿಸುತ್ತಿವೆ. 

ಶುಕ್ರವಾರ ದೇಗಾಂವ ಮುನ್ನೊಳ್ಳಿ ಸೇತುವೆ, ಬಸವಣ್ಣ ಸಂಗೋಳಗಿ ಮುನ್ನೊಳ್ಳಿ ರಸ್ತೆಯ ಸೇತುವೆಗೆ ಹಾನಿಯಾಗಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ತಿಳಿಸಿದ್ದಾರೆ. ಈ ಕುರಿತು ತುರ್ತು ಕ್ರಮಕೈಗೊಂಡು ಸಂಚಾರಕ್ಕೆ ಅನುಕೂಲ ಒದಗಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಗೆ ಬರುವ ತಾಲೂಕಿನ ಅಂಬಲರಗಾ ಮಹಾಗಾಂವ ಕ್ರಾಸ್‌ ರಸ್ತೆ ತೀರಾ ಆಮೆಗತಿಯಲ್ಲಿ ಸಾಗಿದ್ದು, ಮಳೆ ನೀರಿಗೆ ರಸ್ತೆ ಕೆಸರು ಗದ್ದೆಯಾಗಿದೆ. ಮಹಾರಾಷ್ಟ್ರದ ಉಮರಗಾದಿಂದ ಸುಲೆಪೇಟವರೆಗಿನ ಹೆದ್ದಾರಿ ಇದಾಗಿದೆ. ಆಳಂದ ವಿ.ಕೆ. ಸಲಗರ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. 

ಅಂಬಲಗಾ ಕ್ರಾಸ್‌ ಮಡಕಿ, ಮಹಾಗಾಂವ ತಾಂಡಾದ ರಸ್ತೆ ಮಾಡಲು ಸುಮಾರು 5 ಕಿ.ಮೀ. ರಸ್ತೆ ಆಗೆದಿದ್ದು, ಇದರಿಂದಾಗಿ ಇಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯುದ್ದಕ್ಕೂ ಕೆಸರು ಆಗಿದ್ದರಿಂದ ಸಂಚಾರವೂ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ಕಲಬುರಗಿ ತಲುಪಲು ಹೆಚ್ಚು ಸಮಯ ಬೇಕಿದೆ. ಚಿಂಚನಸೂರ ಮಾರ್ಗವಾಗಿ ಹೋಗಬೇಕಾದರೆ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಈ ರಸ್ತೆ ಶೀಘ್ರವೇ ದುರಸ್ತಿಗೊಳಿಸಬೇಕು ಎಂದು ಈ ಭಾಗದ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. 

ಜೆಡಿಎಸ್‌ ಒತ್ತಾಯ: ತಾಲೂಕಿನ ಕೆಲವು ಕಡೆ ರಸ್ತೆ ನಿರ್ಮಾಣ ಮಾಡಿ ಕೈಗೊಂಡ ಸೇತುವೆ ಮತ್ತು ಅದರ ಬಳಿಯ ರಸ್ತೆ ಕಾಮಗಾರಿ ಕಳಪೆ ಆಗಿದ್ದರಿಂದ ಕೊಚ್ಚಿ ಹೋಗಿದೆ. ಈ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಜೆಡಿಎಸ್‌ ಮುಖಂಡ ಸೂರ್ಯಕಾಂತ ಕೊರಳ್ಳಿ  ಆಗ್ರಹಿಸಿದ್ದಾರೆ. 

ಪರಿಹಾರಕ್ಕೆ ಬಿಜೆಪಿ ಒತ್ತಾಯ: ಶಾಸಕರು ಪಕ್ಷಾತರ ರಾಜಕಾರಣದಲ್ಲೇ ಕಾಲ ಕಳೆಯುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇಂಥ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಶಾಸಕ ಸುಭಾಷ  ಗುತ್ತೇದಾರ ಒತ್ತಾಯಿಸಿದ್ದಾರೆ. 

ಸಿಪಿಐ ಒತ್ತಾಯ: ಉದ್ಯೋಗ ಖಾತ್ರಿಯಲ್ಲಿ ಸಮಪರ್ಕವಾಗಿ ಎಲ್ಲೆಡೆ ಬದು  ನಿರ್ಮಾಣ ಕೆಲಸ ಮಾಡಿದ್ದರೆ ಮಳೆಯಾದ ಮೇಲೂ ಜಮೀನುಗಳ ಮಣ್ಣು ಕೊಚ್ಚಿ ಹೋಗುತ್ತಿರಲಿಲ್ಲ. ಇದಕ್ಕೆ ಆಡಳತ ನಿರ್ಲಕ್ಷವೇ ಸಾಕ್ಷಿ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮೌಲಾ ಮುಲ್ಲಾ ಆರೋಪಿಸಿದ್ದಾರೆ.

* ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next