ಸಕಲೇಶಪುರ: ಮಲೆನಾಡಿನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆ ಆಷಾಢದಲ್ಲೇ ಕಾಣೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
2018ರಲ್ಲಿ ಅತಿವೃಷ್ಟಿಯಿಂದ ತಾಲೂಕು ನಲುಗಿ ಹೋಗಿದ್ದು ಈ ಬಾರಿ ಅನಾವೃಷ್ಟಿಯಿಂದ ತಾಲೂಕು ತತ್ತರಿಸುವ ಸಾಧ್ಯತೆಯಿದೆ. 2019ರ ಜನವರಿ 1ರಿಂದ ಜುಲೈ 17ರವರೆಗೆ ತಾಲೂಕಿನಲ್ಲಿ ವಾಡಿಕೆಯಂತೆ 1074 ಮಿ.ಮೀ. ಮಳೆಯಾಗಬೇಕಾಗಿದ್ದು, ಆದರೆ ಕೇವಲ 864ಮಿ.ಮೀ. ಮಳೆಯಾಗಿದ್ದು ಇದರಿಂದ ಶೇ.20 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ತೀವ್ರ ಮಳೆ ಕೊರತೆ: ಬೆಳಗೋಡು ಹೋಬಳಿಯಲ್ಲಿ 1,002 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು ಆದರೆ ಕೇವಲ 573 ಮಿ.ಮೀ. ಮಳೆಯಾಗಿರುವುದರಿಂದ ಶೇ.43 ಮಳೆ ಕೊರತೆ ಬೆಳಗೋಡು ಹೋಬಳಿಯಲ್ಲಿ ಉಂಟಾಗಿದೆ. ಸಕಲೇಶಪುರ ಹೋಬಳಿಯಲ್ಲಿ 1,018 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 797 ಮಿ.ಮೀ. ಮಳೆಯಾಗಿದ್ದು ಶೇ22 ಮಳೆ ಕೊರತೆ ಉಂಟಾಗಿದೆ.ಹಾನುಬಾಳ್ ಹೋಬಳಿಯಲ್ಲಿ 1,191 ಮಿ.ಮೀ. ಮಳೆಯಾಗಬೇಕಾಗಿದ್ದು ಆದರೆ 1,072ಮಿ.ಮೀ. ಮಳೆ ಉಂಟಾಗಿದ್ದು ಶೇ.10 ಕಡಿಮೆ ಮಳೆಯಾಗಿದೆ. ಅತಿ ಹೆಚ್ಚು ಮಳೆ ಬೀಳುವ ಹೆತ್ತೂರು ಹೋಬಳಿಯಲ್ಲಿ ವಾಡಿಕೆಯಂತೆ 1,096ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಕೇವಲ 935 ಮಿ.ಮೀ. ಮಳೆಯುಂಟಾಗಿ ಶೇ.15 ಪ್ರಮಾಣ ಕಡಿಮೆಯಾಗಿದೆ. ಯಸಳೂರು ಹೋಬಳಿಯಲ್ಲಿ 937 ಮಿ.ಮೀ. ಮಳೆಯಾಗಬೇಕಾಗಿದ್ದು ಆದರೆ 662 ಮಿ.ಮೀ. ಮಳೆಯಾಗಿದ್ದು ಶೇ.29 ಮಳೆ ಕಡಿಮೆಯಾಗಿದೆ.
ಜುಲೈನಲ್ಲೂ ಕೃಪೆ ತೋರದ ವರುಣ: ಜೂನ್ ತಿಂಗಳಿನಲ್ಲಿ ಒಟ್ಟಾರೆಯಾಗಿ ಶೇ.31ರಷ್ಟು ಮಳೆಯ ಕೊರತೆ ಉಂಟಾಗಿದ್ದು ಇದೀಗ ಜುಲೈ ಮೊದಲ ವಾರದಲ್ಲಿ ಮಳೆ ಬಿದ್ದಿದ್ದು, ಎರಡನೇ ಹಾಗೂ ಮೂರನೇ ವಾರದಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟು ಬಿಸಿಲಿನ ವಾತವರಣ ಮೂಡಿರುವುದು ಆತಂಕಕಾರಿಯಾಗಿದೆ. ಜೂನ್ ಮಾಹೆಯಲ್ಲಿ ಕೇವಲ 290ಮಿ.ಮೀ. ಮಳೆಯಾಗಿದ್ದು ಇದೀಗ ಜುಲೈ 17ರವರೆಗೆ 492 ಮಿ.ಮೀ. ಮಳೆಯಾಗಿದೆ. ಮಲೆನಾಡಿನಲ್ಲಿ ಬೇರೆ ಸಮಯದಲ್ಲಿ ಮಳೆ ಕೈಕೊಟ್ಟರು ಸಹ ಜುಲೈ ಮಾಹೆಯಲ್ಲಿ ಭರ್ಜರಿಯಾಗಿ ಮಳೆ ಬರುವುದು ವಾಡಿಕೆಯಾಗಿದ್ದು ಆದರೆ ಈ ಬಾರಿ ಜುಲೈ ಮಾಹೆಯಲ್ಲಿ ಹಿಂದೆಂದೂ ಕಾಣದ ಬಿಸಿಲು ಕಾಣುತ್ತಿದೆ.
ಕಾಫಿ ಬೆಳೆಗಾರರಿಗೂ ಸಂಕಷ್ಟ: ತೀವ್ರ ಮಳೆ ಬೀಳುವ ಪ್ರದೇಶಗಳಾದ ಹೊಂಗಡಹಳ್ಳ, ವನಗೂರು, ಬಿಸಿಲೆ, ಕಾಗಿನಹರೆ, ದೇವಾಲದಕೆರೆ, ಕಾಡುಮನೆ, ಹೆಗ್ಗದ್ದೆ, ಮಾರನಹಳ್ಳಿ ಮುಂತಾದ ಕಡೆಗಳಿಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಆ ಭಾಗದ ಕಾಫಿ ಬೆಳೆಗಾರರಿಗೆ ತುಸು ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಆದರೆ ಬೆಳಗೋಡು, ಸಕಲೇಶಪುರ ಸುತ್ತಮುತ್ತಲಿನ ಕೆಲವು ಗ್ರಾಮಗಳ ಕಾಫಿ ಬೆಳೆಗಾರರು ಮಳೆಯ ಕೊರತೆಯಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಮಳೆಯ ಕೊರತೆಯ ನಡುವೆಯೂ ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿದೆ.
● ಸುಧೀರ್ ಎಸ್.ಎಲ್