Advertisement

ಮಳೆ: ಜಿಲ್ಲೆಯಲ್ಲಿ 2.35 ಕೋ.ರೂ. ಕೃಷಿ ನಾಶ

10:36 PM Jul 26, 2019 | Team Udayavani |

ಕಾಸರಗೋಡು: ಬಿರುಸಿನ ಮಳೆಗೆ ಜಿಲ್ಲೆಯಲ್ಲಿ ಈ ವರೆಗೆ 2,35,86,750 ರೂ.ನ ಕೃಷಿ ಬೆಳೆ ನಾಶವಾಗಿದೆ. ಕಳೆದ 24 ತಾಸುಗಳಲ್ಲಿ 41,86,750 ರೂ.ನ ಕೃಷಿ ನಾಶ ಗಣನೆ ಮಾಡಲಾಗಿದೆ. 72.18 ಹೆಕ್ಟೇರ್‌ ಕೃಷಿ ಜಾಗ ಹಾನಿಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ವರೆಗೆ 336.46706 ಹೆಕ್ಟೇರ್‌ ಭೂಮಿಯಲ್ಲಿ ಕೃಷಿ ನಾಶ ಸಂಭವಿಸಿದೆ.

Advertisement

ನೀರು ಕಟ್ಟಿ ನಿಂತು ಸಂಚಾರ ಸಮಸ್ಯೆ : ಶುಕ್ರವಾರ ಬೆಳಗ್ಗೆ ಸುರಿದ ಮಳೆಯಿಂದ ಹೆದ್ದಾರಿಯ ಅಲ್ಲಲ್ಲಿ ಮಳೆ ನೀರು ತುಂಬಿ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿದೆ. ಉಪ್ಪಳ ಭಗವತೀ ಗೇಟ್‌ ಬಳಿಯಲ್ಲಿ ಹೆದ್ದಾರಿಯ ಒಂದು ಬದಿ ವ್ಯಾಪಕ ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಹೆದ್ದಾರಿಯ ಒಂದು ಬದಿ ತಗ್ಗು ಪ್ರದೇಶವಾಗಿದ್ದು, ಇಲ್ಲಿ ತುಂಬಿಕೊಂಡ ನೀರು ಹೆದ್ದಾರಿಯ ಅರ್ಧದವರೆಗೂ ತಲುಪಿದೆ. ರಸ್ತೆ ಬದಿ ಮಳೆ ನೀರು ಹರಿ ಯುವ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಉಪ್ಪಳ ಬಸ್‌ ನಿಲ್ದಾಣ, ಪರಿಸರದ ಹೆದ್ದಾರಿ, ಹಿದಾಯತ್‌ ಬಜಾರ್‌, ಹಿದಾಯತ್‌ ನಗರ, ಉಪ್ಪಳ ಶಾಲೆ, ವಾಮಂಜೂರು ಸೇತುವೆ ಬಳಿ ನೀರು ಕಟ್ಟಿ ನಿಂತಿದೆ.

ಕಂದಕ ನಿರ್ಮಾಣ
ವಿದ್ಯಾನಗರ ಸಮೀಪದ ಎರ್ದುಂಕಡವು ಊಜಂಗೋಡು ಬಸ್‌ ತಂಗುದಾಣದ ಪರಿಸರದಲ್ಲಿ ರಸ್ತೆಯ ಒಂದು ಭಾಗದಲ್ಲಿ ಮಣ್ಣು ಕುಸಿತದಿಂದ ಬಾವಿ ಮಾದರಿಯ ಬೃಹತ್‌ ಕಂದಕ ನಿರ್ಮಾಣವಾಗಿದೆ. ಈ ಕಂದಕದಿಂದ ವಾಹನಗಳಿಗೆ ಭೀತಿ ಸೃಷ್ಟಿಯಾಗಿದೆ.

ವಾಹನ ಸಂಚಾರ ವಿಳಂಬ
ಗುಡ್ಡೆ ಕುಸಿತ ಭೀತಿಯ ಹಿನ್ನೆಲೆಯಲ್ಲಿ ವಾಹನ ಸಂಚಾರ ಮೊಟಕುಗೊಂಡ ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ವಾಹನ ಸಂಚಾರ ಪುನರಾರಂಭಕ್ಕೆ ಇನ್ನೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಬಸ್‌ ಸಹಿತ ಇತರ ವಾಹನಗಳ ಸಂಚಾರ ಮೊಟಕುಗೊಂಡು ಮೂರು ದಿನಗಳಾದರೂ

Advertisement

ಪರಿಹಾರ ಕಲ್ಪಿಸಲಾಗಿಲ್ಲ. ಇದರಿಂದ ಈ ರಸ್ತೆಯಲ್ಲಿ ಜನಸಂಪರ್ಕ ಕಡಿದು ಹೋಗಿದ್ದು ಸ್ಥಳೀಯರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕರಂಬಿಲಕ್ಕೆ ಜಿಯೋಲಜಿ ವಿಭಾಗದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಲ್ಲಿಕೋಟೆ ರೀಜನಲ್‌ ಡೈರೆಕ್ಟರ್‌ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಆ ಬಳಿಕವೇ ಗುಡ್ಡೆಯ ಮಣ್ಣು ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು.

ಇದೇ ವೇಳೆ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಕರಿಂಬಿಲಕ್ಕೆ ತೆರಳಿ ಸ್ಥಿತಿಗತಿಯನ್ನು ಅವಲೋಕಿಸಿದರು. ಬದಿಯಡ್ಕದಿಂದ ಪೆರ್ಲ ಭಾಗಕ್ಕೆ ವಾಹನಗಳು ಸಾಗದಂತೆ ಕೆಡೆಂಜಿಯಲ್ಲಿ ಪೊಲೀಸರು ರಸ್ತೆ ತಡೆ ನಿರ್ಮಿಸಿದ್ದಾರೆ.

1,641.515 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಮಳೆಗಾಲ ಆರಂಭ ಗೊಂಡ ಅನಂತರ ಈ ವರೆಗೆ 1,641.515 ಮಿ.ಮೀ. ಮಳೆಯಾಗಿದೆ. ಕಳೆದ 24 ತಾಸು ಗಳಲ್ಲಿ 52.4625 ಮಿ.ಮೀ. ಮಳೆ ಸುರಿದಿದೆ. ಬಿರುಸಿನ ಮಳೆಯ ಪರಿಣಾಮ ಈ ವರೆಗೆ 9 ಮನೆಗಳು ಪೂರ್ಣ ರೂಪದಲ್ಲಿ, 166 ಮನೆಗಳು ಭಾಗಶಃ ಹಾನಿಗೊಂಡಿವೆ. ಈ ವರೆಗೆ ಒಟ್ಟು ಐವರು ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next