Advertisement
ಅಡೂರು ಚರ್ಲಕೈ ನಿವಾಸಿ ಚನಿಯ ನಾಯ್ಕ (65) ಅವರ ಬೆನ್ನಿಗೆ ಹೊಸದುರ್ಗ ಕುಶಾಲನಗರದ ಫಾತಿಮಾ ಕ್ವಾರ್ಟರ್ಸ್‌ನ ಮೊಹಮ್ಮದ್ ಆಸೀಫ್-ಮುಮ್ರಾಸ್ ದಂಪತಿ ಪುತ್ರಿ ಫಾತಿಮತ್ ಸೈನಬಾ (4) ಸಾವಿಗೀಡಾಗಿದ್ದು, ಸತ್ತವರ ಸಂಖ್ಯೆ ಎರಡಕ್ಕೇರಿತು. ಫಾತಿಮತ್ ಸೈನಬಾ ಕ್ವಾರ್ಟರ್ಸ್ ಬಳಿ ಆಟವಾಡುತ್ತಿದ್ದಾಗ ನೀರು ತುಂಬಿದ ಹೊಂಡಕ್ಕೆ ಬಿದ್ದು ಸಾವು ಸಂಭವಿಸಿತು. ಈಕೆ ಹೊಸದುರ್ಗ ಕಡಪ್ಪುರ (ಮುರಿಯನಾವಿ) ಪಿಪಿಟಿ ಎ.ಎಲ್.ಪಿ. ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿನಿ.ಮಳೆಯ ಆರ್ಭಟಕ್ಕೆ ಕಣ್ಣೂರು ಜಿಲ್ಲೆ ಯಲ್ಲಿ ಇಬ್ಬರು, ಕಲ್ಲಿಕೋಟೆ, ತಿರುವ ನಂತಪುರ ಮತ್ತು ಇತರ ಜಿಲ್ಲೆಗಳಲ್ಲಾಗಿ ಒಟ್ಟು ಹತ್ತು ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಜತೆಗೆ ಬಿರುಗಾಳಿಯೂ ಬೀಸುತ್ತಿದೆ. ಇದು ಭಾರೀ ನಾಶನಷ್ಟಕ್ಕೆ ಕಾರಣವಾಯಿತು. ಮರಗಳು ಕಟ್ಟಡ, ವಿದ್ಯುತ್ ಕಂಬ ಮೊದಲಾದವುಗಳ ಮೇಲೆ ಬಿದ್ದು ಅಪಾರ ಹಾನಿ ಸಂಭವಿಸಿದೆ.
ಧಾರಾಕಾರ ಮಳೆಯಿಂದ ಮರಗಳು ಉರುಳಿ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಕೂಡ್ಲು ಅಜಾದ್ ನಗರದ ಸುಶೀಲಾ ಅವರ ಸೋಗೆ ಹಾಸಿದ ಮನೆಗೆ ಹಲಸಿನ ಮರ ಬಿದ್ದು ಮನೆ ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಪೆರಿಯಾದಲ್ಲಿ ಕಾಯಕುಳಂ ಕಾಟಿಯಡ್ಕದ ಗೋಪಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಆಂಶಿಕ ಹಾನಿಗೀಡಾಗಿದೆ. ಅಲ್ಲೇ ಪಕ್ಕದ ಇನ್ನೊಂದು ಮನೆಯೂ ತೆಂಗಿನ ಮರ ಬಿದ್ದು ಹಾನಿಯಾಗಿದೆ.
Related Articles
ಮನೆ ಅಂಗಳದ ಬಾವಿ ಕುಸಿತ
ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಾವಿಯೊಂದು ಪೂರ್ಣವಾಗಿ ಕುಸಿದುಬಿದ್ದಿದೆ. ಮೊಗ್ರಾಲ್ ಮಿಲಾದ್‌ನಗರದ ಎಂ.ಪಿ.ಅಬ್ದುಲ್ಲ ಅವರ ಮನೆಯ ಅಂಗಳದಲ್ಲಿದ್ದ ಬಾವಿ ಕುಸಿದಿದೆ. ಆವರಣ ಗೋಡೆ ಪೂರ್ಣವಾಗಿ ಕುಸಿದು ಬಾವಿಯೊಳಗೆ ಬಿದ್ದಿದ್ದು, ಅದರಲ್ಲಿದ್ದ ಮೋಟಾರ್ ಮತ್ತಿತರ ಉಪಕರಣಗಳು ನಾಶಗೊಂಡಿವೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದ್ದು ಜತೆಗೆ ಬಾವಿಯ ಪರಿಸರದಲ್ಲಿ ನಡೆದಾಡಲು ಸಾಧ್ಯವಿಲ್ಲದಂತಾಗಿದೆ. ಹೊಸದುರ್ಗ ವೆಳ್ಳಿಕೋತ್‌ನ ಅಡೋಟ್ ರಾಮಕೃಷ್ಣನ್ ಅವರ ಬಾವಿ ಕುಸಿದಿದೆ.
Advertisement
ಕಿನ್ನಿಂಗಾರಿನಲ್ಲಿ ರಸ್ತೆಗೆ ಬಿದ್ದ ಮರ ಕಿನ್ನಿಂಗಾರು ಕಲ್ಪಣೆ ಬಳಿ ಅಕೇಶಿಯಾ ಮರವೊಂದು ರಸ್ತೆಗೆ ಅಡ್ಡ ಉರುಳಿ ಬಿದ್ದಿದೆ. ಇದರಿಂದಾಗಿ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ಮೊಟಕುಗೊಂಡಿತು. ಮರ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಸುಗಮಗೊಂಡಿತು. ಮರ ಬಿದ್ದು ಸಂಚಾರಕ್ಕೆ ತಡೆ
ಮಂಜೇಶ್ವರ ಪೊಸೋಟು ರಾಷ್ಟ್ರೀಯ ಹೆದ್ದಾರಿಗೆ ರವಿವಾರ ಬೆಳಗ್ಗೆ ಮರವೊಂದು ಮಗುಚಿ ಬಿದ್ದು ಒಂದು ಗಂಟೆ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಹೆದ್ದಾರಿ ಬಳಿಯ ರೈಲು ಹಳಿ ಪಕ್ಕದಲ್ಲಿದ್ದ ಮರ ಹೆದ್ದಾರಿಗೆ ಬಿದ್ದಿದೆ. ಹೊಸಬೆಟ್ಟು ನಿವಾಸಿ ಶಿವಾನಂದ, ಬಡಾಜೆಯ ಪ್ರಶಾಂತ್ ಮರವನ್ನು ಕಡಿದು ರಸ್ತೆಯಿಂದ ತೆರವುಗೊಳಿಸಿದರು. ವಿದ್ಯುತ್ ಕಂಬ ಬಿದ್ದು
ಸ್ಕೂಟರ್ ಸವಾರನಿಗೆ ಗಾಯ
ತೂಮಿನಾಡುಕಟ್ಟೆಯಲ್ಲಿ ವಿದ್ಯುತ್ ಕಂಬವೊಂದು ಆಟೋ ರಿಕ್ಷಾದ ಮೇಲೆ ಬಿದ್ದಿತ್ತು. ಇದರಿಂದಾಗಿ ತಂತಿಗಳು ಚೆಲ್ಲಾಪಿಲ್ಲಿಯಾಗಿದ್ದವು. ದುರಸ್ತಿ ನಡೆಸುತ್ತಿದ್ದಾಗ ಲಾರಿಯೊಂದು ಈ ದಾರಿಯಲ್ಲಿ ಸಾಗುತ್ತಿದ್ದಾಗ ತಂತಿ ಅದರ ಚಕ್ರಕ್ಕೆ ಸಿಲುಕಿ ವಿದ್ಯುತ್ ಕಂಬ ನೆಲಕ್ಕೆ ಅಪ್ಪಳಿಸಿತು. ಇದೇ ಸಂದರ್ಭದಲ್ಲಿ ಸ್ಕೂಟರ್ ಮೇಲೆ ವಿದ್ಯುತ್ ಕಂಬ ಬಿದ್ದು ಸವಾರನೋರ್ವ ಗಂಭೀರ ಗಾಯಗೊಂಡಿದ್ದು ಆತನನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಗಾಳಿಗೆ ಶೆಡ್ ಕುಸಿತ
ಪೆರ್ಲ ಮಣಿಯಂಪಾರೆ ಬಳಿಯ ಚಂಬ್ರಕಾನದಲ್ಲಿ ಚುಕ್ರ ಹಾಗೂ ಕುಟುಂಬ ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್ ಗಾಳಿಗೆ ಕುಸಿದು ಬಿದ್ದಿದೆ. ಮನೆಯವರು ಅಪಾಯವಿಲ್ಲದೆ ಪಾರಾಗಿದ್ದಾರೆ. ತೊಟ್ಟಿಲು ಸಹಿತ ಹಾರಿದ ಮಾಡು; ಮಗು ಪಾರು
ಎರಡು ತಿಂಗಳ ಮಗು ಮಲಗಿದ್ದ ತೊಟ್ಟಿಲು ಸಹಿತ ಛಾವಣಿಯನ್ನೇ ಬಿರುಗಾಳಿ ಕೊಂಡೊಯ್ದರೂ ಮಗು ಅಚ್ಚರಿಯೆಂಬಂತೆ ಯಾವುದೇ ಅಪಾಯವಿಲ್ಲದೆ ಪಾರಾಗಿದೆ. ಛಾವಣಿಗೆ ಶೀಟ್ ಹಾಕಿದ್ದು, ಇದನ್ನೇ ಎತ್ತಿಕೊಂಡು ಹೋದ ಗಾಳಿಗೆ ತೆಂಗಿನ ಮರವೊಂದು ತಡೆಯಾದುದರಿಂದ ಮಗು ಗಾಯವಿಲ್ಲದೆ ಪಾರಾಗಿದೆ. ಎತ್ತರದಲ್ಲಿ ಸಿಲುಕಿಕೊಂಡ ಮಗುವನ್ನು ಏಣಿ ಏರಿ ಕೆಳಗಿಳಿಸಿ ರಕ್ಷಿಸಲಾಯಿತು. ವೆಂಗನ್ನೂರು ಶಾಲಾ ಪರಿಸರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಕುಮಾರ್- ಶೀಬಾ ದಂಪತಿಯ ಪುತ್ರ ವಿನಾಯಕ ಮಲಗಿದ್ದ ತೊಟ್ಟಿಲನ್ನೇ ಗಾಳಿ ಎತ್ತಿಕೊಂಡು ಹೋಗಿತ್ತು. ಮೂರು ದಿನಗಳಿಂದ ವಿದ್ಯುತ್ ಇಲ್ಲ
ಬದಿಯಡ್ಕ ವಿದ್ಯುತ್ ಸೆಕ್ಷನ್‌ನಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಮೊಟಕುಗೊಂಡಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಕಚೇರಿಗೆ ಕರೆ ಮಾಡಿದರೂ ಯಾರೂ ಎತ್ತುತ್ತಿಲ್ಲ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಜೋನ್ ಆರೋಪಿಸಿದ್ದಾರೆ. ಈ ಕಚೇರಿಯಲ್ಲಿ 40ರಷ್ಟು ನೌಕರರಿದ್ದರೂ ಇಬ್ಬರು ಲೈನ್‌ಮೆನ್‌ಗಳು ಮಾತ್ರವೇ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದಾರೆಂದು ಆರೋಪಿಸಲಾಗಿದೆ. ಮರ ಬಿದ್ದು ಬಾವಲಿಗಳ ಸಾವು :
ತೆರವುಗೊಳಿಸಲು ನಿಫಾ ಭೀತಿ ಅಡ್ಡಿ ಬೇಳ ದರ್ಬೆತ್ತಡ್ಕ ಕಾನ್ವೆಂಟ್ ಶಾಲೆ ಬಳಿಯಲ್ಲಿದ್ದ ಮರವೊಂದು ಮಳೆಗೆ ಮುರಿದು ರಸ್ತೆಗೆ ಅಡ್ಡ ಬಿದ್ದು ಸುಮಾರು 25ರಷ್ಟು ಬಾವಲಿಗಳು ಸಾವಿಗೀಡಾಗಿವೆ. ರಸ್ತೆಯಲ್ಲಿ ಸತ್ತು ಬಿದ್ದ ಬಾವಲಿಗಳನ್ನು ತೆರವುಗೊಳಿಸಲು ನಿಫಾ ಭೀತಿಯಿಂದ ಯಾರೂ ಮುಂದಾಗಿಲ್ಲ.