Advertisement

ಮಳೆಹನಿ 

02:50 AM Jul 16, 2017 | Harsha Rao |

ಹೂವಿನ ದಳದ ಮೇಲೆ ಕುಳಿತ ಹನಿ ವ್ಯರ್ಥವಾಗುವುದಿಲ್ಲ. ಒಂದೋ ಅದು ನದಿಗೆ ಬಿದ್ದು ಸಾಗರ ಸೇರುತ್ತದೆ ಅಥವಾ ನೆಲಕ್ಕೆ  ಬಿದ್ದು ಬೀಜ ಮೊಳಕೆಯೊಡೆಯಲು ಪ್ರೇರಣೆಯಾಗುತ್ತದೆ ಅಥವಾ ಆವಿಯಾಗಿ ಮುಗಿಲು ಸೇರಿ ಮತ್ತೆ ಮಳೆಹನಿ ಕನಸು ಕಾಣುತ್ತದೆ.
.
ಮೋಡಕ್ಕೆ ಭಾರ ತಡೆಯಲು ಕಷ್ಟವಾದಾಗ ಮಳೆ ಬೀಳುತ್ತದೆ; ಹೃದಯಕ್ಕೆ ಭಾರ ಆಧರಿಸಲು ಅಶಕ್ಯವಾದರೆ ಕಣ್ಣೀರು ಬರುತ್ತದೆ. ಎರಡನ್ನೂ ತಡೆಯುವುದು ಅಸಾಧ್ಯ.
.
ಬಿಸಿಲಿನ ವೇಳೆಯಲ್ಲಿ ಸುರಿಯುವ ಮಳೆ ಸಂತೋಷದಲ್ಲಿ ಬರುವ‌ ಕಣ್ಣೀರಿನಂತೆ. ಬರಲಿ ಬಿಡಿ !
.
ಕೆಲವರು ಬೇಸರದಿಂದ ಹೇಳುತ್ತಾರೆ, “ಮಳೆ ಬಂದರೆ ನೀರು ಹರಿದು ಎಲ್ಲೆಲ್ಲೂ ಕೆಸರಾಗುತ್ತದೆ’
ಆದರೆ, ಕೆಸರಿನಲ್ಲಿ ಹೂವಿನ ಗಿಡ ಚಿಗುರುವುದನ್ನು , ತಾವರೆ ಹೂವು ಅರಳುವುದನ್ನು ಅವರು ನೋಡಿರುವುದಿಲ್ಲ.
.
ಮಳೆಯ ಸದ್ದಿನಲ್ಲೊಂದು ನಾದವಿರುತ್ತದೆ. ಆ ನಾದವನ್ನು ಆಲಿಸಲಾಗದವರು ಯಾವ ಸಂಗೀತ ಕಛೇರಿಯನ್ನೂ ಆನಂದಿಸಲಾರರು.
.
ಬಿಸಿಲು ಬೀಳುವ ವೇಳೆಯಲ್ಲಿ ಮಳೆಯ ಕುರಿತ ಕವನಗಳನ್ನು ಬರೆಯುವುದು ಒಳ್ಳೆಯದು. ಏಕೆಂದರೆ, ಮಳೆ ಬೀಳುವ ಕಾಲದಲ್ಲಿ ಮಳೆಯೇ ಇದೆಯಲ್ಲ ; ಕವನ ಎಂಥದಕ್ಕೆ !
.
ಆಶಾವಾದಿಯ ಉವಾಚ, “ಮಳೆ ಬರುತ್ತಿದೆ. ಊರಿಡೀ ಛಾವಣಿ ಹೊದಿಸಲು ಸಾಧ್ಯವಿಲ್ಲ, ಆದರೆ, ನನ್ನ ತಲೆಯ ಮೇಲೆ ಕೊಡೆ ಹಿಡಿಯುತ್ತೇನೆ !’
.
ಪ್ರೇಯಸಿಯೊಬ್ಬಳು ಪ್ರಿಯಕರನಿಗೆ ದೂರವಾಣಿಯಲ್ಲಿ ಹೇಳುತ್ತಾಳೆ, “ಇಲ್ಲಿ ಮಳೆ ಬರುತ್ತಿದೆ. ನಿನಗಾಗಿ ಮಳೆಯ ನೀರನ್ನು ತೆಗೆದಿಡಬಲ್ಲೆ. ಆದರೆ, ಮಳೆಯ ಸದ್ದನ್ನು ಸಂಗ್ರಹಿಸಿಡುವುದು ಹೇಗೆ?’
.
ಮಳೆ ಬಂದಾಗ ಬಿರುಗಾಳಿ ಬೀಸುತ್ತದೆ, ಗುಡುಗು ಬರುತ್ತದೆ ಎಂದು ಕೆಲವರು ಹೆದರುತ್ತಾರೆ. ಇನ್ನು ಕೆಲವರು ಮಳೆ ಬಂದಾಗ  ಹೂವು ಅರಳುತ್ತದೆ ಎಂದು ಸಂತೋಷಪಡುತ್ತಾರೆ.

Advertisement

– ಅಪ್ಸರಾ

Advertisement

Udayavani is now on Telegram. Click here to join our channel and stay updated with the latest news.

Next