ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಕಾರಕೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣಕ್ಕೆ ಮಳೆಯ ನೀರು ನುಗ್ಗಿ ಮುಂದೆ ಹರಿದು ಹೋಗಲು ದಾರಿ ಇಲ್ಲದೆ ಸಂಗ್ರಹಗೊಂಡು ಸಣ್ಣ ಕೆರೆಯಂತಾಗಿದೆ. ಇದರಿಂದಾಗಿ ಮಕ್ಕಳು, ಶಿಕ್ಷಕರಿಗೆ ತರಗತಿ ನಡೆಸಲು ಸಾಧ್ಯವಾಗದೆ ತಾತ್ಕಾಲಿಕವಾಗಿ ಶಾಲೆಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಈ ಪರಿಸ್ಥಿತಿ ಇದ್ದರೂ ಗ್ರಾಮ ವ್ಯಾಪ್ತಿ ಹೊಂದಿರುವ ರಕ್ಕಸಗಿ ಗ್ರಾಮ ಪಂಚಾಯಿತಿ ಏನೂ ಕ್ರಮ ಕೈಕೊಳ್ಳದೆ ನಿರ್ಲಕ್ಷ್ಯ ತೋರಿದೆ. ಶಾಲೆಯ ಮುಖ್ಯಾಧ್ಯಾಪಕರು, ಎಸ್ಡಿಎಂಸಿಯವರು ಪಂಚಾಯಿತಿ ಪಿಡಿಓ ಗಮನಕ್ಕೆ ತಂದು ನೀರು ಹರಿದು ಹೋಗಲು ದಾರಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿ ನಿರಗಲಕ್ಷ್ಯದಿಂದ ಬೇಸತ್ತು ಕೊನೆಗೆ ಎಸ್ಡಿಎಂಸಿಯವರೇ ಶಿಕ್ಷಕರು, ಗ್ರಾಮಸ್ಥರ ಸಹಾಯದಿಂದ ಜೆಸಿಬಿ ಯಂತ್ರ ಬಳಸಿ ನೀರು ಹರಿದು ಮುಂದರ ಹೋಗಲು ದಾರಿ ಮಾಡುತ್ತಿದ್ದಾರೆ. ಪಂಚಾಯಿತಿ ನಿರ್ಲಕ್ಷ್ಯಕ್ಕೆ ಅಸಮಾಧಾನ ತೋಡಿಕೊಂಡಿರುವ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನೀಲಕಂಠರಾಯ ತೊಂಡಿಹಾಳ ಅವರು ಮಕ್ಕಳ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು ಎಂದು ನಾವೇ ಮುಂದಾಗಿ ಶಾಲಾ ಆವರಣದಲ್ಲಿ ಸಂಗ್ರಹಗೊಂಡಿರುವ ಮಳೆನೀರನ್ನು ಹೊರಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ