ಹುಬ್ಬಳ್ಳಿ: ಮಳೆ ಅವಾಂತರದಿಂದಾಗಿ ಬಡವರ ಸಂಕಷ್ಟ ಹೇಳತೀರದಾಗಿದೆ. ಮುಂದೇನು ಎನ್ನುವ ಚಿಂತೆ ಅನೇಕರನ್ನು ಕಾಡತೊಡಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ನಿರಂತರ ಮಳೆಗೆ ಹಳೇ ಹುಬ್ಬಳ್ಳಿ ಮೇದಾರ ಓಣಿಯ ಜನರು ಜೀವನೋಪಾಯಕ್ಕೆ ಪರದಾಡುವಂತಾಗಿದೆ.
ಮಳೆಯಿಂದಾಗಿ ಆಹಾರಧಾನ್ಯಗಳು, ಗೃಹಬಳಕೆ ವಸ್ತುಗಳು, ವಿವಿಧ ಸಾಮಗ್ರಿಗಳು ನೀರಿಗೆ ತೇಲಿಕೊಂಡು ಹೋಗಿವೆ. ಕೆಸರುಮಯ ಮನೆ ನೋಡಿದರೆ ಇದು ನಮ್ಮ ಮನೆಯೇ ಎಂಬ ಅನುಮಾನ ಬರುವಂತಾಗಿದೆ ಎಂಬುದು ಹಲವು ಸಂತ್ರಸ್ತರ ಅನಿಸಿಕೆಯಾಗಿದೆ.
ಜೀವನ ಮೂರಾಬಟ್ಟೆ: ಜೀವನಕ್ಕೆಂದು ಸಣ್ಣ ಸಣ್ಣ ಕೊಠಡಿಗಳಲ್ಲಿ ಪುಟ್ಟ ಉದ್ಯಮ ನಡೆಸುತ್ತಿರುವ ಹಲವು ಕುಟುಂಬಗಳು ಇಂದು ಅಕ್ಷರಶಃ ಬೀದಿಗೆ ಬಿದ್ದಿವೆ. ಗ್ಯಾರೇಜ್ ನಡೆಸುವವರು, ವೆಲ್ಡಿಂಗ್ ಮಾಡುವವರು ತಮ್ಮ ಸಾಮಗ್ರಿಗಳು ಇಲ್ಲದೆ ರೋಧಿಸುತ್ತಿದ್ದಾರೆ. ಇನ್ನು ಅದೆಷ್ಟೋ ಸಾಮಗ್ರಿಗಳು ನೀರಿಗೆ ಸಿಕ್ಕು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ. ನಿತ್ಯದ ಆದಾಯದಲ್ಲಿ ಬದುಕುತ್ತಿದ್ದ ನಮಗೆ ಈ ಅನಾಹುತದಿಂದ ಮುಂದೆ ಬದುಕು ಸಾಗಿಸುವುದು ಹೇಗೆ ಎಂಬ ನೋವು ಕಾಡುತ್ತಿದೆ ಎಂದು ಬಡಗಿ ಕೆಲಸದಲ್ಲಿರುವ ಮಕ್ತುಂಹುಸೇನ ಬೆಟಗೇರಿ ಅಳಲು ತೋಡಿಕೊಂಡರು.
6 ಅಡಿಗೂ ಹೆಚ್ಚು ನೀರು: ಬುಧವಾರ ಮಧ್ಯರಾತ್ರಿ ನಾಲಾದಲ್ಲಿ ಹರಿದು ಬಂದ ಅಪಾರ ಪ್ರಮಾಣದ ನೀರು ಸುಮಾರು 6 ಅಡಿಗೂ ಹೆಚ್ಚು ಎತ್ತರದಲ್ಲಿ ಹರಿದಿದೆ. ಇದರಿಂದ ಆ ಭಾಗದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ, ವಾಹನಗಳು ಸೇರಿದಂತೆ ಎಲ್ಲವೂ ಜಲಾವೃತಗೊಂಡಿದ್ದವು. ಮಳೆ ಪ್ರಮಾಣ ಕಡಿಮೆಯಾದ ನಂತರ ನೀರಿನ ಪ್ರವಾಹ ಕಡಿಮೆಯಾಗಿದೆ.
ಹಳೇಹುಬ್ಬಳ್ಳಿ ಮೇದಾರ ಓಣಿಯಲ್ಲಿರುವ ಸಣ್ಣ ನಾಲಾದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರಿಂದ ಅದರ ಗೋಡೆಗಳು ಕುಸಿದು ಪಕ್ಕದಲ್ಲಿದ್ದ ಮನೆಗಳಿಗೆ ಹಾನಿಯಾಗಿದೆ. ಜೊತೆಯಲ್ಲಿ ಅಪಾರ ಪ್ರಮಾಣದ ನೀರು ಒಳಭಾಗಕ್ಕೆ ನುಗ್ಗಿದ್ದರಿಂದ ಅಲ್ಲಿನ ಎಲ್ಲ ಸಾಮಗ್ರಿಗಳು ಹಾಳಾಗಿ ಹೋಗಿವೆ. ಜೊತೆಯಲ್ಲಿಯೇ ಅಲ್ಲಿದ್ದ ನೂರಾರು ಮನೆಗಳಿಗೆ ನೀರು ನುಗ್ಗಿದೆ.
ಹಳೇಹುಬ್ಬಳ್ಳಿ ಮೇದಾರ ಓಣಿಯಲ್ಲಿ ಕುಸಿದಿರುವ ನಾಲಾ ಗೋಡೆ ಹಾಗೂ ಮೇದಾರ ಓಣಿಯಲ್ಲಿ ಪ್ರವಾಹದಿಂದ ಹಾಳಾಗಿರುವ ವಿದ್ಯುತ್ ಉಪಕರಣಗಳನ್ನು ತೋರಿಸುತ್ತಿರುವುದು.
ಸತತ ಮಳೆಯಿಂದ ನಾಲಾ ಉಕ್ಕೇರಿ ಪಕ್ಕದಲ್ಲಿದ್ದ ಅಂಗಡಿಗಳಿಗೆ ನೀರು ಹೊಕ್ಕು ಎಲ್ಲ ಸಾಮಗ್ರಿಗಳು ಹಾಳಾಗಿವೆ. ಸಣ್ಣ ಪುಟ್ಟ ಸಾಮಗ್ರಿಗಳು ತೇಲಿಕೊಂಡು ಹೋಗಿವೆ.
•ಅಬ್ದುಲ್ ಗಣಿ, ವೆಲ್ಡಿಂಗ್ ಮಳಿಗೆದಾರ
ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸರು, ಪಾಲಿಕೆಯವರು ಆಗಮಿಸಿ ಕೂಡಲೇ ಮನೆಗಳನ್ನು ಖಾಲಿ ಮಾಡಿ ಎಂದು ಹೇಳಿದಾಗ ದಿಕ್ಕು ತೋಚದಂತಾಯಿತು. ನಂತರ ಮನೆಯಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಬಂದೆವು. ಕೆಲವರು ಗಂಜಿ ಕೇಂದ್ರಗಳಿಗೆ ತೆರಳಿದರೆ ಇನ್ನು ಕೆಲವರು ಪರಿಚಯಸ್ಥರ ಮನೆಗಳಿಗೆ ತೆರಳಿ ಆಶ್ರಯ ಪಡೆದುಕೊಂಡಿದ್ದರು.
•ಸಂತೋಷ ಸವಣೂರ, ಮೇದಾರ ಓಣಿ ನಿವಾಸಿ
ಬುಧವಾರ ಮಧ್ಯರಾತ್ರಿ ಮನೆಯ ಹಿಂಭಾಗದಲ್ಲಿದ್ದ ನಾಲಾದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದು ನಾಲಾ ತಡೆಗೋಡೆ ಕುಸಿದು ಬಿದ್ದಿತು. ಇದರಿಂದ ಅಪಾರ ಪ್ರಮಾಣದ ನೀರು ನಮ್ಮ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಮಾಡಿದೆ.
•ಆಷಿಸರ್ ಕಂದಗಲ್ಲ, ಮೇದಾರ ಓಣಿ ನಿವಾಸಿ
•ಬಸವರಾಜ ಹೂಗಾರ