ಉಡುಪಿ: ಉಡುಪಿ ನಗರಕ್ಕೆ ನೀರು ಪೂರೈಕೆಯಾಗುವ ಸ್ವರ್ಣಾ ನದಿ ಪಾತ್ರದ ಪ್ರದೇಶಗಳಲ್ಲಿ ಕೂಡ ಮಂಗಳವಾರ ಸಾಧಾರಣ ಮಳೆ ಸುರಿದಿದೆ. ಸಂಜೆಯ ಬಳಿಕ ಮಳೆ ಬಿರುಸಾಗಿದ್ದು, ನಗರದ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ ದೊರೆಯಲಿದೆ ಎಂಬ ಆಶಾಭಾವನೆ ಬಲವಾಗಿದೆ.
ಸೋಮವಾರ ಮತ್ತು ಮಂಗಳವಾರದ ಮಳೆಯಿಂದ ನೀರಿನ ಹರಿವು ಆರಂಭವಾಗಿಲ್ಲ. ಆದರೆ ಕೆಲವು ಹೊಂಡಗಳಿಗೆ ನೀರು ಸೇರಿದೆ. ನಿರಂತರ ಮಳೆಯಾದರೆ ಒಂದೆರಡು ದಿನಗಳಲ್ಲಿ ನದಿಯಲ್ಲಿ ನೀರಿನ ಹರಿವು ಆರಂಭವಾಗಬಹುದು ಎಂಬ ಅಂದಾಜು ಅಧಿಕಾರಿಗಳದ್ದು.
ಸ್ವರ್ಣಾ ನದಿಯ ಹೆಚ್ಚಿನ ಗುಂಡಿಗಳಲ್ಲಿದ್ದ ನೀರನ್ನು ಪಂಪಿಂಗ್ ಮಾಡಿ ಜೂ.9ರ ವರೆಗೆ ಸರಬರಾಜು ಮಾಡಲಾಗಿತ್ತು. ಆದರೆ ಎರಡು ದಿನಗಳಿಂದ ನೀರಿನ ಮಟ್ಟ ತೀರಾ ಕುಸಿದಿದೆ. ಮಂಗಳವಾರ 1 ಮೀ.ನಷ್ಟು ಮಾತ್ರ ನೀರಿತ್ತು. ಮಂಗಳವಾರ ನೀರು ಸರಬರಾಜಾಗಬೇಕಿದ್ದ ಪ್ರದೇಶಗಳ ಪೈಕಿ ಹೆಚ್ಚಿನ ಪ್ರದೇಶಗಳಿಗೆ ನೀರಿನ ಕೊರತೆಯಾಯಿತು. ಜತೆಗೆ ಮಣಿಪಾಲ ಈಶ್ವರನಗರದಲ್ಲಿ ನೀರಿನ ಪೈಪ್ ಒಡೆದು ಮತ್ತಷ್ಟು ತೊಂದರೆಯಾಯಿತು.
ತುಂಬೆ: ನೀರಿನ ಮಟ್ಟ ತುಸು ಏರಿಕೆ
ಮಂಗಳೂರು: ಮಂಗಳವಾರ ನೇತ್ರಾವತಿ ಜಲನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಮಂಗಳವಾರ 10 ಸೆಂ.ಮೀ.ನಷ್ಟು ಏರಿಕೆಯಾಗಿದೆ.
ಸೋಮವಾರ ಸಂಜೆ ವೇಳೆಗೆ ನೀರಿನ ಮಟ್ಟ 2.10 ಮೀ. ಇತ್ತು. ಮಂಗಳವಾರ ದಿನಪೂರ್ಣ ಪಂಪಿಂಗ್ ಮಾಡಿದ ಬಳಿಕ ಸಂಜೆಯ ವೇಳೆಗೂ ಡ್ಯಾಂನಲ್ಲಿ ನೀರಿನ ಮಟ್ಟ 2.20 ಮೀ. ಇದ್ದ ಹಿನ್ನೆಲೆಯಲ್ಲಿ ನೀರು ಡ್ಯಾಂಗೆ ಹರಿದುಬಂದಿದೆ ಎಂದು ಲೆಕ್ಕ ಹಾಕಲಾಗಿದೆ.