Advertisement

ಸಪ್ಪಳ ಮಾಡುತ ತಿನ್ನಲು ಹಪ್ಪಳ

06:00 AM Jun 01, 2018 | |

ಬೇಸಿಗೆಯಲ್ಲಿ  ವಿವಿಧ ಧಾನ್ಯ, ಗೆಡ್ಡೆ , ಕಾಯಿ, ಸೊಪ್ಪುಗಳಿಂದ ಆರೋಗ್ಯಕರ ಹಪ್ಪಳ, ಸಂಡಿಗೆ ಮಾಡಿಟ್ಟರೆ ಮಳೆಗಾಲದಲ್ಲಿ ದಿಢೀರನೆ ಕಾಯಿಸಿ ಅನ್ನದೊಂದಿಗೆ, ಗಂಜಿಯೊಂದಿಗೆ ಸವಿಯಬಹುದು. 

Advertisement

ಹಲಸಿನಕಾಯಿ ಹಪ್ಪಳ
ಬೇಕಾಗುವ ಸಾಮಗ್ರಿ: ಬಲಿತ ಹಲಸಿನಕಾಯಿ ತೊಳೆ 25-30,  ಜೀರಿಗೆ- 1 ಚಮಚ, ಒಣಮೆಣಸಿನಕಾಯಿ ಹುಡಿ- 1 ಚಮಚ, ಎಣ್ಣೆ- 2 ಚಮಚ, ಕರಿ ಎಳ್ಳು- 2 ಚಮಚ.

ತಯಾರಿಸುವ ವಿಧಾನ: ಬಲಿತ ಹಲಸಿನಕಾಯಿಯ ತೊಳೆಗಳನ್ನು ಬೀಜ ತೆಗೆದು ಒಂದು ಒದ್ದೆ ಬಟ್ಟೆಯಲ್ಲಿ ಕಟ್ಟಿ ಹಬೆ ಪಾತ್ರೆಯ ಒಳಗೆ ಹಬೆಯ ಮೇಲಿಟ್ಟು ಸುಮಾರು ಅರ್ಧ ಗಂಟೆ ಬೇಯಿಸಿ ತೆಗೆಯಿರಿ. ಉಪ್ಪು , ಮೆಣಸಿನ ಹುಡಿ, ಜೀರಿಗೆ ಸೇರಿಸಿ ನೀರು ಹಾಕದೆ ಒರಳಲ್ಲಿ ಹಾಕಿ ಗುದ್ದಿರಿ ಇಲ್ಲವೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ  ಹಿಟ್ಟು ತಯಾರಿಸಿರಿ. ಕೈಗೆ ಎಣ್ಣೆ, ನೀರು ಸವರಿ ಚಿಕ್ಕ ಚಿಕ್ಕ ಉಂಡೆ ಮಾಡಿಡಿ. ಪಾಲಿಥಿನ್‌ ಕಾಗದ ಇಲ್ಲವೆ ಬಾಳೆಎಲೆಗೆ ಎಣ್ಣೆ ಸವರಿ ಅದರ ಮೇಲೆ ಹಪ್ಪಳದ ಹಿಟ್ಟಿನ ಉಂಡೆ ಇಟ್ಟು ಇನ್ನೊಂದು ಪಾಲಿಥಿನ್‌ ಕಾಗದ/ ಬಾಳೆಎಲೆಗೆ ಎಣ್ಣೆ ಸವರಿ ಇಟ್ಟು ಮಣೆಯಿಂದ ಒತ್ತಿರಿ. ಇನ್ನೊಂದು ಪಾಲಿಥಿನ್‌ ಹಾಳೆಗೆ ಸ್ವಲ್ಪ ಎಣ್ಣೆ ಸವರಿ ಹಪ್ಪಳವನ್ನು ಸ್ವಲ್ಪ ಸಮವಾಗಿ ತಟ್ಟಿ ಚಾಪೆ ಇಲ್ಲವೆ ಬಟ್ಟೆಯ ಮೇಲೆ ಹರಡಿ ಚಾಪೆಯನ್ನು ಬಿಸಿಲಲ್ಲಿ ಇಟ್ಟು ಹಪ್ಪಳ ಒಣಗಿಸಿರಿ. ಚಾಪೆಯಿಂದ ತೆಗೆದ ಹಪ್ಪಳವನ್ನು ಕವುಚಿ ಹಾಕಿ ಎರಡು-ಮೂರು ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ಸಂಗ್ರಹಿಸಿರಿ
ಇದನ್ನು ಕೆಂಡದ ಮೇಲೆ, ಗ್ಯಾಸ್‌ ಒಲೆಯ ಮೇಲೆ ಸುಟ್ಟು ಇಲ್ಲವೆ ಕಾಯಿಸಿ ಎಣ್ಣೆ ಸವರಿ ತಿನ್ನಬಹುದು. ಎಣ್ಣೆಯಲ್ಲಿ  ಕಾಯಿಸಿಯೂ ತಿನ್ನಬಹುದು.

ಒಣಮೆಣಸಿನ ಖಾರದ ಹಪ್ಪಳ
ಬೇಕಾಗುವ ಸಾಮಗ್ರಿ:
ಉದ್ದಿನಬೇಳೆ- 4 ಕಪ್‌, ಹರಳುಪ್ಪು- 1/4 ಕಪ್‌, ನೀರು- 5 ಕಪ್‌, ಇಂಗು ಗೋಲಿಗಾತ್ರ, ಒಣಮೆಣಸಿನಕಾಯಿ – ಪಪ್ಪಡ ಖಾರ 20 ಗ್ರಾಂ, ಸ್ವಲ್ಪ ಎಣ್ಣೆ. 

ತಯಾರಿಸುವ ವಿಧಾನ: ಉದ್ದಿನ ಬೇಳೆಯನ್ನು ಒಣಗಿಸಿ ಮಿಲ್‌ನಲ್ಲಿ ಹಿಟ್ಟು ಮಾಡಿಸಿ ತನ್ನಿ. ಜರಡಿ ಹಿಡಿದು ಅದರಿಂದ ಒಂದು ಕಪ್‌ ಪ್ರತ್ಯೇಕ ಇಡಿ. ಪಪ್ಪಡ, ಖಾರದ ಹುಡಿ ಮಾಡಿಡಿ. ಪಾತ್ರೆಯಲ್ಲಿ ನೀರು ಹಾಕಿ ಉಪ್ಪು ಹಾಕಿ ಕುದಿಸಿ. ಪಪ್ಪಡ ಖಾರದ ಪುಡಿ ಬೆರೆಸಿರಿ. ತಣಿದ ನಂತರ ಮೇಲಿನ ನೀರನ್ನು ಬಸಿದು ಕೆಳಗಿನ ಮಡ್ಡಿಯನ್ನು ಎಸೆಯಿರಿ. ಬಸಿದ ದ್ರಾವಣ, ಮೆಣಸಿನಕಾಯಿ, ಹಿಂಗು ಒಟ್ಟಿಗೆ ಹಾಕಿ ನಯವಾಗಿ ರುಬ್ಬಿ ತೆಗೆದು ಉದ್ದಿನ ಹಿಟ್ಟು ಬೆರೆಸಿ ಹಪ್ಪಳದ ಹಿಟ್ಟು ಕಲಸಿರಿ. ಎಣ್ಣೆ ಹಚ್ಚಿ ಹದಗಾತ್ರದ ಮುದ್ದೆ ಮಾಡಿ ಬಟ್ಟೆಯಿಂದ ಮುಚ್ಚಿಡಿ. ಮರುದಿನ ಹಿಟ್ಟಿನ ಉದ್ದ ಉರುಟು ಲೋಳೆ ಮಾಡಿ ಒಂದೇ ಗಾತ್ರದ ಉಂಡೆ ಕತ್ತರಿಸಿಡಿ. ಮಣೆಗೆ ಎಣ್ಣೆ ಸವರಿ ಉದ್ದಿನ ಹಿಟ್ಟಿನಲ್ಲಿ ಒಂದೊಂದೇ ಉಂಡೆ ಹೊರಳಿಸಿ ಲಟ್ಟಣಿಗೆಯಿಂದ ಹಪ್ಪಳ ಲಟ್ಟಿಸಿ ಬಿಸಿಲಿಗೆ ಒಣಗಿಸಿ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಇದನ್ನು ಮನೆಯೊಳಗೆ ಫ್ಯಾನ್‌ ಗಾಳಿಯಲ್ಲೂ ಒಣಗಿಸಬಹುದು. ಮೆಣಸಿನಕಾಯಿ ರುಬ್ಬುವ ಬದಲು ಮೆಣಸಿನಕಾಯಿ ಹುಡಿ ಉಪಯೋಗಿಸಬಹುದು.

Advertisement

ಉದ್ದಿನ ಹಪ್ಪಳ-ಪಾಪಡ್‌
ಬೇಕಾಗುವ ಸಾಮಗ್ರಿ
: ಉದ್ದಿನಬೇಳೆ- 4 ಕಪ್‌, ಎಣ್ಣೆ- 1/2 ಕಪ್‌, ನೀರು- 3 ಕಪ್‌, ಪಪ್ಪಡ ಖಾರ- 50 ಗ್ರಾಂ, ಹರಳುಪ್ಪು- 1/4 ಕಪ್‌. 

ತಯಾರಿಸುವ ವಿಧಾನ: ಉದ್ದಿನಬೇಳೆ ಬಿಸಿಲಿಗೆ ಒಣಗಿಸಿ ಹಿಟ್ಟು ಮಾಡಿಸಿ ಜರಡಿ ಹಿಡಿಯಿರಿ. ಅದರಿಂದ ಒಂದು ಕಪ್‌ ಹಿಟ್ಟನ್ನು ಪ್ರತ್ಯೇಕ ತೆಗೆದಿಡಿ. ಒಂದು ಕಪ್‌ ನೀರಿಗೆ ಉಪ್ಪು, ಪಪ್ಪಡಖಾರ ಹಾಕಿ ಒಲೆಯ ಮೇಲಿಟ್ಟು ಕುದಿಸಿರಿ. ತಣಿದೊಡನೆ ಮೇಲಿನ ನೀರನ್ನು ಬಸಿದು ತೆಗೆದಿಡಿ. ತಳದ ಮಡ್ಡಿ ಎಸೆಯಿರಿ. ಪಪ್ಪಡ ಖಾರದ ದ್ರಾವಣದೊಂದಿಗೆ ಉದ್ದಿನಹಿಟ್ಟು , ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ನಾದಿರಿ. ಬೇಕಾದರೆ ಸ್ವಲ್ಪ ತಣ್ಣೀರು ಸೇರಿಸಿ ಹಿಟ್ಟಿನ ಮುದ್ದೆ ಮಾಡಿ ಬಟ್ಟೆಯಿಂದ ಮುಚ್ಚಿಡಿ. ಮರುದಿನ ಉಳಿದ ಎಣ್ಣೆ ಹಾಕಿ ಚೆನ್ನಾಗಿ ಗುದ್ದಿ ಮೃದು ಮಾಡಿ. ಹಿಟ್ಟಿನ ಉದ್ದ ಉರುಟು ಲೋಳೆ ಮಾಡಿ ಒಂದೇ ಗಾತ್ರದಲ್ಲಿ ಚಿಕ್ಕ ಚಿಕ್ಕ ಉಂಡೆ ತುಂಡು ಮಾಡಿರಿ. ಪ್ರತ್ಯೇಕ ತೆಗೆದಿಟ್ಟ ಉದ್ದಿನ ಹಿಟ್ಟಿನಲ್ಲಿ ಒಂದೊಂದೆ ಉಂಡೆ ಹೊರಳಿಸಿ ಮಣೆಗೆ ಸ್ವಲ್ಪ ಎಣ್ಣ ಸವರಿ ಹಪ್ಪಳ ಲಟ್ಟಿಸಿ ಬಿಸಿಲಿಗೆ ಹಾಕಿ ಒಣಗಿಸಿರಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಮುಚ್ಚಿಡಿ. ಬೇಕಾದಾಗ ಕಾಯಿಸಿ ತಿನ್ನಲು ರುಚಿ.

ಮರಗೆಣಸು-ಪಾಲಕ್‌ ಸೊಪ್ಪಿನ ಹಪ್ಪಳ
ಬೇಕಾಗುವ ಸಾಮಗ್ರಿ:
ಮರಗೆಣಸಿನ ಹಿಟ್ಟು- 4 ಕಪ್‌, ಮೈದಾ- 1 ಕಪ್‌, ಉಪ್ಪು- 4 ಚಮಚ, ಹಸಿಮೆಣಸಿನಕಾಯಿ- 4, ಇಂಗಿನ ಹುಡಿ ಸ್ವಲ್ಪ, ಪಾಲಕ್‌ ಸೊಪ್ಪು ಒಂದು ಕಟ್ಟು. 

ತಯಾರಿಸುವ ವಿಧಾನ: ಹಪ್ಪಳ ಮಾಡುವ ಹಿಂದಿನ ರಾತ್ರಿ ಮೈದಾ ಮತ್ತು ಮರಗೆಣಸಿನ ಹಿಟ್ಟನ್ನು ಜರಡಿ ಹಿಡಿದು ಪಾತ್ರೆಗೆ ಹಾಕಿ ಸಾಕಷ್ಟು ನೀರು ಹಾಕಿ ಮುಚ್ಚಿಡಿರಿ. ಮರುದಿನ ಮಿಶ್ರಣದ ಮೇಲಿನ ನೀರನ್ನು ಹೊರಚೆಲ್ಲಿ . ಪಾಲಕ್‌ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಅದರ ನೀರನ್ನು ಬಟ್ಟೆಯಲ್ಲಿ ಹಿಂಡಿ ತೆಗೆದು ಹಿಟ್ಟಿಗೆ ಹಾಕಿ ಉಪ್ಪು , ಮೆಣಸಿನಕಾಯಿ ನೀರು ಹಾಕಿ ಚೆನ್ನಾಗಿ ಕದಡಿ ಇಂಗಿನ ಹುಡಿಯನ್ನು ಹಾಕಿ ಹಬೆಯ ಪಾತ್ರೆಯಲ್ಲಿ ಬಟ್ಟಲಲ್ಲಿ ಹಾಕಿ ಬೇಯಿಸಿರಿ. ಸ್ವಲ್ಪ ಬಿಸಿ ಇರುವಾಗ ಮಣೆಗೆ ಎಣ್ಣೆ ಸವರಿ ಹಿಟ್ಟನ್ನು ಚೆನ್ನಾಗಿ ನಾದಿ ಚಿಕ್ಕ ಚಿಕ್ಕ ಉಂಡೆ ಮಾಡಿ. ಪಾಲಿಥಿನ್‌ ಕಾಗದಕ್ಕೆ ಎಣ್ಣೆ ಸವರಿ ಉಂಡೆ ಇಟ್ಟು ಇನ್ನೊಂದು ಪಾಲಿಥಿನ್‌ ಕಾಗದದಿಂದ ಮುಚ್ಚಿ ಮಣೆಯಿಂದ ಒತ್ತಿ ಹಪ್ಪಳವನ್ನು ಚಾಪೆಯಲ್ಲಿ ಹರಡಿ ಎರಡು-ಮೂರು ದಿನ ಬಿಸಿಲಿನಲ್ಲಿ ಒಣಗಿಸಿ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ.

ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next