Advertisement

ಮಳೆ, ಚಳಿಯಿಂದ ರೈತರಿಗೆ ಸಮಸ್ಯೆಗಳ ಸಾಗರ

05:55 PM Nov 15, 2021 | Team Udayavani |

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಸಾಕಪ್ಪ ಎನ್ನುವಷ್ಟು ಮಳೆ ಆಗದಿದ್ದರೂ, ಜಡಿ ಮಳೆಗೆ ಜನರು ಬೇಸತ್ತು ಹೋಗಿದ್ದಾರೆ. ಜೋರಾಗಿಯೂ ಬರದೆ, ಸುಮ್ಮನೆಯೂ ಇರದೆ ದಿನಪೂರ್ಣ ಮೋಡ ಕವಿದ ವಾತಾವರಣದಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗಿದೆ. ಏನಾದರು ನಷ್ಟ ಸಂಭವಿಸಿದರೆ, ಅದನ್ನು ಅನುಭವಿಸುವುದು ಕೃಷಿಕರು ಎಂಬುವುದು ಮತ್ತೋಮ್ಮೆ ಸಾಬೀತಾಗಿದೆ.

Advertisement

ತಾಲೂಕಿನಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿರುವ ಸೋನೆ ಮಳೆಗೆ ಬೇಯಿಸಿದ ಅಡಕೆ ಕೊಳೆತು ಹೋಗುತ್ತಿದೆ. ರಾಗಿ ಪೈರು ನೆಲಕಚ್ಚಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದಂತಾಗಿದೆ. ಕೂಲಿ ಕಾರ್ಮಿಕರು ಕೆಲಸ ಮಾಡಲಾಗುತ್ತಿಲ್ಲ. ಮನೆಗಳು ಕುಸಿಯುತ್ತಿವೆ. ಸರ್ಕಾರಿ ಕಟ್ಟಡಗಳ ಮೇಲೆ ನೀರು ನಿಲ್ಲುತ್ತಿದೆ, ರಸ್ತೆಗಳು ಕೆಸರು ಗದ್ದೆಗಳಾಗುತ್ತಿವೆ. ಮಕ್ಕಳು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಜೊತೆಗೆ ಮಳೆ ಹಾಗೂ ಹೇಮಾವತಿ ನೀರಿನಿಂದ ಭತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಮಳೆಯಿಂದ ಉಂಟಾದ ಸಮಸ್ಯೆಯ ಜೊತೆ ತಾಲೂಕಿ ನಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತಿರುವುದು ರೈತರಿಗೆ ನೆಮ್ಮದಿಯ ವಿಷಯವಾಗಿದೆ.

ಕೊಳೆಯುತ್ತಿದೆ ಅಡಕೆ: ತಾಲೂಕಿನಲ್ಲಿ ಸತತ ಸೋನೆ ಮಳೆಯಿಂದ ಅಡಕೆ ಕೊಳೆಯುತ್ತಿದೆ. ಅಡಕೆ ಚೇಣಿ ಮಾಡಿಕೊಂಡವರು ಸಮಸ್ಯೆ ಅನುಭವಿಸುತ್ತಿದ್ದರೆ, ಮರ ದಲ್ಲಿದ್ದ ಅಡಕೆ ಕಿಳದೆ ಗೋಟು ಆಗುತ್ತಿದೆ. ಕಿತ್ತ ಅಡಕೆ ಸುಳಿಯದೆ ಬಿದ್ದಿವೆ, ಸುಳಿದು ಬೇಯಿಸಿದ ಅಡಕೆ ಬಿಸಿಲು ಇಲ್ಲದೆ ಕೊಳೆಯುತ್ತಿದೆ. ತಾಲೂಕಿನ ಬಹುತೇಕ ಭಾಗದಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ. ಮಳೆ ಖುಷಿ ಜೊತೆ ನಷ್ಟವನ್ನುಂಟು ಮಾಡುತ್ತಿದ್ದು, ಬಹುತೇಕ ಭಾಗ ನಷ್ಟ ಅನುಭವಿಸುತ್ತಿರುವುದು ರೈತ ಆಗಿದ್ದಾನೆ. ನೆಲ ಕಚ್ಚಿದ ರಾಗಿ: ರಾಗಿ ತಾಲೂಕಿನ ಪ್ರಮುಖ ಬೆಳೆ.

ಈ ಬಾರಿ ಉತ್ತಮ ಫ‌ಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ವಾಯುಬಾರ ಕುಸಿತದ ಏಟು ಬಲು ಜೋರಾಗಿ ಬಿದ್ದಿದೆ. ಎದೆಯ ಮಟ್ಟಕ್ಕೆ ಬೆಳೆದಿದ್ದ ರಾಗಿ ನೆಲ ಕಚ್ಚಿದೆ. ಮಳೆ ನೀರಿಗೆ ರಾಗಿ ತೆನೆ ಮೊಳಕೆ ಹೊಡೆಯುತ್ತಿದೆ. ಅಧಿಕ ದರಗಳ ನಡುವೆ ಬೆಳೆದ ರಾಗಿ ಸಂಪೂರ್ಣ ರೈತರ ಕೈಸೇರುವುದು ಅನುಮಾನವಾಗಿದೆ. ಇದನ್ನು ಬಳಸಿ ಕೊಳ್ಳುವ ಮಧ್ಯವರ್ತಿಗಳು ರಾಗಿಯ ಧರವನ್ನು ಸಮಯ ಕಾಯ್ದು ಏರಿಸುವುದರಲ್ಲಿ ಸಂಶಯವಿಲ್ಲವಾಗಿದೆ.

Advertisement

ಬೀದಿ ಬದಿ ವ್ಯಾಪಾರಿಗಳಿಗೂ ಕಷ್ಟ: ಮಳೆ ಬರು ವುದು, ಹೋಗುವುದು ಯಾವುದು ತಿಳಿಯುತ್ತಿಲ್ಲ, ಸೂರ್ಯನ ದರ್ಶನವಾಗಿ ಒಂದು ವಾರ ಕಳೆಯು ತ್ತಿದೆ. ಹಣ್ಣು, ಹೂ, ಎಲೆ, ತರಕಾರಿ ಹಾಗೂ ತಳ್ಳುವ ಗಾಡಿಯ ಹೋಟೆಲ್‌, ಪಾನಿಪುರಿ, ಕಬಾಬ್‌ ವ್ಯಾಪಾರಿಗಳು ಸೋನೆ ಮಳೆಯ ಆಟಕ್ಕೆ ಸುಸ್ತಾಗಿ ಹೋಗಿದ್ದಾರೆ. ಮಳೆ ಇಲ್ಲವೆಂದು ವ್ಯಾಪಾರ ಆರಂಭಿಸಿದರೆ, ಮಳೆ ಬಂದು ಮಾಡಿದ ತಿನಿಸುಗಳು ವ್ಯಾಪಾರವಿಲ್ಲದೆ ಉಳಿಯುತ್ತಿದೆ. ದುಬಾರಿ ದಿನಸಿ ಸಾಮಗ್ರಿಗಳ ಆರ್ಭಟದಲ್ಲಿ ಒಪ್ಪತ್ತಿನ ಊಟಕ್ಕಾಗಿ ದುಡಿಯುವ ಕೈಗಳು ನಷ್ಟ ಅನುಭವಿಸುತ್ತಿವೆ.

ಮುಂದಿನ ದಿನದಲ್ಲೂ ಮಳೆ ನಿರೀಕ್ಷೆ : ಚಿಕ್ಕನಾಯಕನ ಹಳ್ಳಿ ತಾಲೂಕಿನಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ಮಳೆಯ ಮುನ್ಸೂಚನೆ ವಿವರವನ್ನು ಪ್ರಕಟಗೊಳಿಸಿದೆ. ಸೋಮವಾರ 29 ಮಿ.ಮೀ, ಮಂಗಳವಾರ 36.1 ಮಿ.ಮೀ, ಬುಧವಾರ 32.0 ಮಿ.ಮೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ತಿಳಿಸಿದ್ದಾರೆ.

“ಮಳೆಯಾಗುತ್ತಿರುವುದು ಖುಷಿಯ ವಿಚಾರ. ಅಡಕೆ ಕಟಾವಿಗೆ ಬಂದಿದೆ. ಆದರೆ, ಮಳೆಯಿಂದ ಕಟಾವಿಗೆ ತೊಂದರೆಯಾಗಿದೆ. ರಾಗಿ ಪೈರು ಹಾಳಾಗುತ್ತಿದೆ. ಎಲ್ಲಾ ಕಡೆಯಿಂದ ರೈತರು ತೊಂದರೆಪಡು ವಂತಾಗಿದೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಿ, ರೈತರಿಗೆ ಸೂಕ್ತ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.” – ರವೀಂದ್ರ.ಟಿ, ಅಧ್ಯಕ್ಷ, ತಾಲೂಕು ಬಿಜೆಪಿ

ರೈತ ಮೋರ್ಚಾ, ಚಿಕ್ಕನಾಯಕನಹಳ್ಳಿ

  • – ಚೇತನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next