ಉಡುಪಿ: ಮಳೆಗಾಲದ ಸಿದ್ಧತೆ, ಮಲ್ಪೆ-ಹೆಬ್ರಿ ಹೆದ್ದಾಎ ಟೆಂಡರ್ ರದ್ದತಿ, ವಾರಾಹಿ ಕಾಮಗಾರಿ ವಿಳಂಬ, ಇಂದಿರಾ ಕ್ಯಾಂಟೀನ್ ಸ್ಥಳಾಂತರ ಸಹಿತ ಹಲವು ವಿಷಯಗಳ ಕುರಿತು ಮಂಗಳವಾರ ನಡೆದ ನಗರಸಭೆ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಆಗಬೇಕಿದ್ದ ಮಳೆಗಾಲ ತಯಾರಿ ಕೆಲಸಗಳು ವಿಳಂಬವಾಗಿ ನಡೆಯು ತ್ತಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಗಾಲ ಆರಂಭದ ಮುನ್ನ ಚರಂಡಿ ಹೂಳೆತ್ತುವುದು, ಇತರೆ ಸ್ವಚ್ಛತ ಕಾರ್ಯ ಗಳು ವೇಗ ಪಡೆದುಕೊಳ್ಳಬೇಕಿದೆ. ಮಳೆ ಈಗಾಗಲೇ ಶುರುವಾಗಿರುವುದರಿಂದ ಶೇ.25ರಷ್ಟು ಕೆಲಸ ಮಾತ್ರ ನಡೆದಿದೆ ಎಂದು ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಕಳವಳ ವ್ಯಕ್ತಪಡಿಸಿದರು. ವಾರಕ್ಕೊಮ್ಮೆ ಕೆಲಸ ನಡೆಯುತ್ತಿದ್ದು, ಕೆಲವು ವಾರ್ಡ್ಗಳಲ್ಲಿ ಮಾತ್ರ ನಡೆದಿದೆ ಎಂದರು.
ಕಸ ವಿಲೇವಾರಿ ವ್ಯವಸ್ಥಿತವಾಗಿ ನಡೆಯದ ಕುರಿತು ರಾಜು ಪ್ರಸ್ತಾವಿಸಿದರು. ಅಮೃತಾ ಕೃಷ್ಣಮೂರ್ತಿ ಧ್ವನಿಗೂಡಿಸಿ ಕಿನ್ನಿಮೂಲ್ಕಿ ವಾರ್ಡ್ನಲ್ಲಿ ಮಳೆ ನೀರು ಹರಿಯುವ ಬೃಹತ್ ತೋಡಿನ ಹೂಳೆತ್ತುವ ಕಾರ್ಯವಾಗಿಲ್ಲ. ಜೆಸಿಬಿ ಮೂಲಕ ಇದರ ಸ್ವಚ್ಛತೆ ಮಾಡಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಅವಾಂತರ ಸೃಷ್ಟಿಯಾಗಲಿದೆ. ಈ ಬಗ್ಗೆ ಅಧ್ಯಕ್ಷರಿಗೆ ಕರೆ ಮಾಡಿದರೂ ಅವರು ಸ್ವೀಕರಿಸುವುದಿಲ್ಲ, ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ದೂರಿದರು.
Related Articles
ಶೀಘ್ರ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿ ದರು. ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಎಇಇ ಯಶವಂತ್ ಉಪಸ್ಥಿತರಿದ್ದರು. ಪ್ರಶ್ನೋತ್ತರ ಹಾಗೂ ಹೆಚ್ಚು ಚರ್ಚೆ ಇಲ್ಲದೇ ಕೇವಲ ಒಂದೂವರೆ ಗಂಟೆಯಲ್ಲಿ ಅಧಿವೇಶನ ಪೂರ್ಣಗೊಂಡಿತ್ತು. ವಾರಾಹಿ ಕಾಮಗಾರಿ ವಿಳಂಬಕ್ಕೆ ಗರಂ ಮಳೆಗಾಲ ಆರಂಭವಾಗುತ್ತಿದ್ದರೂ ನಗರದಲ್ಲಿ ವಾರಾಹಿ ಕಾಮಗಾರಿ ವಿಳಂಬ ಮಾಡುತ್ತಿರುವ ಬಗ್ಗೆ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ರಸ್ತೆಗಳನ್ನು ಹಾಗೇ ಬಿಡಲಾಗಿದೆ. ಮಣ್ಣೆಲ್ಲ ರಸ್ತೆಮೇಲೆ ಹರಡಿಕೊಂಡು ಕೆಸರಿನಿಂದ ಕೂಡಿದೆ. ಇದರಿಂದ ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದರು.
ರಾ.ಹೆ. ಕುಂಜಿಬೆಟ್ಟು ರಸ್ತೆಯಲ್ಲಿ ಇಂಟರ್ ಲಾಕ್ ಕಾಮಗಾರಿ ಒಂದು ತಿಂಗಳ ಒಳಗಾಗಿ ಮುಗಿಸುವ ಭರವಸೆ ಇತ್ತಾದರೂ ಇನ್ನೂ ಕೆಲಸ ನಡೆದಿಲ್ಲ ಎಂದು ಗಿರೀಶ್ ಅಂಚನ್ ಹೇಳಿದರು. ನಡುವೆ ಮಳೆ ಬಂದಿದ್ದರಿಂದ ಕೆಲಸ ನಿರ್ವಹಿಸಲು ಸಮಸ್ಯೆಯಾಗಿತ್ತು ಎಂದು ವಾರಾಹಿ ಎಇಇ ಅರಕೇಶ್ ಗೌಡ, ಎಂಜಿನಿಯರ್ ರಾಜಶೇಖರ್ ಪ್ರತಿಕ್ರಿಯಿಸಿದರು.
ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ, ಸದಸ್ಯರಾದ ಹರೀಶ್ ಶೆಟ್ಟಿ, ಜಯಂತಿ ಪೂಜಾರಿ, ವಿಜಯ ಲಕ್ಷ್ಮೀ, ಶ್ರೀಶ ಕೊಡವೂರು, ಗಿರಿಧರ ಆಚಾರ್ಯ, ಕೃಷ್ಣರಾವ್ ಕೊಡಂಚ, ಕಲ್ಪನಾ ಸುಧಾಮ, ಸಂತೋಷ್ ಕುಮಾರ್, ಸವಿತಾ ಹರೀಶ್ ರಾಮ್, ಎಡ್ಲಿನ್ ಕರ್ಕಡಾ, ಚಂದ್ರಶೇಖರ್ ಅವರು ತಮ್ಮ ವ್ಯಾಪ್ತಿಯಲ್ಲಿ ವಾರಾಹಿ ಸಂಬಂಧಪಟ್ಟ ಕಾಮಗಾರಿಯನ್ನು ವ್ಯವಸ್ಥಿತವಾಗಿ ಶೀಘ್ರ ಮುಗಿಸುವಂತೆ ಆಗ್ರಹಿಸಿದರು.
ಮಳೆ ಶುರುವಾಗುವ ಮುನ್ನ ಇಂದ್ರಾಣಿ ನದಿ ದಂಡೆ ಮೇಲೆ ಬಿದ್ದಿರುವ ಹಳೇ ಮರಗಳನ್ನು ತೆರವುಗೊಳಿಸುವಂತೆ ವಿಜಯಕೊಡವೂರು ಒತ್ತಾಯಿಸಿದರು.
ಇಂದಿರಾ ಕ್ಯಾಂಟೀನ್ ಸ್ಥಳಾಂತರ
ನಗರಸಭೆ ಹೊಸ ಕಟ್ಟಡ ಕಾಮಗಾರಿ ಸಂಬಂಧಿಸಿ ಹಳೇ ತಾಲೂಕು ಕಚೇರಿ ಬಳಿ ಇರುವ ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಸಭೆಯಲ್ಲಿ ನಿರ್ಣಯಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವ ಬಗ್ಗೆ ಅಧ್ಯಕ್ಷೆ ಸುಮಿತ್ರಾ ನಾಯಕ್ ತಿಳಿಸಿದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ ಹಳೇ ಕಟ್ಟಡ ತೆರವು ಕೆಲಸಕ್ಕೆ ಟೆಂಡರ್ ಆಗಿದೆ. 60-70 ಸಾವಿರ ಚದರ ಅಡಿಯಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ನಗರಸಭೆಗೆ ಆದಾಯ ಬರುವಂತೆ ವಾಣಿಜ್ಯ ಮಳಿಗೆಯನ್ನು ಹೊಸ ಕಟ್ಟಡದಲ್ಲಿ ನಿರ್ಮಿಸಲಾಗುವುದು ಎಂದರು. ಸುಂದರ ಜೆ. ಕಲ್ಮಾಡಿ ಅವರು ಮುಂದಿನ ಯುಜಿಡಿ ಯೋಜನೆ ರೂಪಿಸುವಾಗ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆಯನ್ನು ಪೈಪ್ಲೈನ್ ಮೂಲಕ ಮಾಡಬೇಕು. ಇಂದ್ರಾಣಿ ಮೂಲಕ ನೀರನ್ನು ಬಿಡದಂತೆ ನಿರ್ಣಯ ಮಾಡಬೇಕು ಎಂದರು.
4 ತಿಂಗಳಿಂದ ಬ್ಲೀಚಿಂಗ್ ಪೌಡರ್ ಹಾಕಿಲ್ಲ
ಕಳೆದ 4-5 ತಿಂಗಳಿಂದ ಬ್ಲೀಚಿಂಗ್ ಪೌಡರ್ ಹಾಕದೆ ಶುದ್ಧೀಕರಣ ಘಟಕದ ನೀರನ್ನು ಹಾಗೇ ಬಿಡಲಾಗುತ್ತಿದೆ. ಒಂದೆಡೆ ವಿಪರೀತ ದುರ್ವಾಸನೆ, ಸೊಳ್ಳೆ ಉತ್ಪಾದನೆ ತಾಣವಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಗಂಭೀರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ವಿಜಯ ಕೊಡವೂರು ದೂರಿದರು.
ನಿಟ್ಟೂರು ನೀರು ಶುದ್ಧೀಕರಣ ಘಟಕದ ಎಸ್ಟಿಪಿ ಕಾರ್ಯನಿರ್ವಹಣೆ ಬಗ್ಗೆ ಅವರು ಪ್ರಶ್ನಿಸಿದರು. ಸುಮಿತ್ರಾ ನಾಯಕ್ ಪ್ರತಿಕ್ರಿಯಿಸಿ, ಈಗಾಗಲೇ ಯಂತ್ರೋಪಕರಣಗಳಲ್ಲಿ ಕೆಲವು ಕೆಟ್ಟಿದ್ದು, ಸಾಧ್ಯವಾದಷ್ಟು ಸಾಮರ್ಥ್ಯದೊಂದಿಗೆ ಎಸ್ಟಿಪಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಯುಜಿಡಿ ಅನುದಾನದಲ್ಲಿ ಎಸ್ಟಿಪಿಯನ್ನು ವ್ಯವಸ್ಥಿತವಾಗಿ ರೂಪಿಸಲಾಗುವುದು ಎಂದರು. ಪರಿಸರ ಎಂಜಿನಿಯರ್ ಸ್ನೇಹ ಪ್ರತಿಕ್ರಿಯಿಸಿ, ಬ್ಲೀಚಿಂಗ್ ಪೌಡರ್ ನಿರ್ವಹಣೆಗೆ ಸಂಬಂಧಿಸಿ 4 ಸಲ ಟೆಂಡರ್ ಆಹ್ವಾನಿಸಿದ್ದರೂ ಯಾರೂ ಬಂದಿರಲಿಲ್ಲ, 5ನೇ ಸಲ ಕರೆದಿದ್ದು, ಈಗ ಟೆಂಡರ್ ಆಗಿದೆ. ತತ್ಕ್ಷಣಕ್ಕೆ ಸ್ಥಳೀಯವಾಗಿ 10 ಟನ್ ಬ್ಲೀಚಿಂಗ್ ಪೌಡರ್ ಖರೀದಿಸಿ ಸಂಗ್ರಹಿಸಿಟ್ಟಿದ್ದೇವೆ ಎಂದರು.
ಅಧಿಕಾರಿಗಳ ತಪ್ಪಿನಿಂದ ಟೆಂಡರ್ ರದ್ದು
ಉದಯವಾಣಿಯಲ್ಲಿ ಮಂಗಳವಾರ ಪ್ರಕಟಗೊಂಡಿದ್ದ ‘ಹೆಬ್ರಿ-ಮಲ್ಪೆ ರಾ. ಹೆ. ವಿಸ್ತರಣೆಗೆ ಮತ್ತೆ ಸಂಕಷ್ಟ’ ವರದಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸುಂದರ್ ಜೆ. ಕಲ್ಮಾಡಿ ಅವರು ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಪ್ರಸ್ತಾವಿಸಿದರು. ಶಾಸಕ ರಘುಪತಿ ಭಟ್ ಅವರು ಪ್ರತಿಕ್ರಿಯಿಸಿ ಮಲ್ಪೆ- ಹೆಬ್ರಿ ಹೆದ್ದಾರಿ ಯೋಜನೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಲ್ಲ ಎಂಬ ಕಾರಣದಿಂದ ಟೆಂಡರ್ ರದ್ದಾಗಿದೆ. ಪೈಪೋಟಿಯಲ್ಲಿ ಇಬ್ಬರು ಇದ್ದರೂ ಬೆಂಗಳೂರಿನ ಕಚೇರಿಯಲ್ಲಿ ಅದನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ದಿಲ್ಲಿಗೆ ಹೋಗಿ ಕೇಂದ್ರ ಸಚಿವರ ಜತೆಗೆ ಚರ್ಚಿಸಿದ್ದು, ಪುನಃ ಟೆಂಡರ್ಗೆ ಅವಕಾಶ ನೀಡಿದ್ದಾರೆ. ಅಧಿಕಾರಿಗಳ ತಪ್ಪು ನಿರ್ಧಾರದಿಂದ ಜನಪ್ರತಿನಿಧಿಗಳು ಸಾರ್ವಜನಿಕರ ಟೀಕೆಗೆ ಒಳಗಾಗುತ್ತಿದ್ದಾರೆ ಎಂದರು.