Advertisement
ಕೇವಲ ಕರುನಾಡ ಸಂಸ್ಕೃತಿ, ಕಲೆಯನ್ನಷ್ಟೇ ಅಲ್ಲದೆ ಜರ್ಮನಿಯಲ್ಲೂ ಕನ್ನಡಿಗರ ಮಕ್ಕಳು ಕನ್ನಡ ಭಾಷೆಯಿಂದ ವಂಚಿತರಾಗಬಾರದೆಂಬ ಮಹದುದ್ದೇಶದಿಂದ 2020 ಆಗಸ್ಟ್ 15ರಂದು ‘ಕನ್ನಡ ಕಲಿ’ ಎಂಬ ಅಕ್ಷರ ಬೀಜವನ್ನು ಬಿತ್ತಲಾಯಿತು. ಅಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣರವರು ಇದನ್ನು ಉದ್ಘಾಟಿಸಿದ್ದರು. ಅಂದು 6 ಜನ ಶಿಕ್ಷಕರು ಹಾಗೂ 30 ವಿದ್ಯಾರ್ಥಿ/ನಿಯರಿಂದ ಆನ್‌ಲೈನ್‌ನಲ್ಲಿ ಪ್ರತೀ ವಾರಾಂತ್ಯದಲ್ಲಿ ಕನ್ನಡ ಕಲಿಕೆಯು ಪ್ರಾರಂಭವಾಯಿತು.
Related Articles
Advertisement
ಇತ್ತೀಚೆಗೆ ಆರ್.ಎಂ.ಕೆ.ಎಸ್. ಕನ್ನಡ ಕಲಿಯ ವತಿಯಿಂದ ಮಕ್ಕಳು, ಶಿಕ್ಷಕರೂ ಹಾಗೂ ಪೋಷಕರು ಮುಖಾಮುಖೀ ಭೇಟಿಯಾಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಹಾಗೂ ಕನ್ನಡ ಕಲಿಯಲ್ಲಿ ಹೊಸತನ ಮತ್ತು ಉನ್ನತಿಗಾಗಿ ಮತ್ತಷ್ಟು ಸಲಹೆಯನ್ನೂ ಪೋಷಕರಿಂದ ಸ್ವೀಕರಿಸುವ ಮತ್ತು ಚರ್ಚೆಯನ್ನು ಏರ್ಪಡಿಸಲಾಗಿತ್ತು.
ಮಕ್ಕಳಿಂದಲೇ ಕನ್ನಡದ ಬಾವುಟ ಹಾಗೂ ಕನ್ನಡ ಕಲಿಯ ಬ್ಯಾಡ್ಜ್ ಅನ್ನು ಮಾಡಿಸಲಾಯಿತು. ಇದಕ್ಕಾಗಿ ತೇಜಸ್ವಿನಿ ಹಾಗೂ ಸುಮತಿಯವರು ಸ್ವಯಂ ಸೇವಕರಾಗಿ ಕನ್ನಡ ಕಲಿಗಾಗಿ ತಮ್ಮ ಸಹಾಯಹಸ್ತ ನೀಡಿದ್ದರು. ಮಕ್ಕಳಿಗಾಗಿ ಹಲವು ಆಟಗಳು, ಕನ್ನಡದ ನಾಲಿಗೆ ನುಲಿಗಳು, ವರ್ಣಮಾಲೆ ಹಾಗೂ ಕನ್ನಡ ಪದಬಳಕೆಗಳ ಆಟಗಳನ್ನು ಆಡಿಸಿದ್ದು ಕಲಿಕೆಯಲ್ಲಿನ ಅವರ ಪ್ರೀತಿಯನ್ನು ಹೆಚ್ಚಿಸಿತು. ಒಟ್ಟು 60 ಜನರನ್ನು ಒಳಗೊಂಡ ಕನ್ನಡ ಕಲಿಯ ಕಾರ್ಯಾಗಾರ ಮತ್ತಷ್ಟು ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರೇರೇಪಿಸಿದೆ.
ಅಂತಹ ಕಾರ್ಯಕ್ರಮವನ್ನು ನಡೆಸಲು ಯೋಜನೆ ಮತ್ತು ಪ್ರೇರಣೆ ನೀಡಿ ಕನ್ನಡ ಕಲಿ ಶಿಕ್ಷಕರ ಬೆನ್ನೆಲುಬಾಗಿ ನಿಂತ ಆರ್.ಎಂ.ಕೆ.ಎಸ್.ನ ಪ್ರಸ್ತುತ ಪದಾಧಿಕಾರಿಗಳಾದ ವೇದ ಕುಮಾರಸ್ವಾಮಿ, ರಿಯಾಜ್ ಶಿರಸಂಗಿ, ಅಪೂರ್ವ ಬೆಳೆಯೂರು, ಲೋಕನಾಥ್ ರಾವ್, ವಿಶ್ವನಾಥ ಬಾಳೆಕಾಯಿ ಹಾಗೂ ಪ್ರದೀಪ್ ಶೆಟ್ಟಿ , ಅಕ್ಷಯ್ ಅವರ ನಿರಂತರ ಪ್ರೋತ್ಸಾಹ ಕನ್ನಡ ಕಲಿಯ ಅಭಿವೃದ್ಧಿಗೆ ಪೂರಕ. ಆರ್.ಎಂ.ಕೆ.ಎಸ್. ವತಿಯಿಂದ ನೆರೆದ ಎಲ್ಲ ಮಕ್ಕಳಿಗೂ ಕನ್ನಡದ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ಪೋಷಕರ ಮೆಚ್ಚುಗೆಯೊಂದಿಗೆ ಮುಕ್ತಾಯವಾಯಿತು. ವಿದ್ಯಾರ್ಜನೆ ಸ್ಪರ್ಧೆಯಲ್ಲಿ ಅದು ಹಸಿವು ಇದಕ್ಕಾಗಿ ನೀಡಬೇಕಾದ್ದು ನೆರವು. ನೆರವಾಗಿರುವ ಇಂತಹ ಎಲ್ಲ ಕನ್ನಡ ಮನಸ್ಸುಗಳಿಗೊಂದು ಸಲಾಂ.
*ಶೋಭಾ ಚೌಹ್ಹಾಣ್, ಫ್ರಾಂಕ್‌ಫರ್ಟ್