Advertisement

ಮಳೆ ಸೂರು ಇಲ್ಲದಂತೆ ಮಾಡಿತು!

11:36 AM Sep 01, 2017 | Team Udayavani |

ವಾಡಿ: ಹೆಣ್ಣುಮಕ್ಕಳು ಹಸೆಮಣೆ ಏರಿ ಗಂಡನ ಮನೆ ಸೇರಿಕೊಂಡರೆ, ಗಂಡು ಮಗ ಮಡದಿಯೊಂದಿಗೆ ಮಹಾನಗರ ಸೇರಿಕೊಂಡಿದ್ದಾನೆ. ಕೈ ಹಿಡಿದ ಗಂಡ ಪರಲೋಕ ಸೇರಿದ ಮೇಲೆ ನಿರಾಶ್ರಿತರಾದ
ತಾಯಿ ಮತ್ತು ಮಗಳು ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

Advertisement

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪುರಸಭೆ ವ್ಯಾಪ್ತಿಯ ವಿಜಯನಗರ ಬಡಾವಣೆಯ ಆಶ್ರಯ ಕಾಲೋನಿಯಲ್ಲಿ ಕ್ಯಾನ್ಸರ್‌ ಪೀಡಿತ ಮಗಳೊಂದಿಗೆ ವಾಸವಿರುವ ದುರ್ಗಮ್ಮ ಬಸವರಾಜ ಸೈದಾಪುರ
ಎನ್ನುವ ಬಡ ಮಹಿಳೆ, ಕಳೆದ ಹಲವು ವರ್ಷಗಳಿಂದ ಸರಕಾರದ ಅನ್ನಭಾಗ್ಯ ಹಾಗೂ ಮಾಸಿಕ ಪಿಂಚಣಿ ಆಸರೆಯಲ್ಲಿ ಬದುಕು ದೂಡುತ್ತಿದ್ದಾಳೆ.

ಆ.29 ರಂದು ಸುರಿದ ಧಾರಾಕಾರ ಮಳೆಗೆ ಮನೆ ಗೋಡೆಗಳು ಉರುಳಿ ಬಿದ್ದಿವೆ. ಈಗ ಸೂರಿನ ಆಸರೆಯೂ ಇಲ್ಲವಾಗಿ, ತಾಯಿ ಮತ್ತು ಮಗಳು ಪರಸ್ಪರ ಮುಖ ನೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇವರ ಬದುಕು ಹತ್ತಿರದಿಂದ ನೋಡಲು ಹೋದರೆ ಎಂತವರ ಮನಸ್ಸು ಕರಗದೇ
ಇರಲಾರದು.

ಅಸ್ತಮಾ ಪೀಡಿತ ದುರ್ಗಮ್ಮಳಿಗೆ ಒಟ್ಟು ಐವರು ಮಕ್ಕಳು. ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂವರಿಗೆ ವಿವಾಹವಾಗಿದ್ದು, ತವರು ಮನೆಯಲ್ಲಿದ್ದಾರೆ. ಇದ್ದ ಒಬ್ಬ ಮಗ ಆಸರೆಯಾಗದೆ ಮಡದಿಯೊಂದಿಗೆ ಮನೆ
ತೊರೆದು ನಗರ ಸೇರಿಕೊಂಡಿದ್ದಾನೆ. ಬೆನ್ನು ಮೂಳೆಯ ಕ್ಯಾನ್ಸರ್‌ ನಿಂದ ಬಳಲಿ ಹಾಸಿಗೆ ಹಿಡಿದಿರುವ 21ರ ರೇಣುಕಾ ದುರ್ಗಮ್ಮಳ ಕೊನೆಯ ಮಗಳು. ಈಕೆಯೇ ದುಡಿದು ಮೂವರು ಅಕ್ಕಂದಿರ ಮದುವೆ ಮಾಡಿದ್ದಾಳೆ. ಅನಾರೋಗ್ಯದಲ್ಲಿದ್ದ ತಾಯಿಯನ್ನು ಸಾಕಲು ಪಣ ತೊಟ್ಟಿದ್ದ ರೇಣುಕಾ, ಈಗ ತಾನೇ
ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದಾಳೆ. ಬಡಾವಣೆಯ ಯುವ ಮುಖಂಡ ಮಲ್ಲಿಕಾರ್ಜುನ ಸೈದಾಪುರ, ಬಸವರಾಜ ಕೂಡಲೂರ ಹಾಗೂ ಇನ್ನಿತರರು ಇವರ ಕಷ್ಟಕ್ಕೆ ಮರುಗಿ ಪಡಿತರ ಚೀಟಿ ಮಾಡಿಸಿಕೊಟ್ಟು ಅನ್ನಭಾಗ್ಯದ ಗಂಜಿ ದಕ್ಕುವಂತೆ ಮಾಡಿದ್ದಾರೆ. ವಿಧವಾ ವೇತನ ಜಾರಿಗೊಳಿಸಿ ಬದುಕಿಗೆ ಆಸರೆ ಒದಗಿಸಿದ್ದಾರೆ.

ಸೂರಿನ ಸೌಲಭ್ಯ ಒದಗಿಸಬೇಕಾದ ಪುರಸಭೆ ಅಧಿಕಾರಿಗಳು, ರಾಜೀವಗಾಂಧಿ ವಸತಿ ಯೋಜನೆಯಡಿ ಸಲ್ಲಿಸಲಾಗಿದ್ದ ಇವರ ಅರ್ಜಿಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಇದ್ದ ಎರಡು ಕೋಣೆಗಳಲ್ಲಿ ಒಂದು ಕೋಣೆಯ ಎರಡು ಗೋಡೆಗಳು ಕುಸಿದು ಬಿದ್ದಿವೆ. ಇರುವ ಒಂದು ಕೋಣೆಯೂ
ಶಿಥಿಲಗೊಂಡಿದೆ. ಕ್ಷೇತ್ರದ ಶಾಸಕರು, ತಹಶೀಲ್ದಾರರು ಇವರಿಗೊಂದು ಸೂರು ಕಲ್ಪಿಸಿಕೊಡಬೇಕು ಎಂದು ವಿಜಯನಗರ ಬಡಾವಣೆ ನಿವಾಸಿಗಳು ಕಳಕಳಿಯ ಮನವಿ ಮಾಡಿದ್ದಾರೆ.ಮನೆ ಗೋಡೆಗಳು ಕುಸಿದು ಬಿದ್ದಿವೆ. 

Advertisement

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next