Advertisement

ಕಾಡಿನ ಕಳೆ ಹೆಚ್ಚಿಸಿದ ವರ್ಷಧಾರೆ

09:44 AM Aug 03, 2019 | Suhan S |

ಧಾರವಾಡ: ಎದೆ ಎತ್ತರಕ್ಕೆ ಗೆದ್ದಲು ಕಟ್ಟಿದ ಹುತ್ತಗಳು ಕಾಣದಂತೆ ಬೆಳೆದ ಹುಲ್ಲು.., ಮೊನ್ನೆ ಮೊನ್ನೆವರೆಗೂ ಬಿಸಿಲಿಗೆ ಬಿರಿದು ಬಾಯ್ಬಿಟ್ಟಿದ್ದ ಕಾಡಿನ ನೆಲವೆಲ್ಲಾ ಈಗ ಬೆಣ್ಣೆಯಂತೆ ಮೃದು.., ಮತ್ತೆ ಸೊಕ್ಕಿನಿಂದ ಎದೆ ಸೆಟೆಸಿ ನಿಂತ ತೇಗ, ಬಿಳಿಮತ್ತಿಯ ಗಿಡಮರಗಳು…, ಸುವ್ವಾಲೆ ಹಾಡುತ್ತಿರುವ ಸೊಲ್ಲು ಅಡಗಿಸಿಕೊಂಡಿದ್ದ ಕಾಡಿನ ಜೀವ ಸಂಕುಲ.., ಒಟ್ಟಿನಲ್ಲಿ ಜಿಲ್ಲೆಯ ಕಾಡಿನಲ್ಲೀಗ ಮತ್ತೆ ವೈಭವ ಕಳೆಕಟ್ಟಿದ್ದು, ಕಾಡಿನ ತುಂಬಾ ಜಲತರಂಗಿಣಿಯರು ಲಲನೆ ಮಾಡುತ್ತಿದ್ದಾರೆ. ಬಿರುಬಿಸಿಲಿಗೆ ಬಿಗಿದು ಹೋಗಿದ್ದ ಜಿಲ್ಲೆಯ 37 ಸಾವಿರ ಹೆಕ್ಟೇರ್‌ ಕಾಡಿನಲ್ಲಿ ಕಳೆದ ಒಂದೇ ತಿಂಗಳಿನಲ್ಲಿ ಮತ್ತೆ ಕಾಡಿನ ವೈಭವ ಕಳೆಗಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಎರಡು ವರ್ಷ ಅದೇ ಮಳೆ ನೀರಿನ ಅಭಾವ ಮುಂದುವರಿದಿದ್ದರೆ, ಜಿಲ್ಲೆಯಲ್ಲಿನ ಕಾಡಿನ ಪ್ರಮಾಣ ಶೇ.1ರಷ್ಟು ಕುಸಿತ ಕಾಣುತ್ತಿತ್ತಂತೆ. ಸದ್ಯಕ್ಕೆ ದೇವರು ದೊಡ್ಡೋನು ಕೊನೆಗೂ ಕಣ್ಣು ತೆರೆದ, ಜಿಲ್ಲೆಯ ಕಾಡಿನ ಪ್ರಾಣಿ-ಪಕ್ಷಿಗಳು, ಸಸ್ಯ ಸಂಕುಲಕ್ಕೆಲ್ಲ ಇನ್ನೆರಡು ವರ್ಷಕ್ಕೆ ಆಗುವಷ್ಟು ತಂಪಾದ ಅಂತರ್ಜಲ ಸಂಗ್ರಹವಾಗುತ್ತಿದೆ ಎನ್ನುವ ಖುಷಿಯಲ್ಲಿದೆ ಅರಣ್ಯ ಇಲಾಖೆ. ನರೇಗಾ ಯೋಜನೆಯಡಿ ಕಳೆದ ವರ್ಷ 13 ಸಾವಿರ ಮಾನವ ದಿನಗಳನ್ನು ಪರಿಗಣಿಸಿಕೊಂಡು ಅರಣ್ಯ ಮಧ್ಯದಲ್ಲಿ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿತ್ತು. ಕೆಲವು ಕಡೆಗಳಲ್ಲಿ ಚೆಕ್‌ಡ್ಯಾಂಗಳು, ಸಣ್ಣ ಬಾಂದಾರುಗಳು, ತಿರುವಲು ಒಡ್ಡುಗಳು, ಗುಡ್ಡದ ನೆತ್ತಿಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಆ ಎಲ್ಲ ತೆಗ್ಗುಗಳಲ್ಲಿ ಮಳೆನೀರು ಭರ್ತಿಯಾಗಿದ್ದು ಅರಣ್ಯ ಇಲಾಖೆ ಪಟ್ಟ ಶ್ರಮಕ್ಕೆ ಫಲ ಸಿಕ್ಕಂತಾಗಿದೆ. ಜಿಲ್ಲೆಯಲ್ಲಿ ಕಲಘಟಗಿ ಮತ್ತು ಧಾರವಾಡ ತಾಲೂಕಿನಲ್ಲಿ ಮಾತ್ರ ಹೆಚ್ಚು ಕಾಡಿದೆ. ಇನ್ನುಳಿದ ಕಡೆಗಳಲ್ಲಿ ಸಾಮಾಜಿಕ ಅರಣ್ಯವಿದೆ. ಈ ಎರಡು ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ 230 ಮಿಮೀ ಮಳೆ ಸುರಿದಿದ್ದು, ಕಾಡಿನ ಮಧ್ಯದ ಜಲಕೋಡಿಗಳು ಜಿಗಿಯುತ್ತ ಹರಿಯುತ್ತಿವೆ. ಕಲಕೇರಿ ಅರಣ್ಯ ವಲಯದಲ್ಲಿನ ಸೋಮಲಿಂಗನ ಜವುಳು ಪ್ರದೇಶದಲ್ಲಿ ಉತ್ತಮ ಮಳೆ ದಾಖಲಾಗಿದೆ. ಬಣದೂರು, ಬಮ್ಮಿಗಟ್ಟಿ, ದೇವಿಕೊಪ್ಪ ಅರಣ್ಯ ವಲಯದಲ್ಲಿಯೂ ಮಳೆ ತನ್ನ ಕೈ ಚಳಕ ತೋರಿಸಿದ್ದು ಕಾಡಿನ ಮಧ್ಯದ ಗುಂಡಿಗಳಲ್ಲಿ ನೀರು ಶೇಖರಣೆಯಾಗಿದೆ.

ಎಲ್ಲೆಲ್ಲಿ ನೀರು?: ಜಿಲ್ಲೆಯ ಕಾಡಿನ ಮಧ್ಯದ ದೊಡ್ಡ ಕೆರೆಗಳಲ್ಲಿ ಒಂದಾದ ಪ್ರಭುನಗರ ಹೊನ್ನಾಪುರ ಕೆರೆಗೆ ಕಳೆದ ಒಂದು ವಾರದಲ್ಲಿ ಉತ್ತಮ ನೀರು ಹರಿದು ಬಂದಿದೆ. ಇನ್ನುಳಿದಂತೆ ಕಾಡಿನ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಜೀವಾಮೃತ ನೀಡುವ ಬೈಸವಾಡ ಕೆರೆ, ದಾಸ್ತಿಕೊಪ್ಪ, ಶಿಗಿಗಟ್ಟಿ, ಆಸಗಟ್ಟಿಕೆರೆ, ಕೂಡಲಗಿಕೆರೆ, ಮುಕ್ಕಲ್ಲುಕೆರೆ, ತಂಬೂರು ಕೆರೆ, ಹೊಲ್ತಿಕೋಟಿ ಕೆರೆ, ಮುರಕಟ್ಟಿ ಕೆರೆ, ದೇವಗಿರಿ ಕೆರೆ, ಕಲಕೇರಿ, ಹುಣಸಿಕುಮರಿ ಕೆರೆ, ಕೊಕ್ಕೆರೆವಾಡ ಕೆರೆ, ಬಣದೂರು ಕೆರೆ, ಹುಲಕೊಪ್ಪ ಕೆರೆ, ಹಸರಂಬಿ ಕೆರೆ, ಅಂಬ್ಲಿಕೊಪ್ಪ ಕೆರೆ, ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ದೊಡ್ಡ ಕೆರೆ, ವೀರಾಪುರ ಕೆರೆ, ರಾಮಾಪುರ ಕೆರೆ, ಲಿಂಗನಕೊಪ್ಪ ಕೆರೆ, ಕಂಬಾರಗಣವಿ ಕೆರೆಯಲ್ಲಿ ಉತ್ತಮ ನೀರು ಸಂಗ್ರಹವಾಗಿದೆ. ಇವು ಏಪ್ರಿಲ್-ಮೇ ತಿಂಗಳಿನ ವರೆಗೂ ಕಾಡು ಪ್ರಾಣಿಗಳಿಗೆ ನೀರು ಪೂರೈಸುವ ಸಾಮರ್ಥ್ಯ ಹೊಂದಿವೆ.

ಪಶು-ಪಕ್ಷಿಗಳ ಒಲವಿನ ತಾಣ: ಕಲಘಟಗಿಯ ಬೈಸವಾಡ ಅರಣ್ಯ, ಧಾರವಾಡ ತಾಲೂಕಿನ ಹುಣಸಿಕುಮರಿ, ಕೊಕ್ಕರೆವಾಡ, ಬಣದೂರು, ಅರವಟಗಿ, ಡೋರಿ, ಬೆಣಚಿ, ಲಿಂಗನಕೊಪ್ಪ, ದೇವಿಕೊಪ್ಪ, ತಂಬೂರು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ 440ಕ್ಕೂ ಅಧಿಕ ಜಿಂಕೆಗಳು, 2 ಸಾವಿರದಷ್ಟು ನರಿಗಳು, 3400 ಕಾಡುಹಂದಿಗಳು, 450ಕ್ಕೂ ಅಧಿಕ ಕಡವೆ, 600 ಕಾಡುಬೆಕ್ಕು, 15 ಕರಡಿಗಳು, 23 ಚಿರತೆ, 9 ಕರಿಚಿರತೆಗಳು, (ದಾಂಡೇಲಿ ಅರಣ್ಯಕ್ಕೆ ಹೊಂದಿಕೊಂಡಂತೆ)ಇನ್ನು ಸರಿಸೃಪಗಳ ಪೈಕಿ 2500ಕ್ಕೂ ಅಧಿಕ ಕರಿನಾಗರ ಮತ್ತು ಸಾಮಾನ್ಯ ನಾಗರ ಹಾವುಗಳು ಸದ್ಯಕ್ಕೆ ಜಿಲ್ಲೆಯ ಅರಣ್ಯದಲ್ಲಿವೆ ಎಂದು ಅಂದಾಜು ಮಾಡಲಾಗಿದೆ. ಇದನ್ನು ಹೊರತುಪಡಿಸಿ ಅಪರೂಪದ ಪಕ್ಷಿ ಸಂಕುಲಗಳು ತಮ್ಮ ಜೀವ ವೈವಿಧ್ಯ ಕಾಯ್ದುಕೊಳ್ಳಲು ಬರಗಾಲದಿಂದಾಗಿ ನೀರಿನ ಕೊರತೆ ಎದುರಾಗಿತ್ತು. ಇದೀಗ ಉತ್ತಮ ಮಳೆಯಿಂದ ಜಿಲ್ಲೆಯ ಕಾಡು ಮೆರಗು ಪಡೆಯುತ್ತಿದೆ.

ನಿಟ್ಟುಸಿರುಬಿಟ್ಟ ಅರಣ್ಯ ಇಲಾಖೆ: ಸತತ ಬರಗಾಲದಿಂದ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಅದಕ್ಕಾಗಿ ಅರಣ್ಯ ಮಧ್ಯದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಅರಣ್ಯ ಇಲಾಖೆ ಸಣ್ಣ ಸಣ್ಣ ಕೃತಕ ನೀರಿನ ಹೊಂಡಗಳನ್ನು ನಿರ್ಮಿಸಿ ಅಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿತ್ತು. ಆದರೂ ಸಾವಿರಾರು ಪ್ರಾಣಿಗಳು ನೀರಿನ ದಾಹಕ್ಕಾಗಿ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಹೊಲಗಳಿಗೆ ಲಗ್ಗೆ ಹಾಕುತ್ತಿದ್ದವು. ಈ ಸಂದರ್ಭದಲ್ಲಿ ಅವು ವಿದ್ಯುತ್‌ ತಗುಲಿ, ಬೇಟೆಗೆ ಸಿಲುಕಿ ಸತ್ತಿದ್ದ ಪ್ರಕರಣಗಳು ನಡೆದಿದ್ದವು. ಆದರೆ ಈ ವರ್ಷ ಅರಣ್ಯದಲ್ಲಿನ ಎಲ್ಲ ಕೆರೆಗಳು ತುಂಬಿಕೊಂಡಿದ್ದರಿಂದ ಬರುವ ಬೇಸಿಗೆಗೆ ಕಾಡು ಪ್ರಾಣಿ- ಪಕ್ಷಿಗಳಿಗೆ ಕುಡಿಯುವ ನೀರು ಸಮೃದ್ಧವಾಗಿ ಲಭಿಸುವಂತಾಗಿದೆ.
ಕಳೆದ ನಾಲ್ಕು ವರ್ಷ ಕಾಡಿನ ಪ್ರಾಣಿ-ಪಕ್ಷಿಗಳು ಮತ್ತು ನೆಟ್ಟ ಸಸಿಗಳನ್ನು ಉಳಿಸಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಾಡಿನ ಗಿಡ-ಮರಗಳಿಗೆ ಮತ್ತು ಪಶು-ಪಕ್ಷಿಗಳಿಗೆ ಉತ್ತಮ ನೀರು ಲಭ್ಯವಾಗಿದೆ. ಇದರಿಂದ ಸಸ್ಯ ಸಂಕುಲ ಇನ್ನಷ್ಟು ದಟ್ಟವಾಗಿ ಬೆಳೆದು ನಿಲ್ಲಲು ಅನುಕೂಲವಾಗುತ್ತದೆ.• ಮಹೇಶಕುಮಾರ್‌,ಡಿಎಫ್‌ಒ
Advertisement

•ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next