ಯಾದಗಿರಿ : ಜಿಲ್ಲೆಯಲ್ಲಿ ಏಕಾಏಕಿ (ಸಂಜೆ 4:15ರ ಸುಮಾರಿಗೆ) ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ಸುಮಾರು ಅರ್ಧಗಂಟೆ ಕಾಲ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ.
ಜಿಲ್ಲಾ ಕೇಂದ್ರದ ಸುತ್ತಮುತ್ತ ಸುರಿದಿರುವ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗಾಳಿ ಮಳೆಯ ರಭಸಕ್ಕೆ ನಗರಸಭೆಯ ಸಭಾಂಗಣದ ಪತ್ರಾಸ್ ಗಳ ಮೇಲ್ಚಾಚಣೆಯೇ ಹಾರಿಹೋಗಿದ್ದು ಸಭಾಂಗಣದಲ್ಲಿದ್ದ ದಾಖಲೆಗಳು ನೀರಿನಲ್ಲಿ ನೆನೆದು ಹೋಗಿವೆ. ಅಲ್ಲದೆ ಕುರ್ಚಿ ಟೇಬಲ್ ಗಳಿಗೆ ಹಾನಿಯಾಗಿದೆ.
ಚಿತ್ತಾಪುರ ರಸ್ತೆಯ ಯೂನಿಯನ್ ಬ್ಯಾಂಕ್ ಹತ್ತಿರ ಬೃಹತ್ ಗಾತ್ರದ ನಾಮಫಲಕ ಹಾರಿ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿರುವುದರಿಂದ ಕೆಲ ವಾಹನಗಳು ಜಖಂಗೊಂಡಿವೆ.
ಜಿಲ್ಲಾ ಕೇಂದ್ರದ ಸುತ್ತಮುತ್ತ ಸುರಿದಿರುವ ಮಳೆಯಿಂದ ಸಣ್ಣ ಪುಟ್ಟ ಹಾನಿಯಾಗಿದ್ದು, ಶಹಾಪುರದಲ್ಲಿ ಅಲ್ಪ ಮಳೆ ಸುರಿದಿದ್ದು, ಖಾನಾಪುರದಿಂದ ಯಾದಗಿರಿ ಮಾರ್ಗದ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಯಲ್ಲಿ ಮುರಿದು ಬಿದ್ದಿದ್ದು ಸಂಚಾರಕ್ಕೆ ಅಡೆತಡೆಯಾಗಿದೆ.