Advertisement

ನಗರದಲ್ಲಿ ಅಬ್ಬರಿಸಿದ ವರ್ಷಧಾರೆ

06:07 AM Jun 26, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕೆಂಗೇರಿಯ ಬಿಡಿಎ ಕಾಂಪ್ಲೆಕ್ಸ್‌ ಮುಂಭಾಗದ ವೃಷಭಾವತಿ ನದಿ ಹರಿದು ಹೋಗುವ ಭಾಗದಲ್ಲಿನ ರಾಜಕಾಲುವೆ ಕುಸಿದು,  ಜನಜೀವನ ಅಸ್ತವ್ಯಸ್ತಗೊಂಡಿತು. ಕೆಂಗೇರಿ ಬಳಿ ವೃಷಭಾವತಿ ರಾಜಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು ಪರ ದಾಡುವಂತಾಯಿತು.

Advertisement

ವ್ಯಾಲಿಯಲ್ಲಿ ನೀರಿನ  ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಂಗೇರಿ ಸಮೀಪ ಕಾಲುವೆಗೆ ಕಟ್ಟಲಾಗಿದ್ದ ತಡೆಗೋಡೆ ಕುಸಿದು ಆತಂಕ ಸೃಷ್ಟಿಯಾಗಿತ್ತು. ರಾಜಕಾಲುವೆ ತುಂಬಿತುಳುಕಿದ್ದರಿಂದ ನೀರು ರಸ್ತೆಗೆ ನುಗ್ಗಿತು. ಎರಡರಿಂದ ಮೂರು ಅಡಿ ನೀರು  ನಿಂತು ಈ ಮಾರ್ಗವಾಗಿ ಹೋಗುವ ಸವಾರರು ಆತಂಕದಲ್ಲೇ ಹೋಗುವ ವಾತಾವರಣ ನಿರ್ಮಾಣ ವಾಗಿತ್ತು. ಇದರಿಂದ ಸುತ್ತಲಿನ ಪ್ರದೇಶಗಳಲ್ಲೂ ಸಂಚಾರ ದಟ್ಟಣೆಗೆ ಸಮಸ್ಯೆಯಾಯಿತು.

ಬೆಂಗಳೂರು-  ಮೈಸೂರು ರಸ್ತೆಯಲ್ಲಿ  ಗಂಟೆಗಟ್ಟಲೆ ವಾಹನಗಳ ಸಂಚಾರ ಸಮಸ್ಯೆ ಎದುರಾಯಿತು. ಮಳೆಯಿಂದ ಅನಾಹುತವಾಗಿರುವ ವೃಷಭಾವತಿ ರಾಜಕಾಲುವೆ ಭಾಗಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ರಾಜರಾಜೇಶ್ವರಿ ನಗರದ ವಿಶೇಷ ಆಯುಕ್ತ  ಅನ್ಬುಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಮಳೆಯಿಂದ ರಾಜ ಕಾಲುವೆ ಕುಸಿದಿದ್ದು, ಅದೃಷ್ಟವಶಾತ್‌ ಯಾವುದೇ ಸಾವು- ನೋವು ಸಂಭವಿಸಿಲ್ಲ.

ಮೈಸೂರು ರಸ್ತೆ ಹಾಗೂ ಕೆಂಗೇರಿ ಭಾಗದಲ್ಲಿ ಶುಕ್ರವಾರ ಭೇಟಿ  ನೀಡಿ ಪರಿಶೀಲಿಸಲಾಗುವುದು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಸದ್ಯಕ್ಕೆ ತಾತ್ಕಾಲಿಕವಾಗಿ ಬ್ಯಾರಿಕೇಡ್‌ ಹಾಕಲಾಗಿದೆ ಎಂದು ಹೇಳಿದರು. ಇನ್ನು ಜಯನಗರದ ಏಳನೇ ಬ್ಲಾಕ್‌, ಚನ್ನಸಂದ್ರ ಹಾಗೂ ವಿದ್ಯಾಪೀಠದ ಬಳಿ  ತಲಾ ಒಂದು ಮರ ಧರೆಗುರುಳಿವೆ. ಇದರ ಹೊರತು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next