Advertisement

ಬಿಸಿಲ ಬೇಗೆಯ ನಗರಕ್ಕೆ ತಂಪೆರೆದ ಮಳೆ

01:36 PM Apr 07, 2020 | Suhan S |

ಬೆಂಗಳೂರು: ಬಿಸಿಲಿನ ಧಗೆಗೆ ಕಾದಹೆಂಚಾಗಿದ್ದ ನಗರಕ್ಕೆ ಸೋಮವಾರದ ಸಂಜೆ ಮಳೆ ತಂಪೆರೆಯಿತು. ಸುಮಾರು ಒಂದು ವಾರದಿಂದ ನಗರದ ತಾಪಮಾನ ಗರಿಷ್ಠ 32ರಿಂದ 34 ಡಿಗ್ರಿ ಆಸುಪಾಸು ಇತ್ತು. ಅತ್ತ ಕೋವಿಡ್ 19 ವೈರಸ್‌ ಕಾಟಕ್ಕೆ ಜನ ಎಸಿ ಅಥವಾ ಕೂಲರ್‌ ಹಾಕುವಂತಿಲ್ಲ. ಬಿಸಿಲಿಗೆ ಮೇಲ್ಛಾವಣಿ ಸುಡುವುದರಿಂದ ಫ್ಯಾನ್‌ ಗಾಳಿ ಕೂಡ ಬಿಸಿಯಾಗಿರುತ್ತಿತ್ತು. ಇನ್ನು ಮನೆ ಬಿಟ್ಟು ಹೊರಗೂ ಬರುವಂತಿಲ್ಲ. ಈ ಮಧ್ಯೆ ಸುರಿದ ಧಾರಾಕಾರ ಮಳೆಗೆ ಜನ ಮೈಯೊಡ್ಡಿದರು.

Advertisement

ನಗರದ ಹೊರವಲಯದಲ್ಲಿ ಮಳೆ ತುಸು ಜೋರಾಗಿತ್ತು. ಹೃದಯಭಾಗದಲ್ಲಿ ಗುಡುಗಿನ ಅಬ್ಬರ ಹೆಚ್ಚಿತ್ತು. ಸುಮಾರು ಒಂದು ತಾಸು ಸುರಿದ ಮಳೆಗೆ ಮೋರಿಗಳು, ಅಂಡರ್‌ಪಾಸ್‌ಗಳು, ರಸ್ತೆಗಳು ತುಂಬಿಹರಿದವು. ಜನರ ಸಂಚಾರ ಇಲ್ಲದ್ದರಿಂದ ಯಾವುದೇ ಸಂಚಾರದಟ್ಟಣೆ ಇರಲಿಲ್ಲ. ಕೆಜಿ ಹಳ್ಳಿ, ಹೆಮ್ಮಿಗೆಪುರ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ ಮತ್ತಿತರ ಕಡೆಗಳಲ್ಲಿ ಗರಿಷ್ಠ 53ರಿಂದ ಕನಿಷ್ಠ 20 ಮಿ.ಮೀ. ಮಳೆ ದಾಖಲಾಗಿದೆ. ಬಾಣಸವಾಡಿಯ 100 ಅಡಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆ? :  ಕೆ.ಜಿ.ಹಳ್ಳಿ 43 ಮಿ.ಮೀ, ಹೆಮ್ಮಿಗೆಪುರ 53, ಎಚ್‌ಎಸ್‌ಆರ್‌ ಲೇಔಟ್‌ 20, ಬೇಗೂರು 19, ಕುಮಾರಸ್ವಾಮಿ ಲೇಔಟ್‌ 9, ಆರ್‌.ಆರ್‌. ನಗರ 9.5, ಕೆಂಗೇರಿ 21, ರಾಮೋಹಳ್ಳಿ 9.5, ಕೋರಮಂಗಲ 18.5, ಲಕ್ಕಸಂದ್ರ 13, ಲಾಲ್‌ಬಾಗ್‌ 8.5, ವಿಶ್ವೇಶ್ವರಪುರ 9, ಚಾಮರಾಜಪೇಟೆ 9, ಕಾಟನ್‌ಪೇಟೆ 10, ದಯಾನಂದ ನಗರ 13, ಹೆಗ್ಗನಹಳ್ಳಿ 12.5, ಪೀಣ್ಯ 8, ಚೊಕ್ಕಸಂದ್ರ 21, ದೊಡ್ಡಬಿದರಕಲ್ಲು 22, ಮಾಚೋಹಳ್ಳಿ 12.5, ಶೆಟ್ಟಿಹಳ್ಳಿ 12.5, ವಿದ್ಯಾರಣ್ಯಪುರ 13, ರಾಮಮೂರ್ತಿನಗರ 12, ಬಸವನಪುರ 8.5, ಕಾಡಗೋಡಿ 17, ಬೆನ್ನಿಗಾನಹಳ್ಳಿ 13.5, ಬಾಣಸವಾಡಿ 12, ಕಮ್ಮನಹಳ್ಳಿ 11.5, ರಾಜಾಜಿನಗರ 18, ಮಾರಪ್ಪನಪಾಳ್ಯ 10, ನಂದಿನಿ ಲೇಔಟ್‌, 15.5, ಕೊಟ್ಟಿಗೆಪಾಳ್ಯ 11 ಮಿ.ಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next