ಮಳೆ ನೀರಿನ ಸಂರಕ್ಷಣೆಯ ಕುರಿತ ಕಲಾಕೃತಿಗಳ ಈ ಧಾಮ, ವಿಜಯಪುರ ಜಿಲ್ಲೆಯ ಭಾರಿಶಪುರದ ಜಲಜಾಗೃತಿ ಕೇಂದ್ರ…
ಇದು ಮಳೆಹನಿಗಳ ಪಾಠ ಹೇಳುವ ಚಿತ್ರಶಾಲೆ. ತಗಡಿನ ಚಾವಣಿಯಿಂದ ಬೀಳುವ ನೀರು, ಇಂಗು ಗುಂಡಿಯ ಪ್ರಾತ್ಯಕ್ಷಿಕೆ, ಬಾವಿಕಟ್ಟೆ, ಕೆರೆ, ಹಳ್ಳ-ಕೊಳ್ಳ ಮತ್ತು ಮಳೆಯಾಗಿ ಹರಿದುಹೋಗುವ ನೀರನ್ನು ಸಂರಕ್ಷಿಸುವ ಬಗೆಗಳು ಇಲ್ಲಿ ಕಲಾ ಮಾದರಿಗಳಾಗಿ, ನೋಡುಗರ ಮನಸ್ಸಿನಲ್ಲಿ ಅಚ್ಚಾಗುತ್ತವೆ.
ಮಳೆ ನೀರಿನ ಸಂರಕ್ಷಣೆಯ ಕುರಿತ ಕಲಾಕೃತಿಗಳ ಈ ಧಾಮ, ವಿಜಯಪುರ ಜಿಲ್ಲೆಯ ಭಾರಿಶಪುರದ ಜಲಜಾಗೃತಿ ಕೇಂದ್ರ. ಮಳೆಯ ಅಷ್ಟೂ ಕತೆಯನ್ನು ಮನಮುಟ್ಟುವಂತೆ ಇಲ್ಲಿ ತೋರಿಸಲಾಗಿದೆ. ಮಳೆ ನೀರನ್ನು ಅಚ್ಚುಕಟ್ಟಾಗಿ ಒಂದೆಡೆ ಸಂಗ್ರಹಿಸುವುದನ್ನು ಕಲಾತ್ಮಕವಾಗಿ, ರೂಪಕಗಳಲ್ಲಿ ಹೇಳಿರುವುದು ಇಲ್ಲಿನ ವಿಶೇಷ.
ಒಂದು ದೊಡ್ಡ ಕಪ್ಪೆಯ ಪ್ರತಿಮೆ ನೀರಿಲ್ಲದೆ, ತಾನಿಲ್ಲ ಎನ್ನುವುದನ್ನು ಇಲ್ಲಿ ಹೇಳುತ್ತಿದೆ. ಕೇಂದ್ರದ ಸುತ್ತ ಕಟ್ಟಿದ ಕಾಂಪೌಂಡಿನ ಮೇಲೆಲ್ಲ ನೀರ ಹನಿಗಳ ಚಿತ್ರಬಿಂಬ. ದೊಡ್ಡ ಕೊಡೆಯ ಕಮಾನು. ಬಾವಿಯಿಂದ ನೀರು ಸೇದುತ್ತಿರುವ ನಾರಿ, ದೊಡ್ಡ ಪಾತ್ರೆ ಹಿಡಿದು ಮಳೆನೀರನ್ನು ಸೆರೆಹಿಡಿಯುತ್ತಿರುವ ಪುಟಾಣಿಗಳು, ಬೊಗಸೆಯನ್ನು ಬಾನಂಗಳಕ್ಕೆ ಚಾಚಿ ನಿಂತ ಪ್ರತಿಮೆ, ಶಾಲೆಯ ಮಕ್ಕಳು ತಮ್ಮ ಬ್ಯಾಗ್‌ನಲ್ಲಿ ಮಳೆ ನೀರನ್ನು ಹಿಡಿದಿಡುವಂಥ ಸಾಹಸದ ದೃಶ್ಯಗಳು- ಮಳೆಜಗತ್ತಿನೊಳಗೆ ಸೆಳೆಯುವಂತಿವೆ.
ಶಾಲಾ ಮಕ್ಕಳಿಗೆ ಈ ಜಲಸಂರಕ್ಷಣಾ ಕೇಂದ್ರ ಬಹಳ ಅಚ್ಚುಮೆಚ್ಚು. ಪ್ರತಿವರ್ಷ ಈ ಕೇಂದ್ರಕ್ಕೆ ಸರಿ ಸುಮಾರು 50 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭೇಟಿ ನೀಡುತ್ತಾರೆ. ಮಳೆ ನೀರಿನ ಸಂಗ್ರಹಣೆ ಮತ್ತು ಸ್ವತ್ಛತೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ.
* ಸವಿತಾ ಆರ್. ವಾಸನದ